ADVERTISEMENT

ಅರಸೀಕೆರೆ: ಕರಿಯಮ್ಮ ದೇವಿಗೆ ಬಳೆ ಅಲಂಕಾರ

ಗ್ರಾಮ ದೇವತೆಗೆ ಭಕ್ತರಿಂದ ವಿವಿಧ ಬಗೆಯ ಬಳೆಗಳ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 2:34 IST
Last Updated 27 ಆಗಸ್ಟ್ 2025, 2:34 IST
ಅರಸೀಕೆರೆ ಕರಿಯಮ್ಮ ದೇವಿಗೆ ವಿಶೇಷವಾಗಿ ಬಳೆಯ ಅಲಂಕಾರ ಮಾಡಿರುವುದು
ಅರಸೀಕೆರೆ ಕರಿಯಮ್ಮ ದೇವಿಗೆ ವಿಶೇಷವಾಗಿ ಬಳೆಯ ಅಲಂಕಾರ ಮಾಡಿರುವುದು   

ಅರಸೀಕೆರೆ: ಭಾದ್ರಪದ ಮಾಸ ಗೌರಿ ಹಬ್ಬ ಬಂತೆಂದರೆ, ಮನೆ ಮನೆಗಳಲ್ಲಿ ಗೌರಿ ಪೂಜೆ ಸಲ್ಲಿಸಿ ಬಾಗಿನ ಕೊಡುವುದು ವಾಡಿಕೆ. ಆದರೆ ಗ್ರಾಮದೇವತೆ ದೇವಸ್ಥಾನದಲ್ಲಿ ಪ್ರತಿವರ್ಷವೂ ಬಣ್ಣ ಬಣ್ಣದ ಬಳೆ ಅಲಂಕಾರ ಮಾಡುವ ಮೂಲಕ ವಿಶೇಷವಾಗಿ ಬಳೆ ಹಾಗೂ ಹೂಗಳಿಂದ ಕರಿಯಮ್ಮ ದೇವಿಯೂ ಕಂಗೊಳಿಸುತ್ತಿದ್ದು, ಸಹಸ್ರಾರು ಭಕ್ತರು ಕಣ್ತುಂಬಿಕೊಳ್ಳುತ್ತಾರೆ.

ಗೌರಿ ಹಬ್ಬದ ಪ್ರಯುಕ್ತ ಬಳೆ ಹಾಗೂ ಬಾಗಿನ ಸಾಮಗ್ರಿಗಳನ್ನು ನೆಂಟರಿಷ್ಟರಿಗೆ ನೀಡಲಾಗುತ್ತದೆ. ಆದರೆ ಇಲ್ಲಿ ಗೌರಿ ಹಬ್ಬ ಸಮೀಪಿಸುತ್ತಿದ್ದಂತೆ ಭಕ್ತರು ಅಮ್ಮನವರಿಗೆ ಬಳೆಗಳನ್ನು ಸಲ್ಲಿಸುವುದು ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಬ್ಬದ ಹಿಂದಿನ ದಿನ ಬಣ್ಣ ಬಣ್ಣದ ಬಳೆಗಳನ್ನು ವಿಂಗಡಿಸಿ, ಸರಮಾಲೆಯ ರೂಪದಲ್ಲಿ ಆಕರ್ಷಕವಾಗಿ ಕರಿಯಮ್ಮ ದೇವಿಗೆ ಅಲಂಕಾರ ಮಾಡಲಾಗುತ್ತದೆ.

ಫ್ಯಾನ್ಸಿ ಬಳೆಗಳು, ಹಸಿರು, ಕೆಂಪು, ಹಳದಿ, ನೀಲಿ, ನೇರಳೆ ಸೇರಿ ವಿವಿಧ ಬಣ್ಣಗಳ ಬಳೆಗಳನ್ನು ಎರಡು ವಾರದಿಂದಲೂ ಭಕ್ತರು ದೇವಸ್ಥಾನಕ್ಕೆ ತಂದು ಕೊಡುತ್ತಿದ್ದರು. ಹಬ್ಬದ ಹಿಂದಿನ ದಿನ ರಾತ್ರಿ ಅರ್ಚಕರು ಅಮ್ಮನವರಿಗೆ ಬಳೆ ಅಲಂಕಾರ ಮಾಡುತ್ತಿದ್ದು, ಬೆಳಿಗ್ಗೆ ವಿಶೇಷ ಪೂಜೆ ಮಾಡುವ ಮೂಲಕ ಭಕ್ತರಿಗೆ ದರ್ಶನ ಮಾಡಲು ಅವಕಾಶ ಮಾಡಿಕೊಡುತ್ತಾರೆ.

ADVERTISEMENT

ದೇವಿಗೆ ಅರಿಸಿನ, ಕುಂಕುಮ, ಎಲೆ–ಅಡಿಕೆ, ಹಣ್ಣು ನೀಡಿ, ದರ್ಶನ ಮಾಡಲು ಗೌರಿ ಹಬ್ಬದಂದು ಭಕ್ತರು ಕುಟುಂಬ ಸಮೇತ ಬರುತ್ತಾರೆ. ಅದರಲ್ಲೂ ಈ ಸಲ ಮಂಗಳವಾರ ಗೌರಿ ಹಬ್ಬ ಬಂದಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಬೆಳಿಗ್ಗೆಯಿಂದ ರಾತ್ರಿಯವರೆಗೂ ತಾಳ್ಮೆಯಿಂದ ಭಕ್ತರು ವೀಕ್ಷಿಸಿ ದರ್ಶನ ಪಡೆದು ಕೃತಾರ್ಥರಾದರು.

ಗೌರಿ ಹಬ್ಬದ ದಿನದಂದು ದೇವಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇರುವುದರಿಂದ ಹೆಚ್ಚಾಗಿ ದರ್ಶನ ಪಡೆಯುತ್ತಾರೆ.
ಬಸವರಾಜು ಅರ್ಚಕ
ಬಳೆಯು ಹಿಂದೂ ಸಂಸ್ಕೃತಿಯ ಪವಿತ್ರ ವಸ್ತುವಾಗಿದ್ದು ಗೌರಿ ಮತ್ತು ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷವೂ ದೇವಿಗೆ ಬಳೆ ಅಲಂಕಾರ ಮಾಡಲಾಗುವುದು.
ವಿನಯ್‌ ಅರ್ಚಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.