ಹಾಸನ/ಚಿಕ್ಕಮಗಳೂರು: ರಾಜ್ಯದ ಕೆಲ ಭಾಗಗಳಲ್ಲಿ ಮಂಗಳವಾರ ಮಳೆ ಆರ್ಭಟ ಮತ್ತೆ ಶುರುವಾಗಿದೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ , ನಿರಂತರ ಮಳೆಗೆ ಸಕಲೇಶಪುರ ತಾಲ್ಲೂಕಿನ ಆನೆಮಹಲ್– ದೋಣಿಗಲ್ ನಡುವೆ ರಾಷ್ಟ್ರೀಯ ಹೆದ್ದಾರಿ ಬದಿಗೆ ನಿರ್ಮಿಸಿದ್ದ 100 ಮೀಟರ್ ಉದ್ದದ ತಡೆಗೋಡೆ ಸಂಪೂರ್ಣ ಕೊಚ್ಚಿ ಹೋಗಿದೆ.
ಈ ಹೆದ್ದಾರಿ ಪಕ್ಕದಲ್ಲಿ ಕಳೆದ ವಾರ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯೂ ಬಿರುಕು ಬಿಟ್ಟಿದೆ. ಮಳೆ ಹೆಚ್ಚಾದರೆ ತಡೆಗೋಡೆ ಕುಸಿಯುವ ಆತಂಕ ಎದುರಾಗಿದೆ. ಸದ್ಯ ವಾಹನಗಳು ಸಂಚರಿಸುತ್ತಿವೆ.
ಮಂಗಳವಾರ ಸಕಲೇಶಪುರ ತಾಲ್ಲೂಕಿನ ಅಂಗನವಾಡಿ ಹಾಗೂ ಶಾಲೆಗಳಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ರಜೆ ಘೋಷಿಸಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಗಾಳಿ ಮತ್ತು ಮಳೆ ಜೋರಾಗಿದ್ದು, ಕಳಸ ತಾಲ್ಲೂಕಿನ ಬಸರೀಕಲ್ ಚೆಕ್‌ಪೋಸ್ಟ್ ಬಳಿ ದೊಡ್ಡ ಮರವೊಂದು ರಸ್ತೆಗೆ ಉರುಳಿದೆ. ಮರ ಬಿದ್ದಿರುವುದರಿಂದ ಕಳಸ–ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿತ್ತು. ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಮಾಡಿದರು.
ಕೊಪ್ಪ, ಕಳಸ, ಕುದುರೆಮುಖ, ಶೃಂಗೇರಿ, ಮೂಡಿಗೆರೆ, ಕೊಟ್ಟಿಗೆಹಾರ, ಬಾಳೆಹೊನ್ನೂರು, ನರಸಿಂಹರಾಜಪುರ ಭಾಗದಲ್ಲಿ ಮಳೆ ಜೋರಾಗಿದೆ. ಮುಳ್ಳಯ್ಯನಗಿರಿ ಭಾಗದಲ್ಲಿ ಆಗಾಗ ಮಳೆಯಾಯಿತು.
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಬೆಳಗಾವಿ ತಾಲ್ಲೂಕು, ಖಾನಾಪುರ ತಾಲ್ಲೂಕುಗಳಲ್ಲಿ ಮಂಗಳವಾರ ಇಡೀ ದಿನ ಉತ್ತಮ ಮಳೆ ಸುರಿಯಿತು. ಆದರೆ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಮಳೆ ಪ್ರಮಾಣ ಸ್ವಲ್ಪ ತಗ್ಗಿದ್ದು, ಕೃಷ್ಣಾ ಹಾಗೂ ಉಪನದಿಗಳ ನೀರಿನ ಹರಿಯುವ ಪ್ರಮಾಣ ಇಳಿಮುಖವಾಗಿದೆ.
ಕೊಲ್ಹಾಪುರ ಜಿಲ್ಲೆಯ ರಾಜಾಪುರ ಬ್ಯಾರೇಜಿನಿಂದ ಕೃಷ್ಣಾ ನದಿಗೆ 58,667 ಕ್ಯೂಸೆಕ್ ಹೊರ ಹರಿವು ಇದ್ದು, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ದೂಧಗಂಗಾ ನದಿಗೆ 12,320 ಕ್ಯೂಸೆಕ್ ಒಳ ಹರಿವು ಇದೆ.
ಕಲ್ಲೋಳ– ಯಡೂರ ಸೇತುವೆ ಬಳಿಯಲ್ಲಿ ಕೃಷ್ಣಾ ನದಿಗೆ 70,087 ಕ್ಯೂಸೆಕ್ ಹೊರ ಹರಿವು ಇದೆ. ಸೋಮವಾರಕ್ಕಿಂತ ಮಂಗಳವಾರ ಕೃಷ್ಣಾ ನದಿ ನೀರಿನ ಹೊರ ಹರಿವಿನಲ್ಲಿ 8,797 ಕ್ಯೂಸೆಕ್ ಕಡಿಮೆಯಾಗಿದೆ. ಆದರೂ ವಾರದ ಹಿಂದೆ ನೀರಿನಲ್ಲಿ ಮುಳುಗಿದ ನಾಲ್ಕು ಸೇತುವೆಗಳು ಇನ್ನೂ ತೆರವು ಕಂಡಿಲ್ಲ.
ಬೆಳಗಾವಿ ವರದಿ: ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಜೂನ್ 25ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ: ಮಲೆನಾಡಿನಲ್ಲಿ ಮತ್ತೆ ಮಳೆ ಬಿರುಸುಗೊಂಡಿದೆ. ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ತಾಲ್ಲೂಕುಗಳಲ್ಲಿ ಉತ್ತಮ ವರ್ಷಧಾರೆಯಾಗಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ 14.8 ಸೆಂ.ಮೀ, ಹುಲಿಕಲ್‌ನಲ್ಲಿ 13.40 ಸೆಂ.ಮೀ, ಚಕ್ರಾ 11 ಸೆಂ.ಮೀ ಮಳೆ ದಾಖಲಾಗಿದೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಬಿರುಸು ತಗ್ಗಿದ್ದರೂ ಗಾಳಿಯ ಅಬ್ಬರ ಕಡಿಮೆಯಾಗಿಲ್ಲ. ಬಿರುಗಾಳಿಗೆ ಹಲವೆಡೆ ಮರಗಳು ಬುಡಮೇಲಾಗಿವೆ.
ಕೊಡ್ಲಿಪೇಟೆ– ಸೋಮವಾರಪೇಟೆ ಮುಖ್ಯರಸ್ತೆಗೆ ಮರ ಉರುಳಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿರಾಜಪೇಟೆ ಹೋಬಳಿ ಪೊದಕೋಟೆ ಗ್ರಾಮದಲ್ಲಿ ಮನೆ ಕುಸಿದಿದೆ. ಹಾರಂಗಿ ಜಲಾಶಯದ ಹೊರ ಹರಿವನ್ನು 3 ಸಾವಿರ ಕ್ಯುಸೆಕ್‌ನಿಂದ 5 ಸಾವಿರ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ.
ಜೂನ್ 25ರಂದು ಕೊಡಗು ಜಿಲ್ಲೆಗೆ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.