ಹಾಸನ: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಪನ್ನಸಮುದ್ರ ಗ್ರಾಮದ ಚಿಟ್ಟಿ ಮೇಳ ಕಲಾವಿದ ಕುಮಾರಯ್ಯ ಅವರಿಗೆ ಒಲಿದಿದೆ. 69 ವರ್ಷದ ಕುಮಾರಯ್ಯ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು, ಬಾಲ್ಯದಿಂದಲೇ ಚಿಟ್ಟಿಮೇಳದಲ್ಲಿ ಸಕ್ರಿಯರಾಗಿದ್ದರು.
1994ರಲ್ಲಿ ನವದೆಹಲಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಿಟ್ಟಿ ಮೇಳ ಪ್ರದರ್ಶಿಸಿದ್ದಾರೆ. ಅದೇ ವರ್ಷ ರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಚಿಟ್ಟಿಮೇಳ ಕಲೆ ಪ್ರದರ್ಶನ ನೀಡಿದ್ದಾರೆ.
ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿರುವ ಕುಮಾರಯ್ಯ, ಗ್ರಾಮೀಣ ಭಾಗದ ಕಲಾವಿದನನ್ನು ಸರ್ಕಾರ ಗುರುತಿಸಿದೆ. ಇದು ಚಿಟ್ಟಿಮೇಳಕ್ಕೆ ದೊರೆತ ಗೌರವ. ಪ್ರಶಸ್ತಿ ಬಂದಿರುವುದು ಖುಷಿ ನೀಡಿದೆ ಎಂದರು.
ಮದನಗೌಡರಿಗೆ ಪ್ರಶಸ್ತಿ ಗರಿ
ಹಾಸನ: ಜನಮಿತ್ರ ಪತ್ರಿಕೆಯ ಪ್ರಧಾನ ಸಂಪಾದಕ ಎಚ್.ಬಿ. ಮದನಗೌಡರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಲಭಿಸಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಹೆತ್ತೂರು ಗ್ರಾಮದಲ್ಲಿ 1965 ಜುಲೈ 9 ರಂದು ಜನಿಸಿದ ಮದನಗೌಡರು, ವಿದ್ಯಾರ್ಥಿ ಜೀವನದಲ್ಲಿಯೇ ಸ್ಥಳೀಯ ಪತ್ರಿಕೆಗಳಿಗೆ ಕಥೆ, ಕವನಗಳನ್ನು ಬರೆಯುತ್ತಿದ್ದರು. ಈ ಹವ್ಯಾಸವೇ ಅವರನ್ನು ವೃತ್ತಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಎಳೆದು ತಂದಿತು.
1986ರಲ್ಲಿ ಸಕಲೇಶಪುರದಲ್ಲಿ ಮಾರ್ಗಪ್ರಭ ದಿನಪತ್ರಿಕೆ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ ಮದನಗೌಡರು, ನಂತರ ಹಲವು ಪತ್ರಿಕೆಗಳ ವರದಿಗಾರರಾಗಿಯೂ ಸೇವೆ ಸಲ್ಲಿಸಿದರು. ಮದನಗೌಡರು ಜ್ಞಾನದೀಪ ದಿನಪತ್ರಿಕೆ ವ್ಯವಸ್ಥಾಪಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಲವಾರು ಯುವ ಪತ್ರಕರ್ತರನ್ನು ಪ್ರೋತ್ಸಾಹಿಸಿದ್ದಲ್ಲದೆ, ಯವ ಕವಿಗಳು ಮತ್ತು ಕಥೆಗಾರರಿಗೂ ವೇದಿಕೆ ಕಲ್ಪಿಸಿ ಸಾಹಿತ್ಯ ಲೋಕಕ್ಕೂ ಕೊಡುಗೆ ನೀಡಿರುವುದು ವಿಶೇಷ.
ಬಾನು ಮುಷ್ತಾಕ್ ಗೆ ಸುವರ್ಣ ಮಹೋತ್ಸವ ಪ್ರಶಸ್ತಿ
ಹಾಸನ: ಈ ಬಾರಿಯ ಸುವರ್ಣ ಮಹೋತ್ಸವ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತಿ ಬಾನು ಮುಷ್ತಾಕ್ ಭಾಜರಾಗಿದ್ದಾರೆನಗರದಲ್ಲಿ ನೆಲೆಸಿರುವ ಬಾನು ಮುಷ್ತಾಕ್ ಅವರು ಲೇಖಕಿಯಾಗಿ ಪತ್ರಕರ್ತೆಯಾಗಿ ನ್ಯಾಯವಾದಿಯಾಗಿ ಕ್ರಿಯಾಶೀಲರಾಗಿದ್ದಾರೆ.
ಐದು ಕಥಾ ಸಂಕಲನ ಮತ್ತು ಒಂದು ಪ್ರಬಂಧ ಸಂಕಲನ ಪ್ರಕಟಿಸಿರುವ ಅವರು ಕೌಟುಂಬಿಕ ತಡೆ ಕಾಯ್ದೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಫಾರಸಿ ಕೃತಿ ತಾರೀಖ್ -ಎ-ಫೆರಿಸ್ತಾವನ್ನು ಉರ್ದುವಿನಿಂದ ಕನ್ನಡೀಕರಿಸಿದ್ದಾರೆ. ಕರಿನಾಗರಗಳು’ ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಅವರು ’ಹಸೀನಾ’ ಚಿತ್ರ ನಿರ್ದೇಶಿಸಿದ್ದರು. ಬಾನು ಅವರ ಅನೇಕ ಕತೆಗಳು ಹಿಂದಿ ಇಂಗ್ಲಿಷ್ ಉರ್ದು ಮಲಯಾಳಂ ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ.1954 ಏಪ್ರಿಲ್ 03 ರಂದು ಹಾಸನದಲ್ಲಿ ಜನಿಸಿರುವ ಅವರು ಬರೆದ 'ಬೆಂಕಿಮಳೆ' ಕತೆ ಹಸೀನಾ ಹೆಸರಲ್ಲಿ ಚಲನಚಿತ್ರವಾಗಿ 3 ರಾಷ್ಟ್ರಪ್ರಶಸ್ತಿಗಳಿಸಿದೆ.
’ಕುಬ' ಬಡವರ ಮಗಳು ಹೆಣ್ಣಲ್ಲ’ ಕಾದಂಬರಿ ರಚಿಸಿದ್ದಾರೆ. ಲಂಕೇಶ್ ಪತ್ರಿಕೆಗೆ ಜಿಲ್ಲಾ ವರದಿಗಾರರಗಾಗಿ 9 ವರ್ಷ ಸೇವೆ ಸಲ್ಲಿಸಿದ್ದಾರೆ. 'ಹೆಜ್ಜೆ ಮೂಡಿದ ಹಾದಿ ಬೆಂಕಿಮಳೆ ಎದೆಯ ಹಣತೆ' ಕಥಾಸಂಕಲನ ಹೊರತಂದಿದ್ದು ಅವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
’ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪದ್ಮಭೂಷಣ ಬಿ.ಸರೋಜದೇವಿ ಸಾಹಿತ್ಯ ಪ್ರಶಸ್ತಿ ಒಮ್ಮೆ ಹೆಣ್ಣಾಗು ಪ್ರಭುವೆ ನಾಟಕ ರೂಪಾಂತರಕ್ಕೆ ಇಂಟರ್ ನ್ಯಾಷನಲ್ ವುಮನ್ ಫಾರ್ ರೇಡಿಯೋ ಆ್ಯಂಡ್ ಟೆಲಿವಿಷನ್ ಬಹುಮಾನ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ ಹಾಗೂ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಪ್ರಶಸ್ತಿ ಸುಧಾಮೂರ್ತಿ ಪ್ರಶಸ್ತಿಗಳು ಸಂದಿವೆ. ಅವರ ಅನೇಕ ಕಥೆಗಳು ಹಿಂದಿ ಮಲಯಾಳಿ ಇತ್ಯಾದಿ ಭಾಷೆಗಳಿಗೆ ಅನುವಾದಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.