ADVERTISEMENT

ಹಾಸನ: ದಿನವಿಡೀ ಮಳೆಗೆ ಜನತೆ ತತ್ತರ

ಹೇಮಾವತಿ ಜಲಾಶಯದ ಒಳ ಹರಿವು 30 ಸಾವಿರ ಕ್ಯುಸೆಕ್‌ ಏರಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 13:16 IST
Last Updated 23 ಜುಲೈ 2021, 13:16 IST
ಹಾಸನದಲ್ಲಿ ಶುಕ್ರವಾರ ಸುರಿದ ಮಳೆ ವೇಳೆ ಯುವತಿಯರು ಕೊಡೆ ಹಿಡಿದು ಸಾಗುತ್ತಿರುವ ದೃಶ್ಯ.
ಹಾಸನದಲ್ಲಿ ಶುಕ್ರವಾರ ಸುರಿದ ಮಳೆ ವೇಳೆ ಯುವತಿಯರು ಕೊಡೆ ಹಿಡಿದು ಸಾಗುತ್ತಿರುವ ದೃಶ್ಯ.   

ಹಾಸನ: ಜಿಲ್ಲೆಯಲ್ಲಿ ಶುಕ್ರವಾರ ದಿನವೀಡಿ ಸುರಿದ ಮಳೆಗೆ ಹಲವು ಮನೆಗಳು ಕುಸಿದು ಬಿದ್ದಿದ್ದು, ವಿದ್ಯುತ್‌ ಕಂಬಗಳು ನೆಲಕ್ಕೆ ಕುಸಿದು ಹಲವು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.

ಆಲೂರು, ಬೇಲೂರು, ಸಕಲೇಶಪುರ, ಹೆತ್ತೂರು ಮತ್ತು ಅರಕಲಗೂಡು ತಾಲ್ಲೂಕಿನಲ್ಲಿ ಮನೆಗಳು ಕುಸಿದು ಬಿದ್ದಿವೆ. ಹಳ್ಳ, ಕೊಳ್ಳ, ನದಿಗಳು ಉಕ್ಕಿ ಹರಿಯುತ್ತಿವೆ. ಚನ್ನರಾಯಪಟ್ಟಣ,ಶ್ರವಣಬೆಳಗೊಳ, ಹಿರೀಸಾವೆ, ಹಳೇಬೀಡು, ಅರಸೀಕೆರೆ, ಬೇಲೂರು, ಕೊಣನೂರಿನಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ.

ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಶುಕ್ರವಾರ ಜನರು ಮನೆಯಿಂದಹೊರಲು ಸಾಧ್ಯವಾಗದಷ್ಟು ಜೋರು ಮಳೆ ಸುರಿಯಿತು. ಆಗಾಗ್ಗೆ ಬಿಡುವು ನೀಡುತ್ತಿದ್ದ ಮಳೆ ಜನಸಂಚಾರಕ್ಕೂ ಕಡಿವಾಣ ಹಾಕಿತು. ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ತೊಯ್ದುಕೊಂಡೇಸಾಗುತ್ತಿದ್ದ ದೃಶ್ಯ ಕಂಡು ಬಂತು.

ADVERTISEMENT

ಒಳಚರಂಡಿ ನಿರ್ಮಾಣ, ಅಮೃತ್‌ ಯೋಜನೆ ಪೈಪ್‌ ಅಳವಡಿಕೆ ಕಾಮಗಾರಿಗಳಿಂದಾಗಿ ನಗರದ ಬಹುತೇಕ ರಸ್ತೆಗಳನ್ನು ಅಗೆಯಲಾಗಿದ್ದು, ಗುಂಡಿಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ ಆಗಿದೆ. ಮಳೆ ನೀರಿನಿಂದ ಹಲವು ರಸ್ತೆಗಳು ಕೆಸರುಮಯವಾಗಿದ್ದು, ಜನ ಕಾಲ್ನಡಿಗೆಯಲ್ಲಿ ಸಾಗಲು ಕಷ್ಟ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿರುಸಿನ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತುಡಾಂಬರ್ ಕಿತ್ತು ಹೋಗಿ ಗುಂಡಿಗಳಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಉಂಟಾಗುತ್ತಿದೆ.

ಜಲಾನಯನ ಪ್ರದೇಶಗಳಾದ ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ವಾಟೆಹೊಳೆಜಲಾಶಯ ಭರ್ತಿಯಾಗಿದೆ.ಕಾಫಿ, ಅಡಿಕೆ ತೋಟ, ಭತ್ತದ ಗದ್ದೆಗಳು ಜಲಾವೃತಗೊಂಡಿವೆ.ಬಿತ್ತನೆಗಾಗಿ ಸಿದ್ದಪಡಿಸಿಕೊಂಡಿದ್ದಭತ್ತದ ಪೈರು ಮತ್ತು ನಾಟಿ ಮಾಡಿದ್ದ ಗದ್ದೆಗಳಲ್ಲೂ ನೀರು ನಿಂತಿದೆ.ಸಕಲೇಶಪುರ ತಾಲ್ಲೂಕಿನ ಈಶ್ವರಹಳ್ಳಿಯಲ್ಲಿ ಚಕ್ರತೀರ್ಥ ಉಕ್ಕಿ ಹರಿದಿದೆ. ಮಠಸಾಗರ -ಹಣ್ಣಳ್ಳಿನಡುವೆ ಸೇತುವೆ ತುಂಬಿ ಹರಿಯುತ್ತಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ.

2019ರಲ್ಲಿ ಅತಿಯಾದ ಮಳೆಗೆ ದೋಣಿಗಾಲ್‌ ಗ್ರಾಮ ಸಮೀಪದ ಹೆದ್ದಾರಿ ಭಾಗಶಃ ಕುಸಿದಿತ್ತು. ಆದರೆ ಚತುಷ್ಪಥ ಕಾಮಗಾರಿ ನಡೆಸುವ ಉದ್ದೇಶದಿಂದ ಕುಸಿದ ರಸ್ತೆಗೆ ತಡೆಗೋಡೆ ನಿರ್ಮಿಸದೇ ಬಿಡಲಾಗಿತ್ತು. ಒಂದು ವರ್ಷದಿಂದ ಕುಸಿದಿರುವ ಹೆದ್ದಾರಿಗೆ ಹೊಂದಿಕೊಂಡತೆ ಭಾರಿ ಪ್ರಮಾಣದಲ್ಲಿ ಮಣ್ಣನ್ನು ಹಾಕಿ ಪ್ರಪಾತವನ್ನು ಮುಚ್ಚಲಾಗಿತ್ತು.

ಆದರೆ, ಪ್ರಪಾತಕ್ಕೆ ಹಾಕಿರುವ ಮಣ್ಣು ಮಳೆ ನೀರಿಗೆ ಸಿಲುಕಿ ತಗ್ಗು ಪ್ರದೇಶಕ್ಕೆ ನುಗ್ಗಿರುವುದರಿಂದ ಕಾಫಿತೋಟ, ಭತ್ತ ಗದ್ದೆಯಲ್ಲಿ ಮಣ್ಣಿನ ಹೂಳು ತುಂಬಿದ್ದ, ರೈತರು ಜಮೀನಿಗೆ ಹೋಗದಂತಾಗಿದೆ. ಮತ್ತೆ ಹೆದ್ದಾರಿ ಕುಸಿಯಲು ಅವೈಜ್ಞಾನಿಕವಾಗಿ ಮಣ್ಣು ಹಾಕಿರುವುದೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.