ADVERTISEMENT

ಖಾತೆ ತೆರೆದ ಕಾಂಗ್ರೆಸ್‌; ಬಲ ಹೆಚ್ಚಿಸಿಕೊಂಡ ಬಿಜೆಪಿ

ಹಾಸನ ಕೈವಶ ಮಾಡಿಕೊಂಡರೂ ಜಿಲ್ಲೆಯಲ್ಲಿ ಕುಸಿದ ಜೆಡಿಎಸ್‌ ಪ್ರಾಬಲ್ಯ: ಮತ ಮೂಲಕ ಎಚ್ಚರಿಕೆ ನೀಡಿದ ಮತದಾರ

ಚಿದಂಬರಪ್ರಸಾದ್
Published 13 ಮೇ 2023, 19:34 IST
Last Updated 13 ಮೇ 2023, 19:34 IST
ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್‌ ರೂಂನಲ್ಲಿ ಇರಿಸಿದ್ದ ಮತಯಂತ್ರಗಳನ್ನು ಎಣಿಕೆಗೆ ತೆಗೆದುಕೊಂಡು ಹೋಗಲಾಯಿತು.
ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್‌ ರೂಂನಲ್ಲಿ ಇರಿಸಿದ್ದ ಮತಯಂತ್ರಗಳನ್ನು ಎಣಿಕೆಗೆ ತೆಗೆದುಕೊಂಡು ಹೋಗಲಾಯಿತು.   

ಹಾಸನ: ಜೆಡಿಎಸ್‌ನ ಭದ್ರಕೋಟೆಯಲ್ಲಿ ಕುಸಿತ ಕಂಡು ಬಂದರೆ, ಹಾಸನ ಕ್ಷೇತ್ರವನ್ನು ಕಳೆದುಕೊಂಡರೂ, ಬಿಜೆಪಿ ಪ್ರಾಬಲ್ಯ ಹೆಚ್ಚಾಗಿದೆ. ಇನ್ನೊಂದೆಡೆ ಕಾಂಗ್ರೆಸ್‌ ಖಾತೆ ತೆರೆಯುವ ಮೂಲಕ ಸ್ವಲ್ಪ ನೆಮ್ಮದಿ ಮೂಡಿಸಿದೆ.

ಜೆಡಿಎಸ್ ಕೈವಶವಾಗಿರುವ ಅರಕಲಗೂಡು ಕ್ಷೇತ್ರದಲ್ಲಿ ಎ. ಮಂಜು, ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್‌.ಡಿ. ರೇವಣ್ಣ, ಶ್ರವಣಬೆಳಗೊಳದಲ್ಲಿ ಸಿ.ಎನ್‌. ಬಾಲಕೃಷ್ಣ, ಹಾಸನ ಕ್ಷೇತ್ರದಲ್ಲಿ ಸ್ವರೂಪ್‌ ಪ್ರಕಾಶ್‌ ಜಯಭೇರಿ ಬಾರಿಸಿದ್ದಾರೆ. ಜೆಡಿಎಸ್‌ ಹಿಡಿತದಲ್ಲಿದ್ದ ಸಕಲೇಶಪುರದಲ್ಲಿ ಸಿಮೆಂಟ್‌ ಮಂಜುನಾಥ, ಬೇಲೂರಿನಲ್ಲಿ ಎಚ್‌.ಕೆ. ಸುರೇಶ್‌ ಬಿಜೆಪಿ ಬಾವುಟ ಹಾರಿಸಿದ್ದಾರೆ. ಸೋಲುವ ಭೀತಿಯಿಂದಲೇ ಜೆಡಿಎಸ್‌ ತೊರೆದು, ಕಾಂಗ್ರೆಸ್‌ ಸೇರಿದ್ದ ಕೆ.ಎಂ. ಶಿವಲಿಂಗೇಗೌಡ ಅರಸೀಕೆರೆಯಲ್ಲಿ ನಾಲ್ಕನೇ ಬಾರಿ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯಾದ್ಯಂತ ಈ ಬಾರಿ ಮತದಾರರು ಅಳೆದು ತೂಗಿ ಮತ ಚಲಾಯಿಸಿದ್ದು, ಕೆಲಸ ಮಾಡದವರ ಬಗೆಗಿನ ಬೇಸರವನ್ನು ಮತದ ಮೂಲಕ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಹೊಸಬರಿಗೆ ಅವಕಾಶ ನೀಡುವ ಮೂಲಕ ಕ್ಷೇತ್ರದಲ್ಲಿ ಕೆಲಸ ಮಾಡಬಹುದು ಎನ್ನುವ ನಿರೀಕ್ಷೆಯನ್ನೂ ಹೊರಹಾಕಿದ್ದಾರೆ. ಅದಕ್ಕಾಗಿಯೇ ಘಟಾನುಘಟಿ ಅಭ್ಯರ್ಥಿಗಳೂ ಗೆಲುವಿನ ದಡ ಸೇರಲು ಹರಸಾಹಸ ಮಾಡುವಂತಾಗಿದೆ.

ADVERTISEMENT
ಸೇವಾ ಮತಪತ್ರಗಳ ಎಣಿಕೆಯಲ್ಲಿ ನಿರತರಾಗಿರುವ ಸಿಬ್ಬಂದಿ

ಅರಸೀಕೆರೆ ಹಾಗೂ ಅರಕಲಗೂಡಿನಲ್ಲಿ ಮಾತ್ರ ಅಭ್ಯರ್ಥಿಗಳ ಗೆಲುವಿನ ಅಂತರ ಐದು ಅಂಕಿ ದಾಟಿದ್ದರೆ, ಉಳಿದ ಐದು ಕ್ಷೇತ್ರಗಳ ಗೆಲುವಿನ ಅಂತರ ನಾಲ್ಕು ಅಂಕಿಗೆ ಸೀಮಿತವಾಗಿದೆ. ಎಲ್ಲ ಪಕ್ಷಗಳಿಂದಲೂ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು, ನಿರೀಕ್ಷಿಸಿದಂತೆಯೇ ಗೆಲುವಿನ ಅಂತರವೂ ಕಡಿಮೆಯಾಗಿದೆ.

ಸಕಲೇಶಪುರ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿದ್ದರೂ, ಕಾಡಾನೆ ಸಮಸ್ಯೆ, ಕಾಫಿ ಬೆಳೆಗಾರರ ಸಮಸ್ಯೆ, ಮೂಲಸೌಕರ್ಯಗಳ ಕೊರತೆಯಂತಹ ಸಮಸ್ಯೆಗಳಿಗೆ ಸ್ಪಂದಿಸದ ಜೆಡಿಎಸ್‌ನ ಎಚ್.ಕೆ. ಕುಮಾರಸ್ವಾಮಿ ಅವರ ಬದಲು, ಬಿಜೆಪಿಯ ಹೊಸ ಮುಖ ಸಿಮೆಂಟ್ ಮಂಜುನಾಥ ಅವರಿಗೆ ಮಣೆ ಹಾಕಿದ್ದಾರೆ.

ಸತತ 6 ನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಎಚ್‌.ಡಿ. ದೇವೇಗೌಡರ ಸಾಧನೆಯನ್ನು ಸರಿಗಟ್ಟಿರುವ ಪುತ್ರ ಎಚ್‌.ಡಿ. ರೇವಣ್ಣ, ಹೊಳೆನರಸೀಪುರದಲ್ಲಿ ಅಲ್ಪ ಮತಗಳ ಅಂತರದಿಂದ ಗೆಲುವಿನ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಇದು ಕೊನೆಯ ಎಚ್ಚರಿಕೆ ಎನ್ನುವ ಸಂದೇಶವನ್ನೂ ಮತದಾರರು ನೀಡಿದಂತಿದೆ.

ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಎಣಿಕೆ ಕಾರ್ಯವನ್ನು ಪರಿಶೀಲಿಸಿದರು.

ಬೇಲೂರಿನಲ್ಲಿಯೂ ಹಾಲಿ ಶಾಸಕ ಜೆಡಿಎಸ್‌ನ ಕೆ.ಎಸ್. ಲಿಂಗೇಶ್‌ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಬಿಜೆಪಿಯ ಎಚ್‌.ಕೆ. ಸುರೇಶ್‌ ಎರಡನೇ ಪ್ರಯತ್ನದಲ್ಲಿ ಗೆಲುವಿನ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರವಣಬೆಳಗೊಳದಲ್ಲಿ ಹಾಲಿ ಶಾಸಕ ಜೆಡಿಎಸ್‌ನ ಸಿ.ಎನ್‌. ಬಾಲಕೃಷ್ಣ ಕೇವಲ 6,645 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಕೊನೆಯ ಕ್ಷಣದಲ್ಲಿ ಟಿಕೆಟ್ ಘೋಷಿಸಿದರೂ, ಕಾಂಗ್ರೆಸ್‌ ಅಭ್ಯರ್ಥಿ ಎಂ.ಎ. ಗೋಪಾಲಸ್ವಾಮಿ ಪ್ರಬಲ ಪೈಪೋಟಿ ನೀಡಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಮತ ಎಣಿಕೆ ಕೇಂದ್ರದಲ್ಲಿ ಹಾಸನ ಕ್ಷೇತ್ರದ ವಿಜೇತ ಅಭ್ಯರ್ಥಿ ಸ್ವರೂಪ್‌ ಪ್ರಕಾಶ್‌ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.

ಅರಕಲಗೂಡಿನಲ್ಲಿ ಎ.ಟಿ. ರಾಮಸ್ವಾಮಿ ಅವರ ಬಿಜೆಪಿ ಸೇರ್ಪಡೆ ಯಾವುದೇ ಪ್ರಭಾವ ಬೀರಿಲ್ಲ. ಬಿಜೆಪಿ ಅಭ್ಯರ್ಥಿ ಯೋಗಾ ರಮೇಶ್‌ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಅವರು ಮೂರನೇ ಸ್ಥಾನದಲ್ಲಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಧರ್ ಗೌಡ ಮೂರನೇ ಸ್ಥಾನಕ್ಕೆ ಇಳಿದರೆ, ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಎರಡನೇ ಸ್ಥಾನದಲ್ಲಿರುವುದು ವಿಶೇಷ. ಜೆಡಿಎಸ್ ಸೇರಿದ್ದ ಮಂಜು, 19,605 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದರೆ, ಗೆಲುವು ಸಾಧ್ಯವಿಲ್ಲ ಎಂಬ ಕೆ.ಎಂ. ಶಿವಲಿಂಗೇಗೌಡರ ಲೆಕ್ಕಾಚಾರ ನಿಜವಾಗಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಮೂಲಕ 20 ಸಾವಿರ ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿದ್ದಾರೆ. ಜೊತೆಗೆ ಕಾಂಗ್ರೆಸ್‌ನಿಂದ ಆಯ್ಕೆಯಾದ ಜಿಲ್ಲೆಯ ಏಕೈಕ ಶಾಸಕ ಎನ್ನುವ ಹೆಗ್ಗಳಿಕೆಯೂ ಅವರದ್ದಾಗಿದೆ.

ಸ್ವರೂಪ್‌ ಬೆಂಬಲಿಗರು ಹಾಸನದಲ್ಲಿ ಬೈಕ್‌ ರ‍್ಯಾಲಿ ನಡೆಸಿದರು.
ಹೊಳೆನರಸೀಪುರ ಕ್ಷೇತ್ರದಿಂದ 6 ನೇ ಬಾರಿ ಎಚ್‌.ಡಿ. ರೇವಣ್ಣ ಆಯ್ಕೆ ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ ಸತತ 3 ಬಾರಿಗೆ ಗೆಲ್ಲುವ ಮೂಲಕ ಸಿ.ಎನ್‌. ಬಾಲಕೃಷ್ಣ ಹ್ಯಾಟ್ರಿಕ್‌ ಸಾಧನೆ

ಸ್ವರೂಪ್‌ ಬೆನ್ನಿಗೆ ನಿಂತ ಮತದಾರರು ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಸ್ವರೂಪ್‌ ಪ್ರಕಾಶ್‌ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಪಸಂಖ್ಯಾತರ ಮತಗಳೇ ಸ್ವರೂಪ್‌ ಗೆಲುವಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕಳೆದ ಬಾರಿ 40 ಸಾವಿರಕ್ಕೂ ಅಧಿಕ ಮತಗಳನ್ನು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ. ಮಹೇಶ್ ಪಡೆದಿದ್ದರು. ಆದರೆ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬನವಾಸೆ ರಂಗಸ್ವಾಮಿ ಮತದಾರರನ್ನು ಸೆಳೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದು ಕೇವಲ 4305 ಮತಗಳನ್ನು ಪಡೆದಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ಬಹುತೇಕ ಮತಗಳು ಜೆಡಿಎಸ್‌ ಪಾಲಾಗಿದ್ದು ಸ್ವರೂಪ್‌ ಅವರ ಗೆಲುವಿಗೆ ಬಹುದೊಡ್ಡ ಕೊಡುಗೆ ನೀಡಿದಂತಾಗಿದೆ. ತಮ್ಮ ಹೇಳಿಕೆಗಳ ಮೂಲಕವೇ ಸಾಕಷ್ಟು ಹೆಸರಾಗಿದ್ದ ಪ್ರೀತಂ ಗೌಡರ ಸೋಲಿಗೆ ಅವರ ಸ್ವಯಂಕೃತ ಅಪರಾಧವೇ ಕಾರಣ ಎನ್ನುವ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ. ಆದರೆ ಇದನ್ನು ಒಪ್ಪದ ಪ್ರೀತಂ ಗೌಡ ‘ಕಳೆದ ಬಾರಿ 63 ಸಾವಿರ ಮತ ಪಡೆದಿದ್ದೆ. ಈ ಬಾರಿ ಮತಗಳ ಪ್ರಮಾಣ 77 ಸಾವಿರಕ್ಕೆ ಏರಿದೆ. ಒಂದು ಸಮುದಾಯ ಜೆಡಿಎಸ್‌ ಪರವಾಗಿ ನಿಂತಿದೆ. ನಾನು ಹೋರಾಟದಿಂದ ಬಂದವನು. ವಿರಮಿಸುವ ಪ್ರಶ್ನೆ ಇಲ್ಲ. ಸೋಲಿನಿಂದ ಕುಗ್ಗುವುದಿಲ್ಲ. ನಾಳೆಯಿಂದಲೇ 2028 ರ ಚುನಾವಣೆಗೆ ಸಿದ್ಧತೆ ಆರಂಭಿಸುತ್ತೇನೆ’ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಗೆ ಈಗಿನಿಂದಲೇ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ಆದರೆ ‘ಈ ಗೆಲುವಿಗೆ ಮತದಾರರ ಆಶೀರ್ವಾದ ದೇವೇಗೌಡರು ಕುಮಾರಸ್ವಾಮಿ ಎಚ್‌.ಡಿ. ರೇವಣ್ಣ ಭವಾನಿ ರೇವಣ್ಣ ಪ್ರಜ್ವಲ್‌ ಸ್ವರೂಪ್‌ ಅವರ ಬೆಂಬಲವೇ ಕಾರಣ’ ಎಂದು ಸ್ವರೂಪ್‌ ಪ್ರಕಾಶ ತಿಳಿಸಿದ್ದಾರೆ. ಸತತ ಆರು ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಜಯಗಳಿಸಿದ್ದ ದಿವಂಗತ ಎಚ್‌.ಎಸ್. ಪ್ರಕಾಶ್ ಪುತ್ರ ಸ್ವರೂಪ್‌ ಮೊದಲ ಪ್ರಯತ್ನದಲ್ಲಿಯೇ ಶಾಸಕರಾಗಿ ಆಯ್ಕೆಯಾಗಿರುವುದು ದಾಖಲೆಯಾಗಿದೆ. ತಂದೆ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಈಗ ಮಗನೂ ಆಯ್ಕೆಯಾಗಿರುವುದು ವಿಶೇಷ.

ಸ್ವರೂಪ್‌ ಪ್ರಕಾಶ್‌ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

- ಒಟ್ಟು 5554 ಮತ ನೋಟಾಕ್ಕೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಒಟ್ಟು 5554 ಮತಗಳು ನೋಟಾಕ್ಕೆ ಬಿದ್ದಿವೆ. ಕಣದಲ್ಲಿರುವ ಯಾವ ಅಭ್ಯರ್ಥಿಗಳಿಗೆ ಮತ ಹಾಕಲು ಇಷ್ಟ ಇಲ್ಲದೇ ಇದ್ದಲ್ಲಿ ನೋಟಾಕ್ಕೆ ಮತ ಹಾಕಲು ಅವಕಾಶವಿದ್ದು ಐದೂವರೆ ಸಾವಿರ ಮತದಾರರು ನೋಟಾ ಆಯ್ದುಕೊಂಡಿದ್ದಾರೆ. ಸಕಲೇಶಪುರ ಕ್ಷೇತ್ರದಲ್ಲಿ ಗರಿಷ್ಠ 1231 ಮತಗಳು ನೋಟಾಕ್ಕೆ ಬಿದ್ದಿದ್ದರೆ ಹಾಸನ ಕ್ಷೇತ್ರದಲ್ಲಿ 888 ಅರಕಲಗೂಡಿನಲ್ಲಿ 624 ಅರಸೀಕೆರೆಯಲ್ಲಿ 617 ಬೇಲೂರಿನಲ್ಲಿ 767 ಹೊಳೆನರಸೀಪುರದಲ್ಲಿ 760 ಶ್ರವಣಬೆಳಗೊಳದಲ್ಲಿ 667 ಮತಗಳು ನೋಟಾಕ್ಕೆ ಬಿದ್ದಿವೆ. ಇನ್ನು ತಿರಸ್ಕೃತ ಮತಗಳ ಸಂಖ್ಯೆಯೂ ಹೆಚ್ಚಾಗಿದ್ದು ಒಟ್ಟು 725 ಮತಗಳು ತಿರಸ್ಕೃತಗೊಂಡಿವೆ. ಅರಕಲಗೂಡು ಹೊಳೆನರಸೀಪುರ ಹಾಸನ ಶ್ರವಣಬೆಳಗೊಳ ಕ್ಷೇತ್ರದಲ್ಲಿ 140 ರ ಆಸುಪಾಸಿನಲ್ಲಿ ಮತಗಳು ತಿರಸ್ಕೃತಗೊಂಡಿವೆ. ಬೇಲೂರಿನಲ್ಲಿ 66 ಅರಸೀಕೆರೆಯಲ್ಲಿ 45 ಮತಗಳು ತಿರಸ್ಕೃತಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.