ADVERTISEMENT

ಹಾಸನ | ಜೆಡಿಎಸ್ ಪ್ರತಿಭಟನೆಯಲ್ಲಿ ಬಿಜೆಪಿ ಧ್ವಜ ಬಳಕೆ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 6:35 IST
Last Updated 9 ಅಕ್ಟೋಬರ್ 2025, 6:35 IST
   

ಅರಸೀಕೆರೆ: ಮಂಗಳವಾರ ನಡೆದ ಜೆಡಿಎಸ್ ಪ್ರತಿಭಟನೆಯಲ್ಲಿ ಬಿಜೆಪಿ ಧ್ವಜ ಮತ್ತು ಟೋಪಿ ಬಳಸಿರುವ ಘಟನೆಗೆ ಬಿಜೆಪಿ ಗ್ರಾಮಾಂತರ ಮಂಡಳದ ಅಧ್ಯಕ್ಷ ಯತೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಸಂತೋಷ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಬಾವುಟ ಮತ್ತು ಟೋಪಿ ಬಳಕೆ ಮಾಡಲಾಗಿದೆ. ಇದರ ಬಗ್ಗೆ ನಮಗೆ ಯಾವುದೇ ಮಾಹಿತಿ ಅಥವಾ ಆಹ್ವಾನವಿಲ್ಲ. ಸಂತೋಷ್ ಜೊತೆ ಓಡಾಡುವವರು ನಮ್ಮ ಪಕ್ಷದವರಲ್ಲ. ಅವರು ತಕ್ಷಣ ಈ ರೀತಿಯ ಧ್ವಜ ಬಳಕೆ ನಿಲ್ಲಿಸಬೇಕು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಧ್ವಜ ಹಾಗೂ ಟೋಪಿ ಹಾಕಿಕೊಂಡು ಕುಳಿತಿದ್ದವರು ನಮ್ಮ ಕಾರ್ಯಕರ್ತರಲ್ಲ. ಪಕ್ಷದಲ್ಲಿದ್ದಾಗ ಧ್ವಜ ಸುಟ್ಟಿದ್ದವರು, ಈಗ ಅದೇ ಧ್ವಜವನ್ನು ಉಪಯೋಗಿಸಿ ಪ್ರತಿಭಟನೆ ನಡೆಸುವುದು ಸ್ವಾರ್ಥ ಪರ ನಡೆ ಎಂದು ಪ್ರಶ್ನಿಸಿದರು.

ADVERTISEMENT

ಅ.12ರಂದು ಕರಿಯಮ್ಮ ದೇವಸ್ಥಾನದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಲಾಗಿರುವ ಪಥ ಸಂಚಲನಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಅವಿನಾಶ್ ನಾಯ್ಡು ಮಾತನಾಡಿ, ಸಂತೋಷ್ ಅವರ ಜೊತೆ ತಿರುಗಾಡುವ ಗಿರೀಶ್, ಶಿವನ್‌ ರಾಜ್ ಮುಂತಾದವರಿಗೆ ಈಗಾಗಲೇ ನೋಟಿಸ್‌ ಕಳುಹಿಸಲಾಗಿದೆ. ಮುಂದೆ ಯಾರೇ ಅವರ ಜೊತೆ ಭಾಗವಹಿಸಿದರೂ ಪಕ್ಷ ವಿರೋಧಿ ಕ್ರಮ ಕೈಗೊಳ್ಳಲಾಗುತ್ತದೆ. ಜೆಡಿಎಸ್‌ನವರಿಗೆ ತಮ್ಮ ಬೆಂಬಲ ಸಾಕಾಗದೇ, ಬಿಜೆಪಿ ಬಾವುಟ ಬಳಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ದುಮ್ಮೇನಹಳ್ಳಿ ಗಂಗಾಧರ್ ಮಾತನಾಡಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಂಪುರ ಸುನಿಲ್ ಶಾಸ್ತ್ರಿ, ಮಂಜುಕುಮಾರ್, ಬಾಣಾವರ ಕಿರಣ್, ವಿರುಪಾಕ್ಷ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಸಿಂಧು, ಮಾಜಿ ಅಧ್ಯಕ್ಷ ಪುರುಷೋತ್ತಮ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.