ADVERTISEMENT

ಕಡತ ನಾಶ | ದೇವರಾಜ ಅರಸು ನಿಗಮದಲ್ಲಿ ಅವ್ಯವಹಾರ: ದೂರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:21 IST
Last Updated 23 ಜುಲೈ 2024, 16:21 IST

ಹಾಸನ: ‘ಇಲ್ಲಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿದ್ದು, ಸರ್ಕಾರದ ಅನುಮತಿ ಇಲ್ಲದೆ, ಖಾಸಗಿ ಜಾಗದಲ್ಲಿ ರಾತೋರಾತ್ರಿ ಕಡತ ನಾಶ ಮಾಡಲಾಗಿದೆ’ ಎಂದು ಕುರುವಂಕ ಗ್ರಾಮ ಪಂಚಾಯಿತಿ ಸದಸ್ಯ, ಜೆಡಿಎಸ್ ಮುಖಂಡ ಉಮೇಶ್‌ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ನಿಗಮದ್ದು ಎನ್ನಲಾದ ದಾಖಲೆಗಳನ್ನು ಸುಡುತ್ತಿರುವ ವಿಡಿಯೊಗಳ ಸಹಿತ ದೂರು ನೀಡಿರುವ ಅವರು, ‘ಮಧ್ಯವರ್ತಿಗಳ ಜೊತೆಗೆ ಸೇರಿ ಸರ್ಕಾರಿ ಯೋಜನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗೇಂದ್ರ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ನಾಗೇಂದ್ರ ಅವರು ಮಧ್ಯವರ್ತಿ ಶಿವರಾಜ್‌ ಎಂಬುವರೊಂದಿಗೆ ಸೇರಿ, ಅವರ ತಾಯಿಯ ಹೆಸರಿನಲ್ಲಿರುವ ಅರಸೀಕೆರೆ ತಾಲ್ಲೂಕಿನ ಹೆಬ್ಬನಘಟ್ಟ ಗ್ರಾಮದ ಜಮೀನಿನಲ್ಲಿ ಜುಲೈ 7ರಿಂದ 10ರವರೆಗೆ ನಿಗಮಕ್ಕೆ ಸೇರಿದ ಹಿಂದಿನ ದಾಖಲೆಗಳನ್ನು ಸುಟ್ಟು ಹಾಕಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

‘ಹಿಂದಿನ ಜಿಲ್ಲಾ ವ್ಯವಸ್ಥಾಪಕರಾದ ಕೃಷ್ಣಕುಮಾರ್‌, ಶಿವಣ್ಣ, ಕರಿಯಪ್ಪ ಅವರ ಅವಧಿಯಲ್ಲೂ ನಿಯಮಗಳನ್ನು ಉಲ್ಲಂಘಿಸಲಾಗಿದೆ. ನೇರ ಸಾಲ, ಶೈಕ್ಷಣಿಕ ಸಾಲ, ಭೂ ಖರೀದಿ ಸಾಲ, ವಾಹನ ಖರೀದಿ ಸಾಲ, ಗಂಗಾ ಕಲ್ಯಾಣ ಯೋಜನೆಗಳಲ್ಲಿ ಅವ್ಯವಹಾರ ನಡೆಸಿದ್ದು, ಸಂಬಂಧಿಗಳಿಗೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ಕೂಡಲೇ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ನಾಗೇಂದ್ರ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಲು ಪ್ರಯತ್ನಿಸಿದರೂ, ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.