
ಹಾಸನ: ನಗರದ ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾಶಾಲೆಯಲ್ಲಿ ಬುಧವಾರ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಆರ್. ರಾಜಗೋಪಾಲ ಶೆಟ್ಟಿ, ಕನ್ನಡಾಂಬೆ ಚಿತ್ರಕ್ಕೆ ಪುಷ್ಪನಮನ ಮಾಟಿ ಉದ್ಘಾಟಿಸಿದರು.‘50 ವರ್ಷಗಳಲ್ಲಿ ಕನ್ನಡವು ನಮ್ಮೆಲ್ಲ ಕನ್ನಡಿಗರ ತನು, ಮನಗಳಲ್ಲಿ ಬೇರೂರಿದೆ. ವರ್ಷ ಪೂರ್ತಿ ಕನ್ನಡದ ಬಳಕೆ, ಅದರ ಅಭಿಮಾನ, ಅದರ ಉಳಿಸುವಿಕೆ ಹಾಗೂ ಬೆಳೆಸುವಿಕೆ ಪ್ರತಿಯೊಬ್ಬರ ಜವಾಬ್ದಾರಿ’ ಎಂದರು.
ಶಾಲೆಯ ವಿದ್ಯಾರ್ಥಿಗಳಿಂದ ಕನ್ನಡ ಭಾಷೆಗೆ ಸಂಬಂಧಿಸಿದ ಭಾಷಣಗಳು, ವೇಷಭೂಷಣ, ವೃಂದಗೀತೆ, ರೂಪಕಗಳು, ಕನ್ನಡ ನುಡಿಮುತ್ತುಗಳು, ಕನ್ನಡದ ವಿಶೇಷತೆಗಳು, ಕನ್ನಡದ ಕವಿಗಳು, ಕನ್ನಡ ಹಾಡುಗಳಿಗೆ ನೃತ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮ ನಡೆದವು.
ಸಂಸ್ಥೆಯ ಕಾರ್ಯದರ್ಶಿ ನಟರಾಜ್ ಎಂ., ಆಶಾ ನಟರಾಜ್, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯ ಶಾಲೆ: ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸುತ್ತ ನಾವು ಬದುಕಬೇಕು ಎಂದು ಮುಖ್ಯ ಶಿಕ್ಷಕ ಕೆ.ಎಸ್.ನಂದೀಶ ಹೇಳಿದರು.
ವಿಜಯ ಶಾಲೆಯಲ್ಲಿ ನಡೆದ 68ನೇ ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿನಿ ಚಿನ್ಮಯಿ ಎಸ್. ಉದಯ್, ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕನ್ನಡ ಶಿಕ್ಷಕಿ ಮಂಜುಳ ಎಂ., ಕನ್ನಡ ನಾಡಿನ ಇತಿಹಾಸ, ಭಾಷೆಯ ಮಹತ್ವ ತಿಳಿಸಿದರು. ಶಾಲೆಯಲ್ಲಿ ನಡೆಸಲಾದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ತಪ್ಪಿಲ್ಲದೇ ಬರೆದ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ನೀಡಿ ಅಭಿನಂದಿಸಲಾಯಿತು.
ರಶ್ಮಿ ಬಿ.ಎನ್. ನಿರೂಪಿಸಿದರು. ಕ್ಷೀರ ಎಸ್. ಸ್ವಾಗತಿಸಿ, ವಂದಿಸಿದರು. ಶಾಲಾ ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.
ಜನಪ್ರಿಯ ಆಸ್ಪತ್ರೆ: ಕರ್ನಾಟಕ ರಾಜ್ಯೋತ್ಸವವನ್ನು ನಗರದ ಜನಪ್ರಿಯ ನರ್ಸಿಂಗ್ ಕಾಲೇಜು, ಜನಪ್ರಿಯ ಪ್ಯಾರಾ ಮೆಡಿಕಲ್ ಕಾಲೇಜು, ಜನಪ್ರಿಯ ಆಸ್ಪತ್ರೆ ಮತ್ತು ಜನಪ್ರಿಯ ಗೆಳೆಯರ ಬಳಗದ ಆಶ್ರಯದಲ್ಲಿ ಆಚರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್ ಮಾತನಾಡಿ, ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಬೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ, ಗುಡ್ಡ, ನದಿಗಳು, ಸಾಧು-ಸಂತರು-ದಾಸರು- ಶಿವಶರಣರು - ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ ಎಂದರು.
ಜನಪ್ರಿಯ ಫೌಂಡೇಶನ್‍ನ ಮುಖ್ಯಸ್ಥ ಡಾ.ವಿ.ಕೆ. ಅಬ್ದುಲ್ ಬಷೀರ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಸ್ಥಿತಿಗತಿ ಬದಲಾಗಿದೆ. ಕನ್ನಡದ ಮೇಲೆ ಇತರೆ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ. ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ. ಇಂತಹ ಸಮಯದಲ್ಲಿ ಕನ್ನಡದ ಅಸ್ಮಿತೆಗಾಗಿ ಎಲ್ಲರೂ ಹೋರಾಡಬೇಕಾಗಿದೆ ಎಂದರು.
ಜನಪ್ರಿಯ ಫೌಂಡೇಶನ್ ನ ಉಪಾಧ್ಯಕ್ಷೆ ಫಾತಿಮಾ ನಸ್ರೀನ್ ಬಶೀರ್, ಹೃದ್ರೋಗ ತಜ್ಞ ಡಾ. ಅನುಪ್, ಮೂಳೆತಜ್ಞ ಡಾ.ರಾಜತ್, ಡಾ. ನುಹ್‍ಮಾನ್, ಶಸ್ತ್ರಚಿಕಿತ್ಸಕ ಡಾ. ಪ್ರವೀಣ್, ಅರಿವಳಿಕೆ ತಜ್ಞ ಡಾ.ಲಿಂಗರಾಜ್, ಡಾ.ಸೈಯದ್ ನಹಿದ್, ಆಡಳಿತಾಧಿಕಾರಿ ಮೊಹಮದ್ ಕಿಸಾರ್, ಕಾಲೇಜಿನ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಮತ್ತು ಜನಪ್ರಿಯ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.
ಮಲಬಾರ್ ಗೋಲ್ಡ್: ನಗರದ ಬಿ.ಎಂ. ರಸ್ತೆಯ ಮಲಬಾರ್ ಗೋಲ್ಡ್ ಆಂಡ್ ಡ್ರೈಮಂಡ್ಸ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಮಲಬಾರ್ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್‌ನ ಆಸಕ್ತ ಸಿಬ್ಬಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಸುಮಾರು 15 ಯುನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ರಕ್ತದಾನ ಮಾಡುವುದರ ಮೂಲಕ ಅರ್ಥಪೂರ್ಣವಾದ ಆಚರಿಸಲಾಯಿತು ಎಂದು ಶಾಖಾ ಮುಖ್ಯಸ್ಥ ದಯಾನಂದ ಕೆ.ಆರ್. ತಿಳಿಸಿದರು. ಜೀವ ರಕ್ಷಾ ರಕ್ತನಿಧಿಯ ಮೋಹನ್, ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
ಶಾಖಾ ಸಹ ಮುಖ್ಯಸ್ಥ ಅದಿತ್, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.