ADVERTISEMENT

ಆಲೂರು: ಕಾಮಗಾರಿ ಮುಗಿದರೂ ಮುಕ್ತವಾಗದ ಸೇತುವೆ

ಹಾಸನ, ಅರಕಲಗೂಡು ತಾಲ್ಲೂಕುಗಳಿಗೆ ಸುತ್ತಿ ಬಳಸಿ ಸಂಚಾರ: ರೈತರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 3:51 IST
Last Updated 15 ಆಗಸ್ಟ್ 2025, 3:51 IST
ಆಲೂರು ತಾಲ್ಲೂಕಿನ ಕರಿಗೌಡನಹಳ್ಳಿ ಗ್ರಾಮದ ಸಮೀಪ ನಿರ್ಮಾಣವಾಗಿರುವ ಸೇತುವೆ ಇಕ್ಕೆಲಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು.
ಆಲೂರು ತಾಲ್ಲೂಕಿನ ಕರಿಗೌಡನಹಳ್ಳಿ ಗ್ರಾಮದ ಸಮೀಪ ನಿರ್ಮಾಣವಾಗಿರುವ ಸೇತುವೆ ಇಕ್ಕೆಲಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು.   

ಆಲೂರು: ತಾಲ್ಲೂಕಿನ ಕರಿಗೌಡನಹಳ್ಳಿ ಗ್ರಾಮದ ಸಮೀಪ ಹೇಮಾವತಿ ನದಿಗೆ ಅಡ್ಡಲಾಗಿ ಕೆಆರ್‌ಡಿಸಿಎಲ್‌ನಿಂದ ನಿರ್ಮಿಸಿದ ಹೊಸ ಸೇತುವೆ ಕಾಮಗಾರಿ ಮುಗಿದು ಎರಡು ವರ್ಷಗಳಾದರೂ ಸಂಚಾರಕ್ಕೆ ಅನುಕೂಲವಾಗದೇ ನನೆಗುದ್ದಿಗೆ ಬಿದ್ದಿದೆ.

ತಾಲ್ಲೂಕಿನ ಕರಿಗೌಡನಹಳ್ಳಿ, ಚಾಕನಹಳ್ಳಿ, ಹಸಗನೂರು, ಹಾಸನ ತಾಲ್ಲೂಕಿನ ಬಳ್ಳೆಕೆರೆ, ಮಲ್ಲಿಗೆವಾಳು, ದುಂಡನಾಯಕನಹಳ್ಳಿ ಗ್ರಾಮಸ್ಥರ ಜಮೀನು ಸೇತುವೆ ಇಕ್ಕೆಲಗಳಲ್ಲಿದ್ದರೂ, ಮಳೆಗಾಲದಲ್ಲಿ ಹೇಮವಾತಿ ಜಲಾಶಯ ತುಂಬಿದ ಸಂದರ್ಭದಲ್ಲಿ ತೆಪ್ಪ ಬಳಸಿ, ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಆಲೂರು, ಹಾಸನ ಮತ್ತು ಅರಕಲಗೂಡು ತಾಲ್ಲೂಕುಗಳ ಸಂಬಂಧ ಬೆಸೆಯುವ ಮತ್ತು ಮಡಿಕೇರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.

ADVERTISEMENT

ವಾಹನಗಳಲ್ಲಿ ತೆರಳಬೇಕಾದರೆ ಸುಮಾರು 40 ಕಿ.ಮೀ.ಗಳಿಗೂ ಅಧಿಕ ದೂರ ಕ್ರಮಿಸಿ ಜಮೀನಿಗೆ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಲೂರು ತಾಲ್ಲೂಕು ಭಾಗದ ಜನರು ಗೊರೂರು, ಅರಕಲಗೂಡು, ಹೊಳೆನರಸೀಪುರ, ಮಡಿಕೇರಿ ಜಿಲ್ಲೆ ಸೇರಿದಂತೆ ಈ ಭಾಗಗಳಿಗೆ ತೆರಳಲು ಸುಮಾರು 50-60 ಕಿ.ಮೀ. ಕ್ರಮಿಸಬೇಕಾಗಿದೆ.

ಇಲ್ಲಿ ಸೇತುವ ನಿರ್ಮಾಣ ಮಾಡಬೇಕೆಂದು ನಾಲ್ಕು ಐದು ದಶಕಗಳಿಂದ ಹೋರಾಟ ನಡೆಯುತ್ತಲೇ ಇತ್ತು. ಎಚ್.ಕೆ. ಕುಮಾರಸ್ವಾಮಿ ಶಾಸಕರಾಗಿದ್ದ ಸಂದರ್ಭದಲ್ಲಿ ಸುಮಾರು ₹16 ಕೋಟಿ ವೆಚ್ಚದಲ್ಲಿ ಕೆ.ಆರ್.ಡಿ.ಸಿ.ಎಲ್. ನಿಂದ ಕಾಮಗಾರಿ ನಿರ್ವಹಿಸಿ ಸೇತುವ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಕೆಲ ಅಡೆತಡೆಗಳನ್ನು ಮುಗಿಸಿ ಲೋಕಾರ್ಪಣೆ ಮಾಡಬೇಕು ಎನ್ನುವಷ್ಟರಲ್ಲಿ ರಸ್ತೆಗೆ ಅಗತ್ಯವಿರುವ ಜಾಗದ ಬಗ್ಗೆ ಕೆಲವು ತೊಡಕುಗಳು ಎದುರಾದವು. ತೊಡಕು ಸರಿಪಡಿಸುವಷ್ಟರಲ್ಲಿ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದರಿಂದ ಮುಂದಿನ ಕಾಮಗಾರಿ ನನೆಗುದಿಗೆ ಬಿದ್ದಿದೆ.

ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿರುವುದನ್ನು ಎಇಇ ವೆಂಕಟಲಕ್ಷ್ಮಿ ವೀಕ್ಷಿಸಿದರು.
ಶಾಸಕ ಸಿಮೆಂಟ್ ಮಂಜು ಜಮೀನು ಮಾಲೀಕರ ಮನವೊಲಿಸಿ ಅಡಚಣೆ ನಿವಾರಿಸಿದ್ದು ಸೇತುವೆ ಇಕ್ಕೆಲಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ
ವೆಂಕಟಲಕ್ಷ್ಮಿ ಕೆಆರ್‌ಡಿಸಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಸೇತುವೆ ಇಕ್ಕೆಲಗಳಲ್ಲಿರುವ ಜಮೀನಿಗೆ ತೆರಳಲು 40 ಕಿ.ಮೀ. ದೂರ ಕ್ರಮಿಸಬೇಕಾಗಿದೆ. ರಸ್ತೆ ನಿರ್ಮಾಣ ಪ್ರಾರಂಭವಾಗಿದ್ದು ಶೀಘ್ರ ಸಂಚಾರಕ್ಕೆ ಅನುಕೂಲ ಮಾಡಬೇಕು
ಕೃಷ್ಣೇಗೌಡ ಕರಿಗೌಡನಹಳ್ಳಿ ನಿವೃತ್ತ ನೌಕರ
ಅರಣ್ಯ ಇಲಾಖೆಗೆ ಸಂಬಂಧಿಸಿದ ಕೆಲವು ತೊಡಕು ನಿವಾರಣೆ ಮಾಡಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ. ಮಳೆಗಾಲದ ನಂತರ ಕಾಮಗಾರಿ ಪೂರ್ಣಗೊಳಿಸಲಾಗುವುದು
ಸಿಮೆಂಟ್ ಮಂಜು ಶಾಸಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.