
ಅರಸಿಕೆರೆ: ತಾಲ್ಲೂಕಿನ ಬೆಂಡೆಕೆರೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಭೂ ಸ್ವಾಧೀನದ ಪರಿಹಾರ ದರ ನಿಗದಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದ ರೈತರು, ರಸ್ತೆಯ ಮಧ್ಯೆ ಮಲಗಿ ಪ್ರತಿಭಟನೆ ನಡೆಸಿದರು.
ಮನೆ ಮತ್ತು ಜಮೀನು ವಶಕ್ಕೆ ಪಡೆಯುವ ಮೊದಲು ಯಾವುದೇ ಮುನ್ಸೂಚನೆ ನೀಡದ ಜಿಲ್ಲಾಡಳಿತ, ಸೋಮವಾರ ಜೆಸಿಬಿ ಸಹಾಯದಿಂದ ಕಾಮಗಾರಿ ಪ್ರಾರಂಭಿಸಲು ಯತ್ನಿಸಿದ್ದು, ಅದಕ್ಕೆ ಗ್ರಾಮದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಸ್ಥಳದಲ್ಲಿ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ರೈತರ ಜೊತೆಗೆ ಮಾತುಕತೆ ನಡೆಸಿದರು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ತಹಶೀಲ್ದಾರ್ ಸಂತೋಷ್ ಕುಮಾರ್ ಅವರಿಂದ ಮಾಹಿತಿ ಸಂಗ್ರಹಿಸಿದ ಜಿಲ್ಲಾಧಿಕಾರಿ ಲತಾಕುಮಾರಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಬರುವಂತೆ ಪ್ರತಿಭಟನಾ ನಿರತ ರೈತರಿಗೆ ಸೂಚನೆ ನೀಡಿದ ಅವರು, ಸಂಬಂಧಪಟ್ಟ ದಾಖಲೆ ತರಲು ತಿಳಿಸಿದರು. ಪಹಣಿಯಲ್ಲಿ ಆಗಿರುವ ದೋಷವನ್ನು ಎರಡು ವಾರಗಳಲ್ಲಿ ಸರಿಪಡಿಸಲು ತಹಶೀಲ್ದಾರ್‌ಗೆ ನಿರ್ದೇಶನ ನೀಡಿದರು.
ಜಾಜೂರು ಗ್ರಾಮದಲ್ಲಿ ನೀಡಿದ ಪರಿಹಾರವನ್ನೇ ಬೆಂಡೆಕೆರೆಯ ರೈತರ ಭೂಮಿಗೂ ನೀಡಬೇಕು ಎಂದು ರೈತರು ಆಗ್ರಹಿಸಿದರು.
ಸರ್ಕಾರಿ ಜಾಗ ಹೊರತುಪಡಿಸಿ, ರೈತರ ಭೂಮಿಯಲ್ಲಿ ಯಾವುದೇ ಕಾಮಗಾರಿ ಮಾಡಬಾರದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಕುಮಾರ್, ತಹಶೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ಬಾಣಾವರ ಹೋಬಳಿ ರಾಜಸ್ವ ನಿರೀಕ್ಷಕ ಮಧು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಈ ಪ್ರತಿಭಟನೆಯಿಂದಾಗಿ ಬೆಂಡೆಕೆರೆಯಲ್ಲಿ ಹಲವು ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಮನೆಗೆ ಡಿಸಿ ಭೇಟಿ: ಸಂತ್ರಸ್ತ ರೈತರ ಮನೆಗೆ ಡಿಸಿ ಭೇಟಿ ನಂತರ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಯೋಜನೆಯ ಸಂತ್ರಸ್ತ ರೈತರ ಮನೆಗೆ ಭೇಟಿ ನೀಡಿ ಹಾಲು ಕುಡಿದು ಅರಿಶಿನ-ಕುಂಕುಮ ಪಡೆದರು. ಪ್ರತಿಭಟನೆ ಸ್ಥಳದಲ್ಲಿ ಹಾಜರಿದ್ದ ಯೋಜನಾ ಸಂತ್ರಸ್ತ ರೈತರ ಅಂಗವಿಕಲ ತಾಯಿಗೆ ₹ 2ಸಾವಿರ ಅಂಗವಿಕಲರ ವೇತನ ನೀಡುವಂತೆ ತಕ್ಷಣ ಆದೇಶ ಹೊರಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.