
ಶ್ರವಣಬೆಳಗೊಳದ ಭಂಡಾರ ಬಸದಿಯ ಹುಳ್ಳ ಸಭಾ ಮಂಟಪದಲ್ಲಿ ಆಯೋಜಿಸಿದ್ದ 5ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷ ಡಾ.ಪಾದೂರು ಸುದರ್ಶನ ಕುಮಾರ್ ಇಂದ್ರ ಉದ್ಘಾಟಿಸಿದರು.
ಶ್ರವಣಬೆಳಗೊಳ: ‘ಜೈನ ಧರ್ಮವು ಸಂಯಮ, ಶ್ರದ್ಧೆ ಮತ್ತು ಶಾಸ್ತ್ರಾನುಸರಣೆಯ ಮೇಲೆ ನಿಂತ ಶಾಶ್ವತ ಧರ್ಮ. ಅದನ್ನು ಸಮಾಜದೊಳಗೆ ಜೀವಂತವಾಗಿರಿಸುವ ಮಹತ್ವದ ಹೊಣೆಗಾರಿಕೆ ಪುರೋಹಿತ, ಪಂಡಿತ, ಅರ್ಚಕ, ಇಂದ್ರ ಹಾಗೂ ಉಪಾಧ್ಯಾಯರ ಮೇಲಿದೆ’ ಎಂದು ಸಮ್ಮೇಳನಾಧ್ಯಕ್ಷ ಮೂಡಬಿದಿರೆಯ ಡಾ.ಪಾದೂರ ಸುದರ್ಶನ ಕುಮಾರ್ ಇಂದ್ರ ಹೇಳಿದರು.
ಪಟ್ಟಣದ ಭಂಡಾರ ಬಸದಿಯ ಹುಳ್ಳ ಸಭಾ ಮಂಟಪದಲ್ಲಿ ಮಂಗಳವಾರ ಆರಂಭವಾದ 5ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಕ್ರಿ.ಪೂ 3ನೇ ಶತಮಾನದಲ್ಲಿ ಚಂದ್ರಗುಪ್ತ ಮೌರ್ಯ ಹಾಗೂ ಭದ್ರಬಾಹು ಆಚಾರ್ಯರು ಶ್ರವಣಬೆಳಗೊಳಕ್ಕೆ ಬಂದ ನಂತರ ಕರ್ನಾಟಕ ಜೈನ ಧರ್ಮದ ಕೇಂದ್ರವಾಗಿ, ದಿಗಂಬರ ಜೈನ ಆಚಾರ್ಯ ಪರಂಪರೆ ದೃಢವಾಗಿ ಬೆಳೆಯಿತು. ಭದ್ರಬಾಹು ಮುನಿಗಳು ಶ್ರವಣಬೆಳಗೊಳದ ತಪೋಭೂಮಿಯ ಸ್ಥಾಪಕ. ಶೃತಕೇವಲಿಯಾಗಿ ಕರ್ನಾಟಕದ ಜೈನ ಸಂಪ್ರದಾಯದ ಮೂಲಸ್ತಂಭವಾಗಿದ್ದಾರೆ’ ಎಂದು ವಿವರಿಸಿದರು.
ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಸಮ್ಮೇಳನದ ಕಾರ್ಯದರ್ಶಿ ಡಾ.ಎಚ್.ಪಿ.ಮೋಹನ್ ಕುಮಾರ್ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಷ್ಠಾಚಾರ್ಯ ಎಸ್.ಎಂ.ಸನ್ಮತಿಕುಮಾರ್ ಶಾಸ್ತ್ರಿ, ಎಸ್.ಪಿ. ಜೀವೇಂದ್ರಕುಮಾರ್ ಶಾಸ್ತ್ರಿ, ನಿಕಟ ಪೂರ್ವ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೀಲಾ ಅನಂತರಾಜ್, ರಾಜ ಪುರೋಹಿತ ಪೆರಿಂಜೆ ಪದ್ಮಪ್ರಭೇಂದ್ರ ಶಾಸ್ತ್ರಿ, ಮಹಿಳಾ ಸಮಾಜದ ಅಧ್ಯಕ್ಷೆ ಮಹಾಲಕ್ಷ್ಮಿ ಪ್ರಮೋದ್ ಕುಮಾರ್ ಇದ್ದರು.
ಅರ್ಚಕರಿಗೆ ಶಾಶ್ವತ ಸಹಾಯ ಅಗತ್ಯ
‘ಅನಾದಿ ಕಾಲದಿಂದಲೂ ಉತ್ತರ ಭಾರತಕ್ಕಿಂತ ದಕ್ಷಿಣ ಭಾಗದಲ್ಲಿ ಆಗಮ ಶಾಸ್ತ್ರ ಪರಂಪರೆಯಲ್ಲಿಯೇ ಧಾರ್ಮಿಕ ವಿಧಿಗಳು ನಡೆಯುತ್ತಿವೆ’ ಎಂದು ಹೊಂಬುಜ ಜೈನ ಮಠದ ಪೀಠಾಧಿಪತಿ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ‘ಅರಸರ ಕಾಲದಲ್ಲಿ ಅರ್ಚಕರಿಗೆ ಸಾಕಷ್ಟು ದಾನ ದತ್ತಿಗಳನ್ನು ನೀಡಿ ಗೌರವಿಸುತ್ತಿದ್ದರು. ಆದರೆ ಈಗ ಬದಲಾವಣೆಯಾಗಿದ್ದು ಸರ್ಕಾರಗಳು ಅರ್ಚಕರಿಗೆ ಶಾಶ್ವತ ಸಹಾಯ ಹಸ್ತ ಚಾಚಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.