ADVERTISEMENT

ಬುದ್ಧ, ಬಸವ, ಅಂಬೇಡ್ಕರ್‌ ತತ್ವ ಪಾಲಿಸಿ: ಶಿವಲಿಂಗೇಗೌಡ

ಕನಕದಾಸ ಜಯಂತಿ, ರಾಯಣ್ಣ ಪುತ್ಥಳಿ ಸ್ಥಾಪನೆಗೆ ಭೂಮಿಪೂಜೆ: ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 1:41 IST
Last Updated 24 ನವೆಂಬರ್ 2025, 1:41 IST
<div class="paragraphs"><p>ಅರಸೀಕೆರೆಯಲ್ಲಿ ಭಾನುವಾರ ನಡೆದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್‌, ಜ್ಯೋತಿ ಬೆಳಗಿದರು</p></div>

ಅರಸೀಕೆರೆಯಲ್ಲಿ ಭಾನುವಾರ ನಡೆದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್‌, ಜ್ಯೋತಿ ಬೆಳಗಿದರು

   

ಅರಸೀಕೆರೆ: ಅಂಬೇಡ್ಕರ್‌ ಸಂವಿಧಾನದ ಆಶಯದಂತೆ ಈ ದೇಶದ ಪ್ರಧಾನಿಯಿಂದ ಹಿಡಿದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾನ ಅವಕಾಶ ನೀಡಲಾಗಿದೆ. ಬುದ್ಧ, ಬಸವ, ಅಂಬೇಡ್ಕರ್‌ ಅವರ ತತ್ವ–ಸಿದ್ಧಾಂತದ ಅಡಿಯಲ್ಲಿ ಎಲ್ಲರೂ ನಡೆಯಬೇಕು ಎಂದು ಶಾಸಕ, ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದ ಹಳೇ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಭಕ್ತ ಕನಕದಾಸ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಚರಣಾ ಸಮಿತಿ ಹಾಗೂ ಕುರುಬರ ಸಂಘಗಳ ಒಕ್ಕೂಟ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನಕದಾಸರ 538ನೇ ಜಯಂತ್ಯುತ್ಸವ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ADVERTISEMENT

ಈ ಧರೆಯಲ್ಲಿ ಬಸವಣ್ಣನವರು ಜನ್ಮ ತಾಳದಿದ್ದರೆ ಜಾತೀಯತೆ ತಾಂಡವವಾಡಿ ಮನುಷ್ಯ ಮನುಷ್ಯನನ್ನು ಕಿತ್ತಿ ತಿನ್ನುವಂತ ವ್ಯವಸ್ಥೆ ರೂಪಗೊಳ್ಳುತ್ತಿತ್ತು. 12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ಕೊಡುಗೆ ಪ್ರಪಂಚಕ್ಕೆ ಮಾದರಿಯಾಗಿದೆ. ಕನಕದಾಸರು ತಮ್ಮ ಕೀರ್ತನೆಯ ಮೂಲಕ ಸಮಾಜಕ್ಕೆ ನೀಡಿದ ಸಮಾನತೆ ಸಂದೇಶವಾಗಿದೆ. ಅವರ ಸಂದೇಶಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರೂ ಬದುಕಬೇಕು ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಎಲ್ಲ ದಾರ್ಶನಿಕರ ಜಯಂತಿ ಆಚರಿಸುವ ಮೂಲಕ ಎಲ್ಲ ಸಮಾಜಗಳನ್ನು ಗುರುತಿಸುವ ಕೆಲಸ ಮಾಡಲಾಗಿದೆ. ದೇಶದಲ್ಲಿ ಮಾದರಿ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು.

‘ಕ್ಷೇತ್ರದಲ್ಲಿ ಕೇವಲ ಮತ ಗಳಿಕೆಗಾಗಿ ರಾಜಕೀಯ ಮಾಡುವುದಿಲ್ಲ. 36 ಸಮಾಜಗಳ ಅಭಿವೃದ್ಧಿಗೂ ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಸತತ 4 ಬಾರಿ ಶಾಸಕರಾಗಿ ಆಯ್ಕೆ ಮಾಡಿರುವ ನಿಮ್ಮಗಳ ಋಣ ತೀರಿಸುವ ಕೆಲಸವನ್ನು ಮಾಡ ಲಾಗಿದ್ದು, ಮುಂದಿನ ದಿನಗಳಲ್ಲಿಯೂ ಕೆಲಸ ನನ್ನ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಎತ್ತಿನಹೊಳೆಯ ಮೂಲಕ ಹೇಮಾವತಿ ನದಿ ನೀರು, ಭದ್ರಾ ಮೇಲ್ದಂಡೆಯ ಕ್ಷೇತ್ರದ ಎಲ್ಲ ಹೋಬಳಿಗಳ ಕೆರೆಗಳಿಗೂ ನೀರು ಹರಿಸಲಾಗುವುದು’ ಎಂದು ಹೇಳಿದರು.

ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಟೇಲ್‌ ಶಿವಪ್ಪ, ‘ಎಲ್ಲ ಸಮಾಜಗಳ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಸಿದ್ದರಾಮಯ್ಯ ಆಧುನಿಕ ಬಸವಣ್ಣ ಅಥವಾ 2ನೇ ಬಸವಣ್ಣ ಎಂದರೇ ತಪ್ಪಾಗದು. 4 ನೇ ಬಾರಿ ಶಾಸಕರಾಗಿ ಎಲ್ಲರ ಮನಸ್ಸಲ್ಲಿ ಇರುವ ಶಾಸಕ ಶಿವಲಿಂಗೇಗೌಡರಿಗೆ ಈ ಬಾರಿ ಸಚಿವ ಸ್ಥಾನ ನೀಡುವಂತೆ ಎಂದು ಸಮಾಜದ ಮೂಲಕ ಮನವಿ ಮಾಡುತ್ತೇನೆ’ ಎಂದರು.

ಅಯ್ಯಪ್ಪ ಸ್ವಾಮಿ ದೇವಸ್ಥಾನ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘಕ್ಕೆ ನಿವೇಶನ ನೀಡಿದ ನಾಗಣ್ಣ ಅವರನ್ನು ಗೌರವಿಸಲಾಯಿತು.

ಕುರುಬ ಸಮಾಜ ತಾಲ್ಲೂಕು ಘಟಕದ ಅಧ್ಯಕ್ಷ ತೊಂಡಿಗನಹಳ್ಳಿ ಕೃಷ್ಣಮೂರ್ತಿ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಕುರುಬರ ಸಂಘದ ಅಧ್ಯಕ್ಷ ಬಿಳಿಚೌಡಯ್ಯ, ಕನಕ ನೌಕರರ ಸಂಘ ಅಧ್ಯಕ್ಷ ಬಸವರಾಜು, ರಾಯಣ್ಣ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಪಿ.ಶ್ರುತಿಮೋಹನ್‌, ಅಹಲ್ಯಾಬಾಯಿ ಹೋಳ್ಕರ್‌ ಪತ್ತಿನ ಮಹಿಳಾ ಸಹಕಾರ ಸಂಘ ಬಾಣಾವರ ಅಧ್ಯಕ್ಷೆ ಶಿಲ್ಪಾ ಚಂದ್ರು, ಆಚರಣಾ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್‌ ಎಚ್.ಎನ್., ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್‌ ಮೇಸ್ತ್ರಿ, ತಹಶೀಲ್ದಾರ್‌ ಸಂತೋಷ್‌ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ಕುಮಾರ್‌, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಕಿರಣ್‌ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌, ವೈದ್ಯ ಶಿವಕುಮಾರ್‌, ವಿವಿಧ ಸಮಾಜಗಳ ಅಧ್ಯಕ್ಷರು, ಕುರುಬ ಸಮಾಜದವರು, ಸಾರ್ವಜನಿಕರು ಪಾಲ್ಗೊಂಡಿದ್ದರು.ಹಾಸನ: ಲೇಖಕಿಯರು ಕಥೆ, ಕವನ, ಕಾದಂಬರಿಗಳ ಜೊತೆಯಲ್ಲಿ ವಿಮರ್ಶಾ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಬೇಕು. ಎಲ್ಲ ಬರಹಗಳು ವಿಮರ್ಶೆಯ ಮಾನದಂಡಕ್ಕೆ ಒಳಪಡಬೇಕು ಎಂದು ಕವಯತ್ರಿ ಡಾ. ಹೇಮಾ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯ ರಜತ ಸಂಭ್ರಮ ಅಂಗವಾಗಿ ನಗರದ ಎ.ವಿ.ಕೆ.ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಲೇಖಿಕಾ ಸಾಹಿತ್ಯ ವೇದಿಕೆಯ ಸಂಸ್ಥಾಪಕಿ ಶೈಲಜಾ ಸುರೇಶ್ ಮಾತನಾಡಿ, ‘ಲೇಖಿಕಾ ಸಾಹಿತ್ಯ ವೇದಿಕೆಗೆ 25 ವರ್ಷ ತುಂಬಿದ ಪ್ರಯುಕ್ತ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಇದರ ಸಂಚಾಲಕಿಯಾಗಿ ಹುಟ್ಟೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಸಾರ್ಥಕ ಭಾವ ತಂದಿದೆ’ ಎಂದರು.

ಕವಿಗೋಷ್ಠಿಯಲ್ಲಿ ಬೆಂಗಳೂರಿನ ಸ್ವರ್ಣಗೌರಿ, ಹೇಮಾ ದೇಸಾಯಿ, ಶಾಂತಿ ವಾಸು, ಅಕ್ಷಯ ಮರಾಟೆ, ಅರುಣಾರಾವ್, ವಿಭಾ ಪುರೋಹಿತ್, ರತ್ನಾ ನಾಗರಾಜ್, ಸವಿತಾ ನಾಗೇಶ್, ರಾಣಿ ವಿ. ಗೋವಿಂದರಾಜು, ದೀಪಾ ಜಿ.ಸುಬ್ರಹ್ಮಣ್ಯ, ಗಾಯತ್ರಿ ಬಿ.ಜಿ., ಶಾಂತಾ ಜಯಾನಂದ, ಮೈಸೂರಿನ ಸುಜಾತಾ ರವೀಶ್, ಕೆ.ಟಿ.ವಾಣಿಸುಬ್ಬಯ್ಯ, ಮಡಿಕೇರಿಯ ಸಹನಾ ಕಾಂತಬೈಲು, ಕಾರ್ಕಳದ ಜ್ಯೋತಿ ಗುರುಪ್ರಸಾದ್, ಗೋಕಾಕದ ಪುಷ್ಟಾ ಮುರುಗೋಡ, ಹಾಸನದ ಡಾ. ಶಾಂತಾ ಅತ್ನಿ, ಪರಮೇಶ್ ಮಡಬಲು, ವನಜಾ ಸುರೇಶ್, ಸುಳ್ಯದ ಡಾ. ವೀಣಾ ಭಾಗವಹಿಸಿದ್ದರು.

ಎಲ್ಲ ಕವಿಗಳಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ, ಪುಸ್ತಕ ನೀಡಿ ಗೌರವಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ 25 ಸಾಧಕರಿಗೆ ‘ಲೇಖಿಕಾ ಶ್ರಿ 2025’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಾಹಿತಿ ಗೊರೂರು ಅನಂತರಾಜು, ಎನ್.ಎಲ್. ಚನ್ನೇಗೌಡ, ಉದಯರವಿ, ಲೀಲಾವತಿ, ಸುಕನ್ಯಾ ಮುಕುಂದ, ಸುಮಾ ವೀಣಾ, ಪ್ರಭಾ ದಿನಮಣಿ, ಧಾರವಾಡದ ದಮಯಂತಿ ನರೇಗಲ್, ವಿದ್ಯಾ ಶಿರಹಟ್ಟಿ, ರೂಪಾ ಜೋಶಿ, ಮೈಸೂರಿನ ಡಾ. ಕರುಣಾ ಲಕ್ಷ್ಮಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯು ನಡೆಸಿದ ತ್ರಿವೇಣಿ ಮನೋವೈಜ್ಞಾನಿಕ ಕಥಾ ಸ್ಫರ್ಧೆ ವಿಜೇತರಾದ ವಿದ್ಯಾಶಿರಹಟ್ಟಿ ಪ್ರಥಮ, ಎಸ್.ರಘುನಂದನ್ ದ್ವಿತೀಯ, ಡಾ. ಇಂದಿರಾ ದೊಡ್ಡಬಳ್ಳಾಪುರ ತೃತೀಯ ಮತ್ತು ಜ್ಯೋತಿ ಗುರುಪ್ರಸಾದ್ ಕಾರ್ಕಳ ಮೆಚ್ಚುಗೆಯ ನಗದು ಬಹುಮಾನ ಪಡೆದರು.

ಕಾಲೇಜಿನ ಪ್ರಾಂಶುಪಾಲ ಡಾ.ಸೀ.ಚ. ಯತೀಶ್ವರ, ವೆಂಕಟೇಶ್, ಡಾ.ವಿಜಯ, ಡಾ.ಸಾವಿತ್ರಿ, ಉಮಾಶಂಕರ್ ವೇದಿಕೆಯಲ್ಲಿದ್ದರು. ದೊಡ್ಡಬಳ್ಳಾಪುರದ ಡಾ. ಇಂದಿರಾ ಮತ್ತು ನಾಗವೇಣಿ ರಮನಗನ್ ತಂಡದವರಿಂದ ಕಿರುನಾಟಕ ಮತ್ತು ವಿದ್ಯಾ ಶಿರಹಟ್ಟಿ ತಂಡದವರಿಂದ ಕವ್ವಾಲಿ ಕಾರ್ಯಕ್ರಮ ನಡೆಯಿತು.

ಸಮಾನತೆ ಸಾರಿದ ಕನಕದಾಸರು

‘ಸಮಾಜದಲ್ಲಿನ ಅಸಮಾನತೆಗಳನ್ನು ತೊಡೆದು ಹಾಕಿ ಸಮ ಸಮಾಜ ನಿರ್ಮಿಸುವುದೇ ಸಂತ ಕವಿ ಕನಕದಾಸರ ಆಶಯವಾಗಿತ್ತು’ ಎಂದು ಕೆ.ಆರ್. ನಗರದ ಕಾಗಿನೆಲೆ ಪೀಠದ ಶಿವಾನಂದಾಪುರಿ ಸ್ವಾಮೀಜಿ ಹೇಳಿದರು.

‘ಕನಕದಾಸರ ಕೀರ್ತನೆಯಂತೆ ಮನುಷ್ಯನಲ್ಲಿರುವ ನಾನು ಎಂಬ ಅಹಂ ದೂರವಾಗಬೇಕು. ಈ ನೆಲ, ಜಲ, ಗಾಳಿ ಎಲ್ಲರಿಗೂ ಒಂದೇ ಆಗಿರುವಾಗ, ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಅವಶ್ಯಕತೆಯಿಲ್ಲ ಎಂದು ತಿಳಿ ಹೇಳಿದ್ದಾರೆ. ಆದರೆ, ಇಂದಿಗೂ ಸಮ ಸಮಾಜ ಸೃಷ್ಟಿ ಆಗುವಲ್ಲಿ ಕೆಲವು ತೊಡಕುಗಳು ಎದುರಾಗುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಶಾಸಕ ಶಿವಲಿಂಗೇಗೌಡರು ಅರಸೀಕೆರೆ ಕ್ಷೇತ್ರಕ್ಕೆ ಮಾಡಿರುವ ಸೇವೆ ಅವಿಸ್ಮರಣೀಯ. ಅವರ ಮತ್ತಷ್ಟು ಪ್ರಗತಿಪರ ಕೆಲಸಗಳಿಗೆ ಸಚಿವ ಸ್ಥಾನ ಸಿಗಲಿ’ ಎಂದು ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.