
ಅರಸೀಕೆರೆ: ‘ಜೆಡಿಎಸ್ ಕಾರ್ಯಕ್ರಮಗಳಿಗೆ ಜನರನ್ನು ಕರೆದುಕೊಂಡು ಬರಲು ಹಾಸನ ಜಿಲ್ಲಾ ಮಿಲ್ಕ್ ಯೂನಿಯನ್ ಮತ್ತು ಎಚ್‍ಡಿಸಿಸಿ ಬ್ಯಾಂಕ್ ಸೂಪರ್ ವೈಸರ್‌ಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡರು ನೀಡಿರುವ ಹೇಳಿಕೆಯನ್ನು ಜೆಡಿಎಸ್ ಖಂಡಿಸುತ್ತದೆ’ ಎಂದು ಎಚ್‍ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಂಪುರ ಶೇಖರಪ್ಪ ಹೇಳಿದರು.
‘ಜಿಲ್ಲೆಯಲ್ಲಿ ನಡೆದ ಸರ್ಕಾರ ಸೇವೆಗಳ ಸಮರ್ಪಣಾ ಸಮೇವೇಶದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡುವಾಗ ಜನರು ಸರ್ಕಾರದ ಅಭಿವೃದ್ಧಿಯನ್ನು ಮೆಚ್ಚಿ ಬಂದಿದ್ದಾರೆ, ಆದರೇ ಈ ಹಿಂದೆ ಹಾಸನ ಜಿಲ್ಲಾ ಮಿಲ್ಕ್ ಯೂನಿಯನ್ ಮತ್ತು ಎಚ್‍ಡಿಸಿಸಿ ಬ್ಯಾಂಕ್ ಸೂಪರ್ ವೈಸ್‌ರ್‌ಗಳನ್ನು ಬಳಸಿಕೊಳ್ಳುತ್ತಿರಲಿಲ್ಲ ಎಂಬ ಹೇಳಿಕೆ ಎಷ್ಟು ಸರಿ. ಇವರೂ ಜೆಡಿಎಸ್‌ನಿಂದ ಬಂದಿದ್ದರು ಎಂಬುದನ್ನು ಮರೆಯಬಾರದು. ಸಮಾವೇಶಕ್ಕೆ ಹಣ ಹಂಚಿದವರು ಯಾರೂ ಎಂಬುದನ್ನು ಅರಿಯಬೇಕು. ಇಲಾಖೆಗಳನ್ನು ಬಳಸಿಕೊಳ್ಳುವ ನಿಮ್ಮ ಅನುಭವದ ಬಗ್ಗೆ ನೀವೇ ಮಾತನಾಡಬಾರದು’ ಎಂದು ಸುದ್ದಿರಾರರಿಗೆ ತಿಳಿಸಿದರು.
‘ಶಾಸಕರೇ ನಿಮ್ಮ ರಾಜಕೀಯ ಜನ್ಮ ನೀಡಿದ್ದು ಜೆಡಿಎಸ್ ಎಂಬುದನ್ನು ಮರೆಯಬೇಡಿ, 18 ಮತಗಳಿಂದ ಸೋತರೂ ಜೆಡಿಎಸ್ ವರಿಷ್ಠರು ನಿಮಗೆ ಹಣ ಸಹಾಯ ಮಾಡುವ ಜತೆಯಲ್ಲಿ ಪಕ್ಷದ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದು ಅಧಿಕಾರವನ್ನು ನೀಡಿದ್ದಾರೆ. ಇಲ್ಲವೆಂದರೆ ಮನೆ ಸೇರಬೇಕಿತ್ತು.
ತಮ್ಮ ಸಚಿವ ಸ್ಥಾನಕ್ಕಾಗಿ ಸಿ.ಎಂ., ಡಿಸಿಎಂ ಅವರನ್ನು ಮೆಚ್ಚಿಸಲು ಮಾತನಾಡಬಾರದು. ನಿಮ್ಮ ನಡವಳಿಕೆ ಇದೇ ರೀತಿ ಮುಂದುವರಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಕಣಕಟ್ಟೆ ಹೋಬಳಿಗೆ ನೀರನ್ನು ತರಲು ಹೋರಾಟ ನಡೆಸಿದವರು ಯಡಿಯೂರಪ್ಪ, ನೀವು ಒಂದೆರಡು ಕೆರೆಗಳಿಗೆ ನೀರನ್ನು ತಂದಿರಬಹುದು. ರಾಜಕಾರಣದಲ್ಲಿ ಈ ಸ್ಥಿತಿಗೆ ಬರಲು ಬೆನ್ನ ಹಿಂದೆ ನಿಂತು ಬೆಳೆಸಿದವರು ಎಚ್.ಡಿ. ರೇವಣ್ಣನವರೇ ಹೊರತು ಕಾಂಗ್ರೆಸ್‍ನವರಲ್ಲ’ ಎಂದರು.
ಜೆಡಿಎಸ್ ಮುಖಂಡ ಹೊಸೂರು ಗಂಗಾಧರ್ ಮಾತನಾಡಿ, ‘ಸರ್ಕಾರಿ ಅಧಿಕಾರಿಗಳಿಗೆ ಒತ್ತಡ ತಂದು ಹಣ ಪಡೆದು, ಜನರಿಗೆ ಹಣ ನೀಡಿ ಸಮಾವೇಶಕ್ಕೆ ಕರೆ ತಂದಿರುವುದು ಎಲ್ಲರಿಗೂ ತಿಳಿದಿದೆ. ಮೂರು ನೋಟುಗಳ ಮಾತು ಕ್ಷೇತ್ರದಾದ್ಯಂತ ಮನೆ ಮಾತಾಗಿದೆ. ಇಲ್ಲವೆಂದರೇ ಶಾಸಕರು ತಮ್ಮ ಮನೆಯ ದೇವರ ಮುಂದೆ ಬಂದು ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.
‘ಕ್ಷೇತ್ರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಮಗೂ ತಿಳಿದಿದೆ. ಬಾಣಾವರದ ಮನೆಯ ಹಂಚಿಕೆ ವಿಚಾರದಲ್ಲಿ ನಡೆದ ಅವ್ಯವಹಾರವನ್ನು ಜನರು ಮರೆತಿಲ್ಲ. ನಿಮ್ಮ ಕಷ್ಟದ ಸಂದರ್ಭದಲ್ಲಿ ಕೈಹಿಡಿದು ನಡೆಸಿದವರು ಎಚ್.ಡಿ. ರೇವಣ್ಣನವರು, ಅವರ ಋಣ ತೀರಿಸಲು ಈ ಜನ್ಮ ಸಾಕಾಗುವುದಿಲ್ಲ’ ಎಂದರು.
ಹಾಸನ ಜಿಲ್ಲಾ ಜನತಾ ಬಜಾರ್ ಅಧ್ಯಕ್ಷ ಮಂಜಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.