ADVERTISEMENT

ಕೆ.ಎಂ. ಶಿವಲಿಂಗೇಗೌಡರ ಬೆಂಬಲಕ್ಕೆ ನಿಂತ ಕಾರ್ಯಕರ್ತರು

ಪ್ರತಿಭಟನೆಗೆ ಮುಂದಾಗಿದ್ದ ಚಂದ್ರಶೇಖರ್ ಯಾದವ್ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 3:15 IST
Last Updated 8 ಏಪ್ರಿಲ್ 2022, 3:15 IST
ಅರಸೀಕೆರೆಯ ಮಾರುತಿ ನಗರದಲ್ಲಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡರ ಮನೆ ಮುಂದೆ ಗುರುವಾರ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು
ಅರಸೀಕೆರೆಯ ಮಾರುತಿ ನಗರದಲ್ಲಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡರ ಮನೆ ಮುಂದೆ ಗುರುವಾರ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು   

ಅರಸೀಕೆರೆ: ಬಿಜೆಪಿ ಮುಖಂಡ ಎನ್.ಆರ್. ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿರುವ ಚಂದ್ರಶೇಖರ್ ಯಾದವ್ ಎಂಬುವರು ಶಾಸಕ ಕೆ.ಎಂ. ಶಿವಲಿಂಗೇಗೌಡರ ಮನೆ ಎದುರು ಪ್ರತಿಭಟಿಸುವ ವಿಷಯ ತಿಳಿದ ಜೆಡಿಎಸ್‌ನ ಸಾವಿರಾರು ಕಾರ್ಯಕರ್ತರು ಗುರುವಾರ ಶಾಸಕರ ಮನೆ ಎದುರು ಜಮಾಯಿಸಿದ್ದರು.

ನಗರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗುವ ಸೂಚನೆ ಅರಿತ ಪೊಲೀಸರು, ಚಂದ್ರಶೇಖರ್ ಯಾದವ್ ಹಾಗೂ ಅವರ ಬೆಂಬಲಿಗರನ್ನು ಬಿ.ಎಚ್. ರಸ್ತೆಯ ಶಿಕ್ಷಕರ ಭವನದ ಎದುರು ವಶಕ್ಕೆ ಪಡೆದರು.

ನಗರದ ಮಾರುತಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ‘ಎನ್.ಆರ್. ಸಂತೋಷ್ ತಮ್ಮ ಬೆಂಬಲಿಗರ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿಸುತ್ತಿದ್ದಾರೆ. ಇದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.

ADVERTISEMENT

‘ತಾಲ್ಲೂಕಿನಲ್ಲಿ ಬಿಜೆಪಿ ಮುಖಂಡ ಎಂದು ಬಿಂಬಿಸಿಕೊಳ್ಳುತ್ತಿರುವ ಆ ವ್ಯಕ್ತಿಯನ್ನು ಬಿ.ಎಸ್‌.ಯಡಿಯೂರಪ್ಪ ನವರೇ ದೂರ ಇಟ್ಟಿದ್ದಾರೆ. ಕ್ಷೇತ್ರದಲ್ಲಿ ಯಾರು ಬೇಕಾದರೂ ರಾಜಕಾರಣ ಮಾಡಲಿ. ಆದರೆ, ಅಮಾಯಕರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು’ ಎಂದು ಹೇಳಿದರು.

ಜೆಡಿಎಸ್ ಮುಖಂಡ ಧರ್ಮಶೇಖರ್ ಗೀಜಿಹಳ್ಳಿ ಮಾತನಾಡಿ, ‘ಹೊರಗಿನಿಂದ ಬಂದಿರುವ ಕಿಡಿಗೇಡಿ ಗಳು ತಾಲ್ಲೂಕಿನ ಸ್ವಾಸ್ತ್ಯವನ್ನು ಹಾಳು ಮಾಡಲು ಮುಂದಾಗಿದ್ದಾರೆ. ಶಾಸಕರ ಪರವಾಗಿ ಜನರಿದ್ದಾರೆ’ ಎಂದರು.

ಮುಖಂಡರಾದ ಹನುಮಪ್ಪ, ಹುಚ್ಚೇಗೌಡ, ಬಂಡಿಗೌಡರ ರಾಜಣ್ಣ, ಸಮೀವುಲ್ಲಾ, ಅಡವಿಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಶಿವಮೂರ್ತಿ ಗುತ್ತಿನಕೆರೆ ಇದ್ದರು.

***

ಎನ್.ಆರ್.ಸಂತೋಷ್ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ನೀಡಿದ್ದ ಪ್ರಚೋದನಕಾರಿ ಹೇಳಿಕೆ ಖಂಡಿಸಿ ಶಾಸಕರ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದೆ.

–ಚಂದ್ರಶೇಖರ್ ಯಾದವ್, ಬಿಜೆಪಿ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.