ADVERTISEMENT

ಕಾಯಂಗೊಳಿಸಿ, ಶಾಸನಾತ್ಮಕ ಸೌಲಭ್ಯ ಒದಗಿಸಿ

ಜಿಲ್ಲಾ ಪಂಚಾಯಿತಿ ಎದುರು ಬಿಸಿಯೂಟ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 14:15 IST
Last Updated 11 ಆಗಸ್ಟ್ 2020, 14:15 IST
ಹಾಸನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಬಿಸಿಯೂಟ ನೌಕರರು ಪ್ರತಿಭಟನೆ ನಡೆಸಿದರು.
ಹಾಸನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಬಿಸಿಯೂಟ ನೌಕರರು ಪ್ರತಿಭಟನೆ ನಡೆಸಿದರು.   

ಹಾಸನ: ಕೋವಿಡ್-19 ಸಂದರ್ಭದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರಿಗೆ ವೇತನ ಹಾಗೂ ಇತರ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಮಂಗಳವಾರ ಬಿಸಿಯೂಟ ನೌಕರರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೊರೊನಾ ಲಾಕಾ‌ಡೌನ್ ನಿಂದ ಶಾಲೆಗಳಿಗೆ ರಜೆ ಘೋಷಿಸಿರುವುದರಿಂದ ಆಹಾರ ಧಾನ್ಯಗಳನ್ನು ಮಕ್ಕಳ ಮನೆ ಮನೆಗೆ ತಲುಪಿಸುವ ಕಾಯಕದಲ್ಲಿ ನೌಕರರು ನಿರತರಾಗಿದ್ದಾರೆ. ಆದರೆ, ಕಳೆದ ಏಪ್ರಿಲ್‍ನಿಂದ ಇವರಿಗೆ ವೇತನ ಬಿಡುಗಡೆಯಾಗಿಲ್ಲ. ಸರ್ಕಾರದ ಯಾವುದೇ ರೀತಿಯ ಆರ್ಥಿಕ ಪ್ಯಾಕೇಜ್ ಸಹ ಘೋಷಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಕುರಿತು ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗೆ ಮೂರು ಬಾರಿ ಮನವಿ ಸಲ್ಲಿಸಿದರೂ
ಪ್ರಯೋಜನವಾಗಿಲ್ಲ. ಬಿಸಿಯೂಟ ನೌಕರರನ್ನು ಕಾಯಂ ಮಾಡಿ, ಶಾಸನಾತ್ಮಕ ಸೌಲಭ್ಯ ಒದಗಿಸಬೇಕು. ಮುಂದಿನ ಆರು ತಿಂಗಳ ವರೆಗೆ ಪಡಿತರ ಸಾಮಗ್ರಿ ವಿತರಿಸಬೇಕು ಹಾಗೂ ಜೀವ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಕೋವಿಡ್‌ 19 ಅನ್ನು ವೈದ್ಯಕೀಯ ತುರ್ತು ಸ್ಥಿತಿ ಎಂದು ಪರಿಗಣಿಸಿ ನೌಕರರಿಗೆ ಹಾಗೂ ಕುಟುಂಬ ವರ್ಗದವರಿಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಬೇಕು. ಲಾಕ್‌ಡೌನ್‌ ಅವಧಿಯಲ್ಲಿ ₹ 7,500 ರಂತೆ ಮುಂದಿನ ಆರು ತಿಂಗಳ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಕಾರ್ಯದರ್ಶಿ ಅರವಿಂದ ಹಾಗೂ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.