ADVERTISEMENT

ಶ್ರವಣಬೆಳಗೊಳ: ಸಂಪೂರ್ಣ ಧಾಮ ಸಂಪ್ರೋಕ್ಷಣೆ ವಿಧಿ

ವಜ್ರಲೇಪನಗೊಂಡ ಚವ್ವೀಸ ತೀರ್ಥಂಕರರಿಗೆ ವಿಶೇಷ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 1:52 IST
Last Updated 19 ಆಗಸ್ಟ್ 2025, 1:52 IST
ಶ್ರವಣಬೆಳಗೊಳದ ಭಂಡಾರ ಬಸದಿಯಲ್ಲಿರುವ ಖಡ್ಗಾಸನದ ಚವ್ವೀಸ ತೀರ್ಥಂಕರರಿಗೆ ವಿಶೇಷ ಅಭಿಷೇಕ ನೆರವೇರಿದವು
ಶ್ರವಣಬೆಳಗೊಳದ ಭಂಡಾರ ಬಸದಿಯಲ್ಲಿರುವ ಖಡ್ಗಾಸನದ ಚವ್ವೀಸ ತೀರ್ಥಂಕರರಿಗೆ ವಿಶೇಷ ಅಭಿಷೇಕ ನೆರವೇರಿದವು   

ಶ್ರವಣಬೆಳಗೊಳ: ಇಲ್ಲಿಯ ಭಂಡಾರ ಬಸದಿಯಲ್ಲಿ ಚವ್ವೀಸ ತೀರ್ಥಂಕರರಿಗೆ ಸಂಪೂರ್ಣ ಧಾಮ ಸಂಪ್ರೋಕ್ಷಣೆಯ ಪ್ರಯುಕ್ತ ಇಂದ್ರ ಪ್ರತಿಷ್ಠೆ, ಸರ್ವದೋಷ ಪ್ರಾಯಶ್ಚಿತ್ತದ ಸಕಲ ಧಾರ್ಮಿಕ ವಿಧಿ ವಿಧಾನಗಳನ್ನು ಸೋಮವಾರ ನೆರವೇರಿಸಲಾಯಿತು. 

ವಜ್ರಲೇಪನಗೊಂಡ ಖಡ್ಗಾಸನದ 24 ತೀರ್ಥಂಕರರ ಸನ್ನಿಧಿಯಲ್ಲಿ ಮಂಗಲ ಕಲಶಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಲಘು ಪಂಚಕಲ್ಯಾಣದ ಪ್ರಯುಕ್ತ ತೀರ್ಥಂಕರರಿಗೆ ಕೇವಲ ಜ್ಞಾನ ಕಲ್ಯಾಣ, ಮೋಕ್ಷ ಕಲ್ಯಾಣದ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.

ಣಮೋಕಾರ ಮಹಾಮಂತ್ರ ಮತ್ತು ವಿವಿಧ ಮಂಗಲ ವಾದ್ಯಗಳನ್ನು ನುಡಿಸುತ್ತಿದ್ದಂತೆಯೇ ಕೇಸರಿ ವಸ್ತ್ರಧಾರಿಗಳು, ಕಿರೀಟ ಧರಿಸಿದ 24 ಜನ ಶ್ರಾವಕರು ಏಕ ಕಾಲದಲ್ಲಿ ತೀರ್ಥಂಕರರಿಗೆ ಜಲಾಭಿಷೇಕ ನೆರವೇರಿಸಿದರು. ಕ್ಷೀರ, ಅಷ್ಟಗಂಧಗಳ ಅಭಿಷೇಕ, ಪುಷ್ಪವೃಷ್ಟಿ, ಮಹಾಮಂಗಳಾರತಿ ಮಾಡಲಾಯಿತು. ಆಚಾರ್ಯರಿಗೆ ಮತ್ತು ತ್ಯಾಗಿಗಳಿಗೆ ಅರ್ಘ್ಯಗಳನ್ನು ಸಮರ್ಪಿಸಿ ಗಂಧೋದಕ ವಿತರಿಸಲಾಯಿತು.

ADVERTISEMENT

ದಾನಿಗಳು ಮತ್ತು ಒಡಿಶಾದಿಂದ ಬಂದಿದ್ದ ಶಿಲ್ಪಿಗಳನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾಚಾರ್ಯರಾದ ಎಸ್.ಪಿ.ಜಿನೇಶ್, ಎಸ್.ಡಿ.ನಂದಕುಮಾರ್ ಶಾಸ್ತ್ರಿ, ಪ್ರೇಮ್‌ಕುಮಾರ್, ಎಸ್.ಎಸ್. ವಿಮಲ್ ಕುಮಾರ್ ನೇತೃತ್ವ ವಹಿಸಿದ್ದರು.

ಕ್ಷೇತ್ರದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಆಚಾರ್ಯ ಸುವಿಧಿ ಸಾಗರ ಮಹಾರಾಜ. ಆಚಾರ್ಯ ವರ್ಧಮಾನ ಸಾಗರ ಮಹಾರಾಜ, ವಿದ್ಯಾಸಾಗರ ಮಹಾರಾಜ ನೇತೃತ್ವ ವಹಿಸಿದ್ದರು. ಅರಹಂತಗಿರಿಯ ಧವಲಕೀರ್ತಿ ಸ್ವಾಮೀಜಿ, ಕನಕಗಿರಿ ಜೈನಮಠದ ಭುವನಕೀರ್ತಿ ಸ್ವಾಮೀಜಿ, ಕಂಬದಹಳ್ಳಿಯ ಬಾನುಕೀರ್ತಿ ಸ್ವಾಮೀಜಿ, ಆರತಿಪುರದ ಸಿದ್ಧಾಂತ ಕೀರ್ತಿ ಸ್ವಾಮೀಜಿ, ಸೋಂದಾ ಜೈನ ಮಠದ ಭಟ್ಟಾಕಲಂಕ ಸ್ವಾಮೀಜಿ ಪಾಲ್ಗೊಂಡಿದ್ದರು.

ಧಾರ್ಮಿಕ ವೇದಿಕೆಯಲ್ಲಿ ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭುವನಕೀರ್ತಿ ಸ್ವಾಮೀಜಿ ಧವಲಕೀರ್ತಿ ಸ್ವಾಮೀಜಿ ಬಾನುಕೀರ್ತಿ ಸ್ವಾಮೀಜಿ ಸಿದ್ಧಾಂತಕೀರ್ತಿ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.