ADVERTISEMENT

ಹಾಸನ: 3 ತಿಂಗಳಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿ

ಕಟ್ಟೇಪುರ ಏತನೀರಾವರಿ ಯೋಜನೆ; ಶಾಸಕ ಎ. ಮಂಜು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:34 IST
Last Updated 14 ಜನವರಿ 2026, 7:34 IST
ಅರಕಲಗೂಡಿನಲ್ಲಿ ಮಂಗಳವಾರ ಕಟ್ಟೇಪುರ ಏತನೀರಾವರಿ ಯೋಜನೆ ಕಾಮಗಾರಿ ಯೋಜನೆ ಪ್ರಗತಿ ಕುರಿತು ಶಾಸಕ ಎ. ಮಂಜು ಅಧಿಕಾರಿಗಳ ಸಭೆ ನಡೆಸಿದರು
ಅರಕಲಗೂಡಿನಲ್ಲಿ ಮಂಗಳವಾರ ಕಟ್ಟೇಪುರ ಏತನೀರಾವರಿ ಯೋಜನೆ ಕಾಮಗಾರಿ ಯೋಜನೆ ಪ್ರಗತಿ ಕುರಿತು ಶಾಸಕ ಎ. ಮಂಜು ಅಧಿಕಾರಿಗಳ ಸಭೆ ನಡೆಸಿದರು   

ಅರಕಲಗೂಡು: ಮುಂದಿನ ಮೂರು ತಿಂಗಳಲ್ಲಿ ಮಲ್ಲಿಪಟ್ಟಣ ಹೋಬಳಿ ಗಡಿ ಗ್ರಾಮ ಕಟ್ಟೇಪುರ ಏತನೀರಾವರಿ ಯೋಜನೆಯಿಂದ ಪ್ರಾಯೋಗಿಕ ನೀರು ಹರಿಸುವ ಕಾರ್ಯ ನಡೆಯಬೇಕು ಎಂದು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿರುವುದಾಗಿ ಶಾಸಕ ಎ. ಮಂಜು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳು ಎಂಜಿನಿಯರ್‌ಗಳು ಮತ್ತು ರೈತರ ಸಭೆ ನಡೆಸಿ ಏತನೀರಾವರಿ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನೆ ಕುರಿತು ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಏಳು ವರ್ಷಗಳ ಹಿಂದೆ ಮಂಜೂರಾಗಿದ್ದ ₹ 120 ಕೋಟಿ ವೆಚ್ಚದ ಈ ಯೋಜನೆಯ ಮೊದಲ ಹಂತದಲ್ಲಿ ಅರಕಲಗೂಡು ಮತ್ತು ಸೋಮವಾರ ಪೇಟೆ ತಾಲ್ಲೂಕುಗಳ 50 ಗ್ರಾಮಗಳ 117 ಕೆರೆ ಕಟ್ಟೆಗಳಿಗೆ ನೀರು ಹರಿಯಲಿದೆ. ರೈಸಿಂಗ್ ಮೇನ್ 11 ಕಿ. ಮೀ ಹಾಗೂ 78.83 ಕಿ. ಮೀ ಸಬ್ ಲೈನ್ ಕೊಳವೆಗಳು ಅಳವಡಿಕೆಯಾಗಲಿದೆ. 2.65 ಕಿ. ಮೀ ಮುಖ್ಯ ಕೊಳವೆ ಹಾದು ಹೋಗುವ ಮಾರ್ಗದಲ್ಲಿ ಜಮೀನು ಸ್ವಾದೀನ ಕುರಿತು ಉಂಟಾಗಿದ್ದ ಸಮಸ್ಯೆಯನ್ನು ರೈತರೊಂದಿಗೆ ಮಾತು ಕತೆ ನಡೆಸಿ ಬಗೆಹರಿಸಲಾಗಿದೆ. ಸಂತ್ರಸ್ಥ ರೈತರಿಗೆ ದೊರೆಯಬೇಕಾದ ಪರಿಹಾರಧನವನ್ನು ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿಯನ್ನು ಚುರುಕು ಗೊಳಿಸಿ ಮುಂದಿನ ಮೂರು ತಿಂಗಳಲ್ಲಿ ಪ್ರಯೋಗಿಕವಾಗಿ ನೀರುಹರಿಸುವ ಕಾರ್ಯ ನಡೆಯಬೇಕು, ಇದಕ್ಕೆ ಗುತ್ತಿಗೆದಾರರು ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತುರ್ತುಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದರು.

ADVERTISEMENT

₹77 ಕೋಟಿ ವೆಚ್ಚದ ಎರಡನೆ ಹಂತದ ಯೋಜನೆಯಲ್ಲಿ 32 ಗ್ರಾಮಗಳ 80 ಕೆರೆಗಳಿಗೆ ನೀರು ಹರಿಯಲಿದೆ. ಈ ಯೋಜನೆ ಪೂರ್ಣಗೊಂಡರೆ ಮಲ್ಲಿಪಟ್ಟಣ, ಕೊಣನೂರು ಹಾಗೂ ದೊಡ್ಡಮಗ್ಗೆ ಕೆಲಭಾಗದ ಕೆರೆಗಳಿಗೆ ನೀರು ಹರಿಯಲಿದೆ. ಕೆರೆಗಳು ಭರ್ತಿಯಾಗುವುದರಿಂದ ಕೊಳವೆ ಬಾವಿಗಳು ಮರುಪೂರಣಗೊಂಡು ರೈತರು ಆರ್ಥಿಕವಾಗಿ ಸಬಲರಾಗಲು ಸಹಾಯಕವಾಗಲಿದೆ. ಮೂರು ತಿಂಗಳಲ್ಲಿ ಎರಡನೆ ಹಂತದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಹೇಳಿದರು.

ತಹಶೀಲ್ದಾರ್ ಕೆ.ಸಿ. ಸೌಮ್ಯ, ಹಾರಂಗಿ ಜಲಾಶಯ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಕಾರ್ಯಪಾಲಕ ಎಂಜಿನಿಯರ್ ದೀಪಕ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಬಿಂದುರಾಮಸ್ವಾಮಿ, ಭೂ ದಾಖಲೆ ಇಲಾಖೆ ಸಹಾಯಕ ನಿರ್ದೇಶಕ ಸುಂದರ್, ಯೋಜನೆ ವ್ಯಾಪ್ತಿಯ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.