ADVERTISEMENT

ಉಚಿತ ಬಸ್‌ಪಾಸ್‌ಗೆ ಒತ್ತಾಯ: ಹೇಮಾವತಿ ಪ್ರತಿಮೆ ಬಳಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 15:12 IST
Last Updated 4 ಅಕ್ಟೋಬರ್ 2021, 15:12 IST
ಹಾಸನ ಹೇಮಾವತಿ ಪ್ರತಿಮೆ ಎದುರು ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಹಾಸನ ಹೇಮಾವತಿ ಪ್ರತಿಮೆ ಎದುರು ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ಹಾಸನ: ಉಚಿತ ಬಸ್ ಪಾಸ್ ವಿತರಣೆ ಮಾಡುವಂತೆ ಆಗ್ರಹಿಸಿ ಎಐಡಿಎಸ್‍ಒ ಸಂಘಟನೆ ನೇತೃತ್ವದಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಹಿಂದಿನ ವರ್ಷದ ಬಸ್ ಪಾಸ್ ಅವಧಿ ಮುಗಿದಿರುವುದರಿಂದ ವಿದ್ಯಾರ್ಥಿಗಳು ಬಸ್ ಟಿಕೆಟ್ ಪಡೆದು ಓಡಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಟಿಕೆಟ್ ದರ ಹೊರೆಯಾಗಿ ಪರಿಣಮಿಸಿದೆ. ಲಾಕ್‍ಡೌನ್ ಘೋಷಣೆ ಮಾಡಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಕಳೆದ ವರ್ಷ ನೀಡಿದ್ದ ಬಸ್ ಪಾಸ್ ಅರ್ಧ ವರ್ಷವೂ ಬಳಕೆಯಾಗಿಲ್ಲ. ಈಗ ಮತ್ತೊಮ್ಮೆ ವಿದ್ಯಾರ್ಥಿಗಳು ವಾರ್ಷಿಕ ಬಸ್‍ಪಾಸ್‍ನ ಸಂಪೂರ್ಣ ವೆಚ್ಚ ಭರಿಸಿ ಪಡೆಯಬೇಕಾದರೆ ಆರ್ಥಿಕ ಹೊರೆ ಬೀಳುವುದರಿಂದ ಉಚಿತ ಬಸ್‍ಪಾಸ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ವಿತರಿಸುವವರೆಗೂ ಹಿಂದಿನ ವರ್ಷದ ಪಾಸ್ ಅಥವಾ ಶಾಲಾ- ಕಾಲೇಜಿನ ಗುರುತಿನ ಚೀಟಿಯೊಂದಿಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣಿಸಲುಅನುಮತಿ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ADVERTISEMENT

ಎಐಡಿಎಸ್‍ಒ ಜಿಲ್ಲಾ ಸಹ ಸಂಚಾಲಕಿ ಚೈತ್ರಾ, ವಿದ್ಯಾರ್ಥಿಗಳಾದ ಸುಷ್ಮಿತಾ, ಅಂಕಿತ, ಚಿರಂತ್,ಅಮಿತ್, ಸ್ಫೂರ್ತಿ ಹಾಗೂ ಬಿಂದು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.