ADVERTISEMENT

ಹಾಸನ | ಏತ ನೀರಾವರಿ ಯೋಜನೆಗಳ ಪ್ರಗತಿ ಕುಂಠಿತ: ಎಚ್‌.ಡಿ. ರೇವಣ್ಣ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 1:57 IST
Last Updated 30 ಸೆಪ್ಟೆಂಬರ್ 2025, 1:57 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ಜಿಲ್ಲೆಯಲ್ಲಿ ಏತ ನೀರಾವರಿ ಯೋಜನೆಗಳ ಪ್ರಗತಿ ಕುಂಠಿತವಾಗಿದೆ. ಭೂಸ್ವಾಧೀನ ಪರಿಹಾರ ಹಣ ಬಿಡುಗಡೆ ಮಾಡುವಲ್ಲಿಯೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶಾಸಕ ಎಚ್‌.ಡಿ. ರೇವಣ್ಣ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಸಂಬಂಧ ಮೊದಲು ಮತ್ತು ಎರಡನೇ ಹಂತಕ್ಕೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ₹ 165 ಕೋಟಿ ಬಿಡುಗಡೆ ಮಾಡಿದ್ದರು. 2019ರಲ್ಲಿ ಆಳಗೊಂಡನಹಳ್ಳಿ ಏತ ನೀರಾವರಿ ಯೋಜನೆಗೆ ಮೂಲಕ 26 ಕೆರೆಗಳನ್ನು ತುಂಬಿಸಲು ₹ 47 ಕೋಟಿ, ಶಂಭುಗೌಡನ ಕೆರೆಗೆ ₹ 21 ಕೋಟಿ ಹಾಗೂ ಒಂಟಿ ಗುಡ್ಡದಿಂದ ಚಾಕೇನಹಳ್ಳಿ ಡ್ಯಾಮ್‌ಗೆ ₹ 22 ಕೋಟಿ ನೀಡಲಾಗಿದೆ. ಆದರೂ ಯೋಜನೆ ನಿಗದಿಯಂತೆ ಪ್ರಗತಿ ಕಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರೈತಪರ ಎಂದು ಹೇಳಿಕೊಳ್ಳುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಹಲವಾರು ವರ್ಷ ಕಳೆದರೂ  ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರುತ್ತಿಲ್ಲ. ಕೆಲ ಯೋಜನೆಯ ಭೂಸ್ವಾಧೀನದ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಹಣ ಮಂಜೂರು ಮಾಡಲು ವಿಶೇಷ ಭೂಸ್ವಾಧೀನ ಅಧಿಕಾರಿ, ರೈತರನ್ನು ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಈ ಕಚೇರಿ ಜಿಲ್ಲಾಧಿಕಾರಿ ಅಧೀನದಲ್ಲಿದ್ದು, ವಾರಕ್ಕೊಮ್ಮೆ ಸಭೆ ನಡೆಸಿ, ಬಾಕಿ ಇರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಭೂಸ್ವಾಧೀನ ಅಧಿಕಾರಿ ಕಚೇರಿಯಲ್ಲಿ ಲಂಚಾವತಾರ ಮಿತಿಮೀರಿದ್ದು, ದುಡ್ಡು ಕೊಟ್ಟವರಿಗೆ ಭೂಸ್ವಾಧೀನದ ಹಣ ಬಿಡುಗಡೆ ಮಾಡಲಾಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿ ಗಮನ ಹರಿಸಬೇಕು. ಈ ಬೆಳವಣಿಗೆಗಳ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.

‘ಏತ ನೀರಾವರಿಗೆ ಯೋಜನೆಗಳಿಗೆ 1986 ರಲ್ಲಿ ಭೂಸ್ವಾಧೀನವಾಗಿದ್ದು, 40 ವರ್ಷ ಕಳೆದಿದೆ. ಇದೀಗ ಎಕರೆಗೆ ₹ 1.20 ಕೋಟಿ ನಿಗದಿ ಮಾಡಲಾಗಿದೆ. ಕೂಡಲೇ ಈ ಪ್ರಕರಣಗಳನ್ನು ಇತ್ಯರ್ಥ ಮಾಡದಿದ್ದರೆ ನೀರಾವರಿ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ನಷ್ಟ ಉಂಟಾಗಲಿದೆ. ಸಾರ್ವಜನಿಕರ ಹಣ ದುರುಪಯೋಗ ಆಗಲಿದೆ. ಇದನ್ನು ತಪ್ಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಖು. ಈ ನಿಟ್ಟಿನಲ್ಲಿ ಭೂಸ್ವಾಧೀನ ಅಧಿಕಾರಿ, ನೀರಾವರಿ ಯೋಜನೆ ಸಂಬಂಧಿಸಿದ ವಕೀಲರ ಸಭೆ ಕರೆದು, ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಆಗ್ರಹಿಸಿದರು‌.

ಜಿಲ್ಲೆಯಲ್ಲಿ ಒಂದೇ ಒಂದು ಖರಾಬು ಜಮೀನು ಉಳಿಯುತ್ತಿಲ್ಲ. ಎಲ್ಲೆಡೆ ಲ್ಯಾಂಡ್ ಮಾಫಿಯಾ ತಲೆ ಎತ್ತಿದೆ. ಮೊದಲು ಕಚೇರಿಯನ್ನು ಶುದ್ಧ ಮಾಡಿ ಎಂದ ರೇವಣ್ಣ, ಮುಂದಿನ ದಿನಗಳಲ್ಲಿ ಈ ಕುರಿತು ಅಗತ್ಯ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ಕಾರ್ಯವೈಖರಿಗೆ ಅಸಮಾಧಾನ

‘ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಕಾರ್ಯವೈಖರಿ ಕುರಿತು ಅಧಿಕಾರಿಗಳು ದೂರುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಕೆಲವರು ಮಾತನಾಡಿದ್ದು ಒಬ್ಬ ತಹಶೀಲ್ದಾರ್ ನನ್ನ ಬಳಿ ಬಂದು ಡಿಸಿ ನಮಗೆ ಹೀಗೆ ಬರೆಯಿರಿ ಎಂದು ಹೇಳುತ್ತಾರೆ. ಅವರು ಕೊಡುವ ಕಾಟದಿಂದ ಬದುಕಲು ಕಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ತಮ್ಮ ಕೆಳಹಂತದ ಅಧಿಕಾರಿಗಳೊಂದಿಗೆ ಸಂಯಮದಿಂದ ವರ್ತಿಸಬೇಕು’ ಎಂದು ಎಚ್‌.ಡಿ. ರೇವಣ್ಣ ಆಗ್ರಹಿಸಿದರು. ‘ಕೆಲ ಅಧಿಕಾರಿಗಳನ್ನು ಬೆಳಿಗ್ಗೆ ಎಂಟು ಗಂಟೆಗೆ ಬರಲು ಜಿಲ್ಲಾಧಿಕಾರಿ ಹೇಳುತ್ತಾರೆ. ಆದರೆ ಮಧ್ಯಾಹ್ನವಾದರೂ ಅವರನ್ನು ಪ್ರಶ್ನಿಸದೇ ವಿಳಂಬ ಮಾಡುತ್ತಾರೆ. ಇಂತಹ ಕಿರುಕುಳದಿಂದ ಕೆಲ ಅಧಿಕಾರಿಗಳು ನೊಂದಿದ್ದಾರೆ’ ಎಂದರು. ನಾನು ಶಾಸಕನಾಗಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಜಿಲ್ಲಾಧಿಕಾರಿ ನಡುವಳಿಕೆ ತಿದ್ದುಕೊಳ್ಳಿ. ಕಚೇರಿಯಲ್ಲಿನ ಕಡತಗಳನ್ನು ವಿಲೇವಾರಿ ಮಾಡಲು ಗಮನ ಹರಿಸಿ. ಕೆಳಹಂತದ ಅಧಿಕಾರಿಗಳ  ಜೊತೆಗೆ ಸಂಯಮದಿಂದ ವರ್ತಿಸುವಂತೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.