ADVERTISEMENT

ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ: ಶಾಸಕ ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 16:50 IST
Last Updated 7 ಮಾರ್ಚ್ 2021, 16:50 IST
ಶಿವಲಿಂಗೇಗೌಡ
ಶಿವಲಿಂಗೇಗೌಡ   

ಅರಸೀಕೆರೆ: ‘ಸರ್ಕಾರ ತೆರೆದಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ನಾಪೆಡ್ ಹಾಗೂ ಕೃಷಿ ಅಧಿಕಾರಿಗಳು ರೈತರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಸೇರಿದಂತೆ, ಖರೀದಿ ಹಾಗೂ ತೂಕದಲ್ಲಿ ಭಾರಿ ಅವ್ಯವಹಾರ ನಡೆಸುವ ಮೂಲಕ ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಗ್ರಹಿಸಿದರು .

‘ನಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಪೆಡ್ ಕೇಂದ್ರಗಳಾದ ಜೆ.ಸಿ. ಪುರ ಕೇಂದ್ರದಲ್ಲಿ 19 ಸಾವಿರ, ಬಾಣಾವರದಲ್ಲಿ 26 ಸಾವಿರ, ಗಂಡಸಿ ಕೇಂದ್ರದಲ್ಲಿ 96 ಸಾವಿರ, ಒಟ್ಟು 1,41,000 ಕ್ವಿಂಟಲ್ ರಾಗಿಯನ್ನು ಈಗಾಗಲೇ ಖರೀದಿಸಲಾಗಿದೆ’ ಎಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ರಾಗಿ ಮಾರಾಟಕ್ಕೆ ಬರುತ್ತಿರುವ ರೈತರನ್ನು ಉದ್ದೇಶ ಪೂರ್ವಕವಾಗಿ ಹಲವು ಕಾರಣ ಹೇಳುತ್ತಾ, ಎರಡ್ಮೂರು ದಿನ ಖರೀದಿ ಮಾಡದೇ ಸತಾಯಿಸಿದರೆ, ಬೇಸತ್ತ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ ಎಂಬ ದುರುದ್ದೇಶ ಹಾಗೂ ತೂಕದಲ್ಲಿ ಭಾರಿ ಮೋಸ ಮಾಡುತ್ತಿರುವುದರ ಬಗ್ಗೆ ತಾಲ್ಲೂಕಿನ ನೂರಾರು ರೈತರು ನನ್ನ ಬಳಿ ಅಳಲು ತೋಡಿಕೊಂಡರು. ಈ ಹಿನ್ನೆಲೆಯಲ್ಲಿ ವಿಧಾನಸಭಾ ಅಧಿವೇಶನವನ್ನು ಮೊಟಕುಗೊಳಿಸಿ ನಾಪೆಡ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಅವ್ಯವಹಾರ ನಡೆಯುತ್ತಿರುವುದು ಸತ್ಯ ಎಂಬ ಅಂಶ ಗಮನಕ್ಕೆ ಬಂದಿದೆ’ ಎಂದು ತಿಳಿಸಿದರು.

ADVERTISEMENT

‘ರಾಗಿ ಖರೀದಿ ಕೇಂದ್ರಗಳಲ್ಲಿ ಹಮಾಲಿಗಳು ರೈತರಿಂದ ಒಂದು ರಾಗಿ ಚೀಲಕ್ಕೆ ಹೆಚ್ಚುವರಿಯಾಗಿ ₹ 40 ಪಡೆಯುತ್ತಿರುವುದು ಹಾಗೂ ತೂಕದಲ್ಲಿ, 50 ಕೆ.ಜಿ ರಾಗಿಯ ಬದಲಿಗೆ 52 ಕೆ.ಜಿ ತೂಕ ಮಾಡಿ 2 ಕೆ.ಜಿ ಹೆಚ್ಚು ರಾಗಿಯನ್ನು ತೂಕ ಹಾಕಿ ರೈತರಿಗೆ ತೂಕದಲ್ಲೂ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಜತೆಗೆ ಅಧಿಕಾರಿಗಳು ಹಾಗೂ ಸಾರಿಗೆ ಗುತ್ತಿಗೆದಾರರು ಶಾಮೀಲಾಗಿ ಸರ್ಕಾರ ನಿಗದಿಪಡಿಸಿರುವ ಕ್ವಿಂಟಲ್‌ಗೆ ₹ 3,295 ಬದಲಿಗೆ ₹ 2,300ಗೆ ರಾಗಿ ಖರೀದಿಸುತ್ತಿರುವುದು, ಗ್ರೇಡಿಂಗ್ ಮಾಡುವಲ್ಲಿ ಕೃಷಿ ಅಧಿಕಾರಿಗಳು ರೈತರಿಂದ ಹಣ ವಸೂಲಿ ಮಾಡುತ್ತಿರುವುದು ಸೇರಿದಂತೆ ನಾಪೆಡ್ ಕೇಂದ್ರಗಳಲ್ಲಿ ಅವ್ಯವಹಾರದ ದಂಧೆ ನಡೆಯುತ್ತಿದೆ’ ಎಂದು ಶಿವಲಿಂಗೇಗೌಡ ಆರೋಪಿಸಿದರು.

‘ಈ ಕುರಿತು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗಮನಕ್ಕೆ ತರಲಾಗಿದೆ. ಈ ರಾಗಿ ಖರೀದಿ ಕೇಂದ್ರಗಳಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಿ, ಅವ್ಯವಹಾರದಲ್ಲಿ ಭಾಗಿಯಾಗಿರುವರಿಗೆ ಶಿಕ್ಷೆಯಾಗಬೇಕು, ತಾಲ್ಲೂಕಿನ ರೈತರಿಗೆ ಅನ್ಯಾಯವಾಗದಂತೆ ತಡೆಯಲು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್ ಮುಖಂಡರಾದ ಧರ್ಮಶೇಖರ್ ಹಾಗೂ ರಾಮಚಂದ್ರ ಚಗಚಗೆರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.