ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ನಿಜವಾಗಿಯೂ ಉಸ್ತುವಾರಿ ಸಚಿವರೋ ಅಥವಾ ಅಪರೂಪಕ್ಕೊಮ್ಮೆ ಜಿಲ್ಲೆಗೆ ಬಂದು ಹೋಗುವ ಅತಿಥಿಯೋ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ರಘು ಹೊಂಗೆರೆ ಪ್ರಶ್ನಿಸಿದ್ದಾರೆ.
‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿ ಸಂಭವಿಸಿದೆ. ಸಕಲೇಶಪುರದಲ್ಲಿ ಶೇ 60 ರಷ್ಟು ಕಾಫಿ , ಕಾಳು ಮೆಣಸೂ ಹಾನಿ ಆಗಿದೆ. ಶಿರಾಡಿಘಾಟ್‌ನಲ್ಲಿ ನಿರಂತರ ಭೂ ಕುಸಿತ ಸಂಭವಿಸಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಮಂದಿ ಮನೆ ಕಳೆದುಕೊಂಡಿದ್ದಾರೆ. ನೂರಾರು ಎಕರೆ ಬೆಳೆ ಮಳೆಗೆ ಕೊಚ್ಚಿ ಹೋಗಿದೆ. ರಸ್ತೆ ಸಂಪರ್ಕ ಕಡಿತಗೊಂಡು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಸಚಿವರು ಜಿಲ್ಲೆಗೆ ಬರುತ್ತಿಲ್ಲ ಏಕೆ’ ಎಂದು ಕೇಳಿದ್ದಾರೆ.
ಸಚಿವರು ಇಲ್ಲಿಯೇ ಸಕಲೇಶಪುರ ಹಾಗೂ ಇತರೆ ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕಿತ್ತು, ಅದನ್ನು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಅವರು ಜನರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಒತ್ತಾಯಿಸಿದ್ದಾರೆ. ಆದರೆ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದರೂ, ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಸಭೆಗೆ ಬಂದು ಹೋಗಿದ್ದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ್ದಾರೆ.
ಹೇಮಾವತಿಗಿಲ್ಲ ಬಾಗಿನ?
ಭರ್ತಿಯಾಗಿರುವ ಕಾವೇರಿ, ಕಬಿನಿಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಹಾಸನದ ಹೇಮಾವತಿಗೆ ಬಾಗಿನ ಅರ್ಪಿಸದೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.