ಹಾಸನ: ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಕೇವಲ ಆರ್ಥಿಕ, ಭೌತಿಕ ಪ್ರಗತಿ ಮಾಹಿತಿ ಕೊಟ್ಟರೆ ಸಾಲದು. ಆಯಾ ಇಲಾಖೆ ಮೂಲಕ ಕೈಗೊಂಡ ಯೋಜನೆ ಅನುಷ್ಠಾನ, ಅಭಿವೃದ್ಧಿ ಕಾರ್ಯ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಅಂಕಿ –ಅಂಶಗಳನ್ನು ಹೇಳುತ್ತಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ‘ಕೇವಲ ಸರ್ಕಾರದಿಂದ ಬಂದ ಅನುದಾನ ಮತ್ತು ಖರ್ಚು ಮಾಡಿರುವ ಬಗ್ಗೆ ಹೇಳುತ್ತಿದ್ದೀರಿ. ಆದರೆ ಇದರ ಪರಿಣಾಮ ಮತ್ತು ಯೋಜನೆಯ ಲಾಭ ಎಷ್ಟು ಮಂದಿಗೆ ತಲುಪಿದೆ ಎಂಬುದನ್ನು ಸ್ಥಳ ಪರಿಶೀಲನೆ ಹಾಗೂ ಫಲಾನುಭವಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದೀರಾ’ ಎಂದು ಪ್ರಶ್ನಿಸಿದರು.
ಕೃಷಿ ಇಲಾಖೆಯ ಅಧಿಕಾರಿಗಳು ಕೇವಲ ಬ್ಯಾನರ್ ಹಿಡಿದು ಪ್ರಚಾರ ಮಾಡಿದರೆ ಸಾಲದು. ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿಳಿ ಸುಳಿರೋಗಕ್ಕೆ ತುತ್ತಾಗಿದೆ. ಈ ಸಮಸ್ಯೆಗೆ ಅಗತ್ಯ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕಿದೆ. ಕೃಷಿ ಕ್ಷೇತ್ರದ ಮೂಲ ಸಮಸ್ಯೆ ಅರಿತು ಕೆಲಸ ಮಾಡುವಂತೆ ಸೂಚಿಸಿದರು.
‘ರೈತರಿಗೆ ಬೀಜೋಪಚಾರ, ಬೆಳೆ ಪರಿವರ್ತನೆ ಹಾಗೂ ಇತರೆ ವೈಜ್ಞಾನಿಕ ಮಾಹಿತಿಯನ್ನು ಕಾಲಕಾಲಕ್ಕೆ ನೀಡಬೇಕು. ಕೃಷಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ರೈತರ ಹೊಲ ಜಮೀನುಗಳಿಗೆ ಹೋಗಿ ಪರಿಶೀಲಿಸಬೇಕು. ಅವರ ಸಮಸ್ಯೆಯನ್ನು ಆಲಿಸಿ, ಪರಿಹಾರ ಒದಗಿಸುವ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
‘ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ತೆಂಗಿನ ಬೆಳೆಗೆ ಹಲವು ರೋಗಗಳು ಬಾಧಿಸಿವೆ. ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ ತಾಲ್ಲೂಕಿನಲ್ಲಿ ತಂಗಿಗೆ ಕಪ್ಪು ತಲೆ ಹುಳದ ಬಾಧೆ ಹೆಚ್ಚಿದ್ದು, ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ಶಾಸಕರು ಹಾಗೂ ಉಸ್ತುವಾರಿ ಸಚಿವರು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗೇಶ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಯೋಗೇಶ್, ಪರಾವಲಂಬಿ ಜೀವಿಯನ್ನು ತೆಂಗಿನ ತೋಟಗಳಿಗೆ ಬಿಡಲಾಗುತ್ತಿದೆ. ಅಗತ್ಯ ಔಷಧೋಪಚಾರ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಯಾವ ಪ್ರದೇಶದಲ್ಲಿ, ಎಷ್ಟು ಪ್ರಮಾಣದಲ್ಲಿ ರೋಗ ಬಾಧೆ ಇದೆ? ಇದರ ಹತೋಟಿಗೆ ನಿರ್ದಿಷ್ಟ ತೆಂಗಿನ ತೋಟದಲ್ಲಿ ಇಲಾಖೆ ವತಿಯಿಂದ ಪರೀಕ್ಷೆ ನಡೆಸಿದ್ದೀರಾ? ಯಾವ ಅಂದಾಜಿನ ಮೇಲೆ ಪರಾವಲಂಬಿ ಜೀವಿಗಳನ್ನು ಬಿಡುತ್ತಿದ್ದೀರಿ? ಇದರ ಪ್ರಯೋಜನ ಆಗಿರುವ ಬಗ್ಗೆ ಮಾಹಿತಿ ಇದೆಯೇ ಸಚಿವ ಕೃಷ್ಣ ಬೈರೇಗೌಡ ಕೇಳಿದರು.
ಕೆಲ ತಿಂಗಳಲ್ಲಿಯೇ 10ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಈ ಯೋಜನೆಯಡಿ ಪಶುಗಳನ್ನು ಒದಗಿಸಿರುವ ಕುರಿತು ಪಶು ಸಂಗೋಪನಾ ಇಲಾಖೆ ಅಧಿಕಾರಿ ಮಾಹಿತಿ ನೀಡಿದಾಗ ತಬ್ಬಿಬ್ಬಾದ ಸಚಿವರು, ಇಷ್ಟೊಂದು ಪ್ರಮಾಣದಲ್ಲಿ ಹೆಣ್ಣು ಕರುಗಳನ್ನು ಹೇಗೆ ವಿತರಣೆ ಮಾಡಿದ್ದೀರಿ? ಮುಂದಿನ ದಿನಗಳಲ್ಲಿ ಅಕ್ರಮ ತಡೆಯಲು ಇಲಾಖೆಯಿಂದ ವಿತರಿಸುವ ಪಶುಗಳಿಗೆ ಚಿಪ್ ಅಳವಡಿಕೆ ಮಾಡುವ ಕುರಿತು ಚಿಂತಿಸಲಾಗಿದೆ ಎಂದರು.
ಹಾಲಿನ ದರ ಕಡಿಮೆ ಇದ್ದರೂ ನಷ್ಟವೇಕೆ?:
ಸಹಕಾರ ಇಲಾಖೆಯಡಿ ಕಾರ್ಯನಿರ್ವಹಿಸುವ ಒಕ್ಕೂಟಗಳಿಂದ ಹಾಲು ಉತ್ಪಾದಕರಿಗೆ ಕನಿಷ್ಠ ದರ ನೀಡಲಾಗುತ್ತಿದೆ. ಆದರೆ ಖಾಸಗಿ ಕಂಪನಿಗಳು ನಮಗಿಂತ ಹೆಚ್ಚಿನ ದರ ನೀಡುತ್ತಿವೆ. ಆದರೂ ಒಕ್ಕೂಟಗಳು ನಷ್ಟದಲ್ಲಿ ಇರುವುದು ಏಕೆ ಎಂದು ಸಚಿವರು, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರಶ್ನಿಸಿದರು.
ಹಾಸನ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ₹ 34.50 ನೀಡಲಾಗುತ್ತಿದೆ. ಆದರೆ ಖಾಸಗಿಯವರು ₹ 40 ನೀಡುತ್ತಿದ್ದಾರೆ. ಪ್ರತಿ ಲೀಟರ್‌ಗೆ ₹ 56 ರಂತೆ ಜನರಿಗೆ ಮಾರಾಟ ಮಾಡಲಾಗುತ್ತಿದೆ. ಹಾಲು ಉತ್ಪಾದಕರು ಮತ್ತು ಒಕ್ಕೂಟದ ನಡುವೆ ₹ 20 ವ್ಯತ್ಯಾಸ ಇದೆ. ಅದೇ ಖಾಸಗಿಯವರು ಹೇಗೆ ರೈತರಿಗೆ ಅಷ್ಟೊಂದು ದರ ಒದಗಿಸುತ್ತಿದ್ದಾರೆ ಎಂಬುದನ್ನು ಮನಗಾಣಬೇಕು. ಸರ್ಕಾರದಿಂದಲೂ ಹಾಲಿನ ಪುಡಿ ಖರೀದಿಗೆ ₹ 5 ಹಾಗೂ ಹಾಲು ಉತ್ಪಾದಕರಿಗೆ ₹ 5 ಸಬ್ಸಿಡಿ ನೀಡುತ್ತಿದೆ. ಹೀಗಿರುವಾಗ ಹಾಲು ಉತ್ಪಾದಕರಿಗೆ ಕಡಿಮೆ ಹಣ ನೀಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಒಕ್ಕೂಟದಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಅವರು ಹಾಲು ಹಾಗೂ ಉತ್ಪನ್ನ ಮಾರಾಟ ಮಾಡಲು ಪ್ರಚಾರ ಮಾಡುವ ಅಗತ್ಯವಿದೆ. ಈ ಬಗ್ಗೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕು. ನಾವೇನು ಅವರ ಕೈಕಟ್ಟಿ ಕೂರಿಸಿದ್ದೇವಾ? ಮುಂದಿನ ಎರಡು ತಿಂಗಳು ಸರ್ಕಾರ ಹಾಲಿನ ಪುಡಿ ಖರೀದಿಸದಿದ್ದರೆ ಒಕ್ಕೂಟಗಳ ಸ್ಥಿತಿ ಏನಾಗಬಹುದು ಎಂದರು.
ಶಾಸಕರಾದ ಸಿಮೆಂಟ್ ಮಂಜು, ಎಚ್.ಕೆ. ಸುರೇಶ್, ಸ್ವರೂಪ್ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಡಿಸಿಎಫ್ ಸೌರಭ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ತೆಂಗಿಗೆ ತಗುಲಿರುವುದು ಸಾಂಕ್ರಾಮಿಕ ರೋಗ. ಇದರಲ್ಲಿ ಕ್ರಿಮಿಗಳು ತೆಂಗಿನ ಎಲೆಯನ್ನು ತಿನ್ನುತ್ತವೆ. ಇದರ ಹತೋಟಿಗೆ ಸಮರೋಪಾದಿಯಲ್ಲಿ ಕ್ರಮ ಅಗತ್ಯವಾಗಿದೆ.
-ಕೆ.ಎಂ. ಶಿವಲಿಂಗೇಗೌಡ ಶಾಸಕ
ಈಗಾಗಲೇ ತೆಂಗು ಸಂಕಲ್ಪ ರಥಯಾತ್ರೆಗೆ ಪ್ರಾರಂಭಿಸಲಾಗಿದೆ. ಆದರೆ ರೋಗ ಹೆಚ್ಚುತ್ತಿದೆ. ಹೆಚ್ಚಿನ ಹಾನಿ ಸಂಭವಿಸಿದ್ದು ಸರ್ಕಾರ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು.
- ಸಿ.ಎನ್. ಬಾಲಕೃಷ್ಣ ಶಾಸಕ
‘ತೆರಿಗೆ ಹಣದಲ್ಲಿ ಮಜಾ ಮಾಡಬೇಡಿ’
ಖಾಸಗಿ ಶಾಲೆಯವರು ಕೊಡುವುದು ₹ 15ಸಾವಿರ ಸಂಬಳ. ಸರ್ಕಾರ ಶಿಕ್ಷಕರಿಗೆ ₹ 50ಸಾವಿರದಿಂದ ₹ 70 ಸಾವಿರ ಸಂಬಳ ಕೊಡುತ್ತದೆ. ಮಕ್ಕಳಿಗೆ ಊಟ ಹಾಲು ಮೊಟ್ಟೆ ಬ್ಯಾಗ್ ಬಟ್ಚೆ ಪುಸ್ತಕ ಕೊಟ್ಟರೂ ಶಾಲೆಗೆ ಮಕ್ಕಳು ಬರಲ್ಲ ಅಂದ್ರೆ ಹೇಗೆ? ಶಿಕ್ಷಣಾಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕೃಷ್ಣ ಬೈರೇಗೌಡ ಖಾರವಾಗಿ ಕೇಳಿದರು. ‘ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತದೆ. ಸರ್ಕಾರ ಹಣದ ಪ್ರಿಂಟಿಂಗ್ ಮಷಿನ್ ಇಟ್ಟಿಲ್ಲ. ಬಡ ಜನರ ತೆರಿಗೆ ಹಣ ಹೋದರೆ ಹೋಗಲಿ ಮಜಾ ಮಾಡೋಣ ಎಂಬ ಭಾವನೆ ಬಿಡಿ’ ಎಂದು ನಿರ್ದೇಶನ ನೀಡಿದರು.
ಪಡಿತರ ಪಡೆಯದ 18 ಸಾವಿರ ಕುಟುಂಬಗಳು
‘ಅನ್ನಭಾಗ್ಯ’ ಯೋಜನೆಯಡಿ ಜಿಲ್ಲೆಯ 18ಸಾವಿರಕ್ಕೂ ಹೆಚ್ಚು ಕುಟುಂಬಗಳು 3 ತಿಂಗಳಿನಿಂದ ಪಡಿತರ ಪಡೆದಿಲ್ಲ. ಈ ಬಗ್ಗೆ ಸೂಕ್ತ ಮಾಹಿತಿ ಇದೆಯೇ ಎಂದು ಆಹಾರ ಇಲಾಖೆ ಅಧಿಕಾರಿಯನ್ನು ಸಚಿವ ಕೃಷ್ಣ ಬೈರೇಗೌಡ ಕೇಳಿದರು. ಇದಕ್ಕೆ ಸ್ಪಷ್ಟವಾಗಿ ಉತ್ತರಿಸದ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ‘ಹಲವು ತಿಂಗಳಿನಿಂದ ಪಡಿತರ ಪಡೆಯದೇ ಇರಲು ಕಾರಣ ಏನು? ಈ ಬಗ್ಗೆ ಫಲಾನುಭವಿಗಳ ಮನೆಗೆ ತೆರಳಿ ಮಾಹಿತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಶಾಸಕ ಬಾಲಕೃಷ್ಣ ಈ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಗ್ರಾಮಲೆಕ್ಕಿಗರು ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡುವುದು ಅಗತ್ಯ’ ಎಂದರು. ‘ಹಾಸನ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ಬಹುತೇಕ ಪಡಿತರ ಫಲಾನುಭವಿಗಳು ಬೇರೆ ಕೆಲಸಕ್ಕೆ ಹೋಗಿದ್ದಾರೆ. ಆದ್ದರಿಂದ ಪಡಿತರ ಪಡೆದಿಲ್ಲ ಎಂದು ಅಧಿಕಾರಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಬೇರೆ ರಾಜ್ಯಗಳಿಂದ ಇಲ್ಲಿಗೆ ಕೆಲಸಕ್ಕೆ ಬರುತ್ತಾರೆ. ಆದರೆ ಇಲ್ಲಿನವರು ಬೇರೆ ಕಡೆ ಕೆಲಸಕ್ಕೆ ಹೋಗಿದ್ದಾರೆ ಎಂದರೆ ನಂಬಲು ಅಸಾಧ್ಯ. ಅವರು ಅಲ್ಲಿಯಾದರೂ ಪಡಿತರ ಪಡೆದಿರಬಹುದಲ್ಲವೇ? ಈ ಬಗ್ಗೆಯೂ ಮಾಹಿತಿ ಇಲ್ಲವಾಗಿದ್ದು ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನಿಸುವಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಗ್ಗಿದ ಮರಣ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಮರಣ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷ ಒಟ್ಟು ದಾಖಲಾದ ರೋಗಿಗಳಲ್ಲಿ ಮರಣ ಪ್ರಮಾಣ ಶೇ 6.6 ಇದ್ದರೆ ಈ ವರ್ಷ ಅದು ಶೇ 5.6 ಕ್ಕೆ ಇಳಿದಿದೆ. ವಿಶೇಷವಾಗಿ ಹೃದಯಾಘಾತದಿಂದಾಗಿ ದಾಖಲಾದ 315 ಪ್ರಕರಣಗಳಲ್ಲಿ ಮರಣ ಪ್ರಮಾಣವು ಶೇ 6.03 ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ನಿಮ್ಮ ಗಮನ ಕೇವಲ ಸಾಂಕ್ರಾಮಿಕ ರೋಗ ತಡೆಗಟ್ಟುವ ಯೋಜನೆಗಳಿಗಷ್ಟೇ ಸೀಮಿತ ಆಗಬಾರದು. ಹೆಚ್ಚುತ್ತಿರುವ ಜೀವನಶೈಲಿ ಕಾಯಿಲೆಗಳಾದ ಕ್ಯಾನ್ಸರ್ ಯಕೃತ್ ಮತ್ತು ಹೃದ್ರೋಗಗಳ ಚಿಕಿತ್ಸೆಯ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಕೃಷ್ಣ ಬೈರೇಗೌಡ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.