ಕೊಣನೂರು: ಪ್ರಮುಖ ವಾಣಿಜ್ಯ ಬೆಳೆ ಹೊಗೆಸೊಪ್ಪಿನ ಕಟಾವು ಪ್ರಾರಂಭವಾಗಿದ್ದು, ಮಳೆಯ ನಡುವೆಯ ಹೊಗೆಸೊಪ್ಪು ಹದ ಮಾಡುವ ಕೆಲಸವು ಬಿರುಸಿನಿಂದ ಸಾಗಿದೆ.
ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ವ್ಯಾಪ್ತಿಯಯಷ್ಟೇ ಅಲ್ಲದೇ ಅರಕಲಗೂಡು ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆಯಾಗಿರುವ ಹೊಗೆಸೊಪ್ಪಿನ ವಹಿವಾಟು ಕೋಟ್ಯಂತರ ರೂಪಾಯಿ ಲೆಕ್ಕದಲ್ಲಿ ನಡೆಯುತ್ತದೆ. ಈಗಾಗಲೇ ಬೆಳೆ ಕಟಾವಿಗೆ ಬಂದಿದ್ದು, ಬೆಳೆಗಾರರು ಉತ್ಸಾಹದಿಂದ ಹೊಗೆಸೊಪ್ಪು ಹದಮಾಡುವುದರಲ್ಲಿ ಮಗ್ನರಾಗಿದ್ದಾರೆ. ಮೂರು ದಿನಗಳಿಂದ ಮಳೆ ಮತ್ತೆ ಆರಂಭವಾಗಿದ್ದು, ಮಳೆಯನ್ನೂ ಲೆಕ್ಕಿಸದೆ ಕಟಾವು ಮತ್ತು ಹದ ಮಾಡುವಿಕೆ ಮುಂದುವರಿಸಿದ್ದಾರೆ.
ಈ ವರ್ಷ ಏಪ್ರಿಲ್, ಮೇನಲ್ಲಿ ಸತತವಾಗಿ ವಾರಗಟ್ಟಲೆ ಮಳೆ ಸುರಿದಿದ್ದರಿಂದ ಅತಿಯಾದ ತೇವಾಂಶ ಉಂಟಾಗಿದ್ದು, ಹೊಗೆಸೊಪ್ಪು ಗಿಡಗಳ ಬೆಳವಣಿಗೆ ಕುಗ್ಗಿದೆ. ಪ್ರತಿ ವರ್ಷದಂತೆ ಗಿಡಗಳು ಬೆಳವಣಿಗೆ ಆಗದೇ ಹೊಗೆಸೊಪ್ಪು ಉತ್ಪಾದನೆ ತಗ್ಗುವ ಸಾಧ್ಯತೆಗಳು ಹೆಚ್ಚಿವೆ. ನಾಟಿ ಮಾಡಿದ ನಂತರ ಮಾಡಬೇಕಿರುವ ಎಲ್ಲ ಕೃಷಿ ಚಟುವಟಿಕೆಗಳನ್ನು ಮಾಡಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಗಿಡಗಳು ಬೆಳವಣಿಗೆ ಆಗದಿರುವುದು ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ.
ಮಳೆ ಕಡಿಮೆ ಇದ್ದುದರಿಂದ ಏಪ್ರಿಲ್‌ನಲ್ಲಿ ಮೊದಲಿಗೆ ನಾಟಿ ಮಾಡಿದ ಗಿಡಗಳು ಸಾಕಷ್ಟು ಬೆಳವಣಿಗೆ ಆಗಲು ಸಾಧ್ಯವಾಯಿತು. ನಂತರದಲ್ಲಿ ನಾಟಿ ಮಾಡಿದ ಹೊಗೆಸೊಪ್ಪು ಗಿಡಗಳು ಸತತ ಮಳೆಯಿಂದಾಗಿ ಸಮರ್ಪಕವಾಗಿ ಬೇರು ಬಿಡಲು ಮತ್ತು ಬೆಳವಣಿಗೆಯಾಗಲು ಅಡ್ಡಿಯಾಯಿತು.
ಫ್ಲಾಟ್ ಫಾರಂ 7 ರ ವ್ಯಾಪ್ತಿಯಲ್ಲಿ 2025 ರ ಸಾಲಿಗೆ ಒಟ್ಟು ಸುಮಾರು 6,500 ಮತ್ತು ಫ್ಲಾಟ್ ಫಾರಂ 63 ರ ವ್ಯಾಪ್ತಿಯಲ್ಲಿ 5,600 ಹೆಕ್ಟೇರ್‌ನಲ್ಲಿ ಹೊಗೆಸೊಪ್ಪು ನಾಟಿ ಮಾಡಲಾಗಿದೆ. ತಂಬಾಕು ಪರವಾನಗಿ ನವೀಕರಿಸಿಕೊಳ್ಳಲು ಜುಲೈ 4 ಕೊನೆಯ ದಿನವಾಗಿದೆ.
90 ಹೆಕ್ಟೇರ್ ಹೊಗೆಸೊಪ್ಪಿಗೆ ಹಾನಿ
ಅತಿಯಾದ ಮಳೆ ಮತ್ತು ತೇವಾಂಶದ ಪರಿಣಾಮ ಒಟ್ಟು ಸುಮಾರು 90 ಹೆಕ್ಟೇರ್ ಜಮೀನಿನಲ್ಲಿದ್ದ ಹೊಗೆಸೊಪ್ಪು ಬೆಳೆಗೆ ಹಾನಿಯಾಗಿದೆ. ರಾಮನಾಥಪುರದ ತಂಬಾಕು ಮಾರುಕಟ್ಟೆಯ ಫ್ಲಾಟ್ ಫಾರಂ 7ರ ವ್ಯಾಪ್ತಿಯ 39 ಬೆಳೆಗಾರರ ಹೊಗೆಸೊಪ್ಪು ಬೆಳೆಯು ಭಾಗಶಃ ಹಾನಿಯಾಗಿದೆ. 9 ಬೆಳೆಗಾರರ ಬೆಳೆ ಸಂಪೂರ್ಣ ಹಾನಿಯಾಗಿದೆ. ಫ್ಲಾಟ್ ಫಾರಂ 63 ರ ವ್ಯಾಪ್ತಿಯ 72 ಬೆಳೆಗಾರರು ಬೆಳೆ ಭಾಗಶಃ ಹಾನಿ ಮತ್ತು 3 ಬೆಳೆಗಾರರ ಬೆಳೆಯು ಪೂರ್ಣ ಹಾನಿಯಾಗಿದೆ.
ಸತತವಾಗಿ ಸುರಿದ ಮಳೆಯಿಂದ ಹೊಗೆಸೊಪ್ಪು ಗಿಡಗಳು ಗೊಬ್ಬರ ಹೀರಿಕೊಳ್ಳಲು ಆಗಿಲ್ಲ. ಅತಿಯಾದ ತೇವಾಂಶದಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿದ್ದು ಉತ್ಪಾದನೆಯ ಮೇಲೆ ಹೊಡೆಯ ಬೀಳಲಿದೆರವಿ ಲಕ್ಕನಹಳ್ಳಿ, ತಂಬಾಕು ಬೆಳೆಗಾರ
ರೈತರು ಪ್ರತಿ ವರ್ಷದಂತೆ ಗೊಬ್ಬರ ನೀಡಿ ಅಗತ್ಯ ಕೃಷಿ ಚಟುವಟಿಕೆ ನಡೆಸಿದ್ದರೂ ನೀರಿಕ್ಷಿತ ಪ್ರಮಾಣದಲ್ಲಿ ಗಿಡಗಳು ಬೆಳವಣಿಗೆ ಆಗಿಲ್ಲ. ಸತತ ಮಳೆ ಮತ್ತು ಹೆಚ್ಚಿದ ತೇವಾಂಶವೇ ಇದಕ್ಕೆ ಕಾರಣಸವಿತಾ ರಾಮನಾಥಪುರ, ತಂಬಾಕು ಮಾರುಕಟ್ಟೆ ಅಧೀಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.