ADVERTISEMENT

'ಜೆಡಿಎಸ್‌ ಸಿ.ಎಂ ಅಭ್ಯರ್ಥಿ ಕುಮಾರಸ್ವಾಮಿ'

ಎರಡು ಬಾರಿ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 13:52 IST
Last Updated 24 ಜೂನ್ 2021, 13:52 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ಮುಂದಿನ ಚುನಾವಣೆಯಲ್ಲಿ ಜನತೆ ಅವಕಾಶ ನೀಡಿದರೆ ಜೆಡಿಎಸ್‌ನಿಂದ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣಹೇಳಿದರು.

‘ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿಸಿ.ಎಂ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಗಲಾಟೆ ನಡೆಯುತ್ತಿದೆ. ಆದರೆ, ಜೆಡಿಎಸ್‌ನಲ್ಲಿ ಸಿ.ಎಂ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲಇಲ್ಲ. ಕುಮಾರಸ್ವಾಮಿ ಅವರು ಈಗಾಗಲೇ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದಾರೆ. ರಾಜ್ಯದ ಜನತೆ ಮತ್ತೊಮ್ಮೆ ಅವಕಾಶ ನೀಡಿದರೆ, ರೈತರು, ಬಡವರು, ಜನ ಸಾಮಾನ್ಯರ ಪರವಾಗಿ ಉತ್ತಮ ಆಡಳಿತನೀಡಲಾಗುವುದು. ಇಲ್ಲದಿದ್ದರೆ ವಿರೋಧ ಪಕ್ಷದಲ್ಲಿ ಕೂರುತ್ತೇವೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್‌ ನೆಪ ಹೇಳಿ ಸರ್ಕಾರ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ನೀಡುತ್ತಿದ್ದ ಅನುದಾನವನ್ನು ಶೇಕಡಾ 50ರಷ್ಟು ಕಡಿತ ಮಾಡಲಾಗಿದೆ.ಉದಾಹರಣೆಗೆ ಎ ಗ್ರೇಡ್‌ ಗ್ರಾಮ ಪಂಚಾಯಿತಿಗೆ ನೀಡುತ್ತಿದ್ದ ₹13 ಲಕ್ಷ ಅನುದಾನವನ್ನು₹5 ಲಕ್ಷಕ್ಕೆ ಇಳಿಕೆ ಮಾಡಲಾಗಿದೆ. ಈ ಹಣದಲ್ಲಿಯೇ ಜಲ ಜೀವನ್‌ ಮಿಷನ್‌ ಯೋಜನೆಗೂ ಕಡಿತ ಮಾಡಲಾಗುತ್ತಿದೆ. ಇಷ್ಟು ಕಡಿಮೆ ಅನುದಾನದಲ್ಲಿ ಯಾವ ರೀತಿಯ ಕೆಲಸ ಮಾಡಲು ಸಾಧ್ಯ ಎಂದುಪ್ರಶ್ನಿಸಿದರು.

ADVERTISEMENT

ಪಂಚಾಯಿತಿಗಳಿಗೆ ಅನುದಾನ ಕಡಿತ ಮಾಡಿರುವುದನ್ನು ಹಿಂಪಡೆಯದಿದ್ದರೆ ಸಾಂಕೇತಿಕವಾಗಿ ಜಿಲ್ಲಾ ಮಟ್ಟದಲ್ಲಿ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಜತೆಗೂಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ನಂತರ ರಾಜ್ಯ ಮಟ್ಟದಲ್ಲೂ ಧರಣಿ ನಡೆಸಲಾಗುವುದುಎಂದು ಎಚ್ಚರಿಸಿದರು.

ಕೋವಿಡ್‌ ಸಂದರ್ಭದಲ್ಲಿಯೂ ಅಬಕಾರಿ ಇಲಾಖೆಗೆ ₹2.500ಕೋಟಿ ಆದಾಯ ಬಂದಿದೆ. ವಿವಿಧ ಮೂಲಗಳಿಂದಲೂ ಸರ್ಕಾರಕ್ಕೆ ಹಣ ಬಂದಿದೆ. ಶಾಸಕರುಹಾಗೂ ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಸಹ ಕಡಿತ ಮಾಡಲಾಗಿದೆ. ಹಾಗಾಗಿ ಸರ್ಕಾರ ದಿವಾಳಿಆಗಿದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ಪಿಂಚಣಿ ಪಡೆಯಲು ಫಲಾನುಭವಿಗಳುಅಂಚೆ ಕಚೇರಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರ ಸೇವೆಗೆ ಅವಕಾಶ ಇರುವುದರಿಂದ ಮೂರು, ನಾಲ್ಕು ದಿನ ಸಾಲಿನಲ್ಲಿ ನಿಂತರೂ ಹಣ ಪಡೆಯಲು ಆಗುತ್ತಿಲ್ಲ. ಆದ್ದರಿಂದ ನೇರವಾಗಿ ಫಲಾಭವಿಯ ಖಾತೆಗೆ ಹಣವನ್ನು ಜಮಾ ಮಾಡಬೇಕು. ಲಾಕ್‌ಡೌನ್‌ ಅವಧಿಯಲ್ಲಿಯೂ ಬ್ಯಾಂಕ್‌ ಮತ್ತು ಅಂಚೆ ಕಚೇರಿಗೆ ವಿಧಿಸಿರುವ ನಿರ್ಬಂಧವನ್ನು ತೆರವು ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಸರ್ಕಾರವನ್ನು ಆಗ್ರಹಿಸಿದರು.

ಕೋವಿಡ್ 3ನೇ ಅಲೆಗೂ ಮುನ್ನವೇ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗೆ ಕಾಯದೇ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕುಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಮೂಲಸೌಲಭ್ಯ ಕಲ್ಪಿಸಿ ಬಲಪಡಿಸಬೇಕು. ಅಗತ್ಯ ಸಿಬ್ಬಂದಿ, ವೈದ್ಯರನ್ನು ನೇಮಿಸಬೇಕು. ಮಕ್ಕಳಿಗೆ ಪ್ರತ್ಯೇಕ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.