ADVERTISEMENT

ಹಾಸನ | ದುರಸ್ತಿಗೆ ಕಾದಿರುವ ನಾಲೆಗಳು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:56 IST
Last Updated 8 ಡಿಸೆಂಬರ್ 2025, 5:56 IST
ಆಲೂರು ಕಸಬಾ ಮರಸು ಹೊಸಳ್ಳಿ ಬಳಿ ವಾಟೆಹೊಳೆ ನಾಲೆ ಒಡೆದಿರುವುದನ್ನು ಎಇಇ ಧರ್ಮರಾಜ್ ಪರಿಶೀಲನೆ ನಡೆಸಿದರು.
ಆಲೂರು ಕಸಬಾ ಮರಸು ಹೊಸಳ್ಳಿ ಬಳಿ ವಾಟೆಹೊಳೆ ನಾಲೆ ಒಡೆದಿರುವುದನ್ನು ಎಇಇ ಧರ್ಮರಾಜ್ ಪರಿಶೀಲನೆ ನಡೆಸಿದರು.   

ಆಲೂರು: ಕ್ಷೇತ್ರದಲ್ಲಿ ಹರಿಯುತ್ತಿರುವ ಯಗಚಿ, ವಾಟೆಹೊಳೆ ಜಲಾಶಯಕ್ಕೆ ಹೊಂದಿಕೊಂಡಿರುವ ನಾಲೆಗಳು ಹೂಳು ತುಂಬಿ ದಶಕಗಳೇ ಕಳೆದಿವೆ. ನಿರ್ಮಾಣ ಆದಂದಿನಿಂದ ದುರಸ್ತಿ ಕಾಣದ ಈ ನಾಲೆಗಳಿಂದ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ಸಿಗದಂತಾಗಿದೆ. ನಾಲೆಗಳ ಹೂಳು ತೆಗೆದು, ದುರಸ್ತಿ ಮಾಡಿದಲ್ಲಿ ರೈತರಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಶಾಸಕ ಸಿಮೆಂಟ್ ಮಂಜು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ನಾಲ್ಕು ದಶಕಗಳಿಂದ ಯಗಚಿ ಮತ್ತು ವಾಟೆಹೊಳೆ ಜಲಾಶಯಗಳ ನಾಲೆಗಳು ಸಂಪೂರ್ಣ ಹೂಳು ತುಂಬಿವೆ. ಸುಮಾರು 20 ಸಾವಿರ ಎಕರೆ ಪ್ರದೇಶಕ್ಕೆ ಹರಿಯಬೇಕಾದ ವಾಟೆಹೊಳೆ ಜಲಾಶಯದ ನೀರು ಕೇವಲ 5 ಸಾವಿರ ಎಕರೆಗೆ ಮಾತ್ರ ಹರಿಯುತ್ತಿದೆ.

ಆಲೂರು ತಾಲ್ಲೂಕಿನಲ್ಲಿ ವಾಟೆಹೊಳೆ ಜಲಾಶಯದಿಂದ ಎಡದಂಡೆ 10 ಕಿ.ಮೀ. ಮತ್ತು ಬಲದಂಡೆ 37 ಕಿ.ಮೀ. ಮತ್ತು ನಾಕಲಗೂಡು ವಿತರಣಾ ನಾಲೆ 5 ಕಿ.ಮೀ. ಇದೆ. ಬಲದಂಡೆ ನಾಲೆಯಿಂದ ಸುಮಾರು 15 ಗ್ರಾಮಗಳಿಗೆ ಒಳಪಟ್ಟಂತೆ 3,250 ರೈತರ 5 ಸಾವಿರ ಎಕರೆಗೆ ಮಾತ್ರ ನೀರು ಹರಿಯುತ್ತಿದೆ. ಎಡದಂಡೆ ನಾಲೆಯಲ್ಲಿ ಸುಮಾರು 10 ಗ್ರಾಮಗಳ ರೈತರಿಗೆ ನೀರು ಹರಿಸಲಾಗುತ್ತಿದೆ.

ADVERTISEMENT

ಯಗಚಿ ಮುಖ್ಯ ನಾಲೆಯಲ್ಲಿ ಮಾತ್ರ ನೀರು ಹರಿಯುತ್ತಿದೆ. ವಿಭಜಿತ ನಾಲೆಯಲ್ಲಿ ನೀರು ಹರಿಯುತ್ತಿಲ್ಲ. ಜಲಾಶಯ ತುಂಬಿದ್ದರೂ ನಾಲೆಗಳಲ್ಲಿ ನೀರು ಹರಿಯದೇ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಎರಡೂ ಜಲಾಶಯಗಳ ನಾಲೆಗಳಲ್ಲಿ ಸರಾಗವಾಗಿ ನೀರು ಹರಿದರೆ ಆಲೂರು ತಾಲ್ಲೂಕು ಸೇರಿದಂತೆ ಕಟ್ಟಾಯ ಹೋಬಳಿ ರೈತರು ಒಳ್ಳೆಯ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎನ್ನುವುದು ಇಲ್ಲಿನ ರೈತರ ಒತ್ತಾಯ.

ರೈತರು ವರ್ಷದಲ್ಲಿ ಮೂರು ಬಾರಿ ತರಕಾರಿ ಬೆಳೆಯುತ್ತಿದ್ದು, ಎರಡು ಬಾರಿ ಮುಸುಕಿನ ಜೋಳ ಬೆಳೆಯುತ್ತಾರೆ. ವಾಟೆಹೊಳೆ ನೀರು ನಾಲೆಯಲ್ಲಿ ಸರಾಗವಾಗಿ ಹರಿದರೆ ತಾಲ್ಲೂಕಿನ 20 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಬಹುದು.

ಮಲೆನಾಡು ಭಾಗವಾಗಿರುವ ಸಕಲೇಶಪುರ, ಬೇಲೂರು, ಆಲೂರಿನಲ್ಲಿ ಮಳೆ ಅಧಿಕವಾಗಿದೆ. ಹೀಗಾಗಿ ಇಲ್ಲಿನ ವಾಟೆಹೊಳೆ, ಯಗಚಿ, ಹೇಮಾವತಿ ಜಲಾಶಯಗಳಿಂದ ಒಳ್ಳೆಯ ಒಳಹರಿವು ಸಿಗುತ್ತದೆ. ಜಲಾಶಯಗಳೂ ಭರ್ತಿಯಾಗುತ್ತವೆ.

ಜಲಾಶಯಗಳಿದ್ದರೂ, ನಾಲೆಗಳ ಹೂಳಿನಿಂದಾಗಿ ರೈತರು ನೀರಾವರಿಯನ್ನೇ ಮರೆಯುವಂತಾಗಿದೆ. ಮಳೆ ಬಿಟ್ಟರೆ, ಕೊಳವೆಬಾವಿಗಳಿಗೆ ಮಾರು ಹೋಗಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಕೂಡಲೇ ನಾಲೆಗಳು ದುರಸ್ತಿ ಕೈಗೊಂಡಲ್ಲಿ ಅನುಕೂಲ ಆಗಲಿದೆ ಎನ್ನುವುದು ರೈತರ ಮನವಿ.

ಆಲೂರು ತಾಲ್ಲೂಕಿನ ತಲ್ಲೂರಿನ ಬಳಿ ಹೂಳು ತುಂಬಿರುವ ನಾಲೆ.
ಸಿಮೆಂಟ್ ಮಂಜು
ನಾಲೆಗಳ ಹೂಳು ತೆಗೆದು ದುರಸ್ತಿ ಮಾಡಿದಲ್ಲಿ ಆಲೂರು ತಾಲ್ಲೂಕಿನ ಬಹುತೇಕ ಕೊನೆಯಂಚಿನ ರೈತರ ಜಮೀನಿಗೆ ನೀರು ತಲುಪಿಸಲು ಸಾಧ್ಯವಾಗಲಿದೆ.
ಸಿಮೆಂಟ್ ಮಂಜು ಶಾಸಕ

ಕಾಡಾನೆ ಸಮಸ್ಯೆ ನಿವಾರಿಸಿ ಐದು ದಶಕಗಳಿಂದ ಆಲೂರು ತಾಲ್ಲೂಕು ಕಾಡಾನೆ ಹಾವಳಿಯಿಂದ ನಲುಗಿದ್ದು ಕೂಡಲೇ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಶಾಸಕ ಸಿಮೆಂಟ್‌ ಮಂಜು ಮನವಿ ಮಾಡಿದ್ದಾರೆ. ಐದು ದಶಕಗಳ ಹಿಂದೆ ಆಲೂರು ತಾಲ್ಲೂಕಿನಲ್ಲಿ ಪ್ರಥಮವಾಗಿ ಕಾಡಾನೆ ಮತ್ತು ಮಾನವ ಸಂಘರ್ಷ ಪ್ರಾರಂಭವಾಯಿತು. ನಂತರ ಸಕಲೇಶಪುರ ಮತ್ತು ಬೇಲೂರು ತಾಲ್ಲೂಕಿನಲ್ಲಿ ಸುಮಾರು 80 ಕ್ಕಿಂತ ಹೆಚ್ಚು ಕಾಡಾನೆಗಳು ಎರಡು ಗುಂಪುಗಳಾಗಿ ಅತ್ತಿಂದಿತ್ತ ಓಡಾಡುತ್ತಾ ಕೃಷಿಯನ್ನು ನಾಶ ಮಾಡುತ್ತಿವೆ. ಈವರೆಗೆ ಸಂಘರ್ಷದಲ್ಲಿ ಸುಮಾರು 80 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಹಲವು ಕಾಡಾನೆಗಳೂ ಮರಣ ಹೊಂದಿವೆ. ಶಾಶ್ವತ ಕ್ರಮ ಕೈಗೊಳ್ಳಬೇಕು. ಬೆಳೆಗಾರರಿಗೆ ಆಗುವ ನಷ್ಟಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.