
ಹಿರೀಸಾವೆ: ರಾಸುಗಳ ವ್ಯಾಪಾರ ನಡೆಯುವುದಿಲ್ಲ. ಆದರೆ ಗೋವುಗಳನ್ನು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಮಾಡಿ, ದೇವರ ತೀರ್ಥವನ್ನು ಹಾಕಿಸಿ, ನಮ್ಮ ಜಾನುವಾರುಗಳನ್ನು ಕಾಪಾಡು ಎಂದು ಪೂಜೆ ಸಲ್ಲಿಸುವ ಹೋಬಳಿಯ ಕಬ್ಬಳಿ ಗ್ರಾಮದ ಬಸವೇಶ್ವರ ಸ್ವಾಮಿಯ ಜಾತ್ರೆ ಶನಿವಾರದಿಂದ ಐದು ದಿನ ನಡೆಯಲಿದೆ.
ಕಲ್ಲೇಶ್ವರ, ಮಲ್ಲೇಶ್ವರ, ಸೋಮೇಶ್ವರ, ಕಾಲ ಭೈರವೇಶ್ವರ ಮತ್ತು ಬಸವೇಶ್ವರ ಸ್ವಾಮಿಯ ಪಂಚಲಿಂಗಗಳು ಇರುವ ಗ್ರಾಮ ಕಬ್ಬಳಿ. ಊರ ಹೊರಗೆ ಇರುವ ಬಸವೇಶ್ವರ ಸ್ವಾಮಿಯ ಮೂಲ ದೇವಸ್ಥಾನದ ಆವರಣದಲ್ಲಿ ಈ ಜಾತ್ರೆ ಜರುಗುತ್ತದೆ.
ನಿತ್ಯ ಬೆಳಗ್ಗಿನ ಸಮಯದಲ್ಲಿ ದೇವರಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ವಿಶೇಷ ಪೂಜೆ, ಸ್ವಾಮಿ ಉತ್ಸವ ನಡೆಯುತ್ತದೆ. ಸಂಜೆ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಶನಿವಾರ (ನ.1) ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೂಲ ಸ್ಥಾನಕ್ಕೆ ಕರೆತರುವ ಮೂಲಕ ಜಾತ್ರೆಗೆ ಚಾಲನೆ ನೀಡಲಿದ್ದಾರೆ. ಸಂಜೆ ಬಸವೇಶ್ವರ ಸ್ವಾಮಿ ಇಂಗ್ಲಿಷ್‌ಸ್ಕೂಲ್ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಾರೆ.
ಸೋಮವಾರ (ನ.3) ಬೆಳಿಗ್ಗೆ ಪ್ರದೀಪಾ– ವೆಂಕಟೇಶ ಪ್ರಸಾದ ದಂಪತಿ ಸಹಕಾರದಿಂದ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಮೂಕಿಕೆರೆ ಗ್ರಾಮಸ್ಥರ ಸಹಕಾರದಲ್ಲಿ ಬಸವೇಶ್ವರ ಸ್ವಾಮಿಯ ಸರ್ಪೋತ್ಸವ, ದಸರಿ ಘಟ್ಟದ ಚೌಡೇಶ್ವರಿ ದೇವಿ, ಬಾಲಗಂಗಾಧರನಾಥ ಸ್ವಾಮೀಜಿಯ ಪುತ್ಥಳಿ, ನಿರ್ಮಲಾನಂದನಾಥ ಸ್ವಾಮೀಜಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.
ರಾತ್ರಿ 8 ಗಂಟೆಗೆ ತೆಪ್ಪೋತ್ಸವ ಮತ್ತು ಧಾರ್ಮಿಕ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ವಿವಿಧ ಸ್ವಾಮೀಜಿಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸುವರು. ತುಮಕೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಜಾತ್ರೆಗೆ ಬರುತ್ತಾರೆ. ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ (ನ.5) ಸಂಜೆ ಧರ್ಮಧ್ವಜ ಆವರೋಹಣದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.
ಶಾಲಾ ಮಕ್ಕಳಿಗೆ ಉಚಿತ
ನೇತ್ರ ತಪಾಸಣೆ ಈ ವರ್ಷ ಆದಿಚುಂಚನಗಿರಿ ಆಸ್ಪತ್ರೆ ವತಿಯಿಂದ ಎಲ್ಲ ಶಾಲಾ ಮಕ್ಕಳ ಉಚಿತ ಕಣ್ಣಿನ ತಪಾಸಣೆ ನಡೆಸಿ ಅಗತ್ಯ ಇರುವವರಿಗೆ ಕನ್ನಡಕ ನೀಡಲಾಗುವುದು ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಗುರುವಾರ ತಿಳಿಸಿದರು. ಮೊದಲ ಹಂತದಲ್ಲಿ ಇಲ್ಲಿನ ಬಸವೇಶ್ವರ ಸ್ವಾಮಿಯ ಶಾಲೆಯ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಿ 35 ಮಕ್ಕಳಿಗೆ ಸ್ವಾಮೀಜಿ ಕನ್ನಡಕ ವಿತರಿಸಲಾಗಿದೆ ಎಂದರು. ಆಸ್ಪತ್ರೆಯ ಪಿಆರ್‌ಒ ಧರ್ಮೇಂದ್ರ ಮಾತನಾಡಿ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಡಿಸೆಂಬರ್ 12ರ ವರೆಗೆ ಸೀಳು ತುಟಿ ಸೀಳು ಅಂಗುಳ ಮತ್ತು ಸುಟ್ಟ ಗಾಯಗಳಿಂದ ಉಂಟಾದ ವಿರೂಪಗಳಿಗೆ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ ಎಂದರು. ಶಾಲೆ ಮುಖ್ಯ ಶಿಕ್ಷಕ ತಿಮ್ಮೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.