ಹಿರೀಸಾವೆ: ಹೋಬಳಿ ಕೊಳ್ಳೇನಹಳ್ಳಿ ಗ್ರಾಮದಲ್ಲಿ ಭಕ್ತರ ಸಮ್ಮುಖದಲ್ಲಿ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆ ಮಂಗಳವಾರ ಜರುಗಿತು.
ಕೆರೆ ಬಳಿ ಹೊಸ ನೀರಿನಲ್ಲಿ ಗಂಗೆ ಪೂಜೆ ಮಾಡಿ, ಪೆಟ್ಟಿಗೆಯಲ್ಲಿ ಇರಿಸಿದ್ದ ದೇವಿಯ ಮಣ್ಣಿ ದೀಪಗಳು ಸೇರಿ ಪರಿಕರ ಶುದ್ಧೀಕರಿಸಿದರು. ನಂತರ ಕಳಸ ಸ್ಥಾಪನೆ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ತೇವಟಿಕೆ ಕಲಾವಿದರು ಯಲ್ಲಮ್ಮ ದೇವರ ಹಾಡು ಹೇಳುವ ಮೂಲಕ ಮೆರವಣಿಗೆ ಪ್ರಾಂರಭವಾಯಿತು. ಗ್ರಾಮದ ಹೆಬ್ಬಾಗಿಲು ಮೂಲಕ ಉತ್ಸವ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಮಹಿಳೆಯರು ತಂಬಿಟ್ಟು ಆರತಿಯೊಂದಿಗೆ ದೇವಿ ಹಿಂದೆ ಸಾಗಿದರು.
ಗ್ರಾಮದ ಹನುಮಂತ ದೇವರ ಅಡ್ಡಪಲ್ಲಕ್ಕಿ ಮೆರವಣಿಗೆಯಲ್ಲಿ, ಹಳ್ಳಿಯ 3 ಸ್ಥಳಗಳಲ್ಲಿ ಸಿಹಿ ಮಣವು ಹಾಕಿದರು. ನಂತರ ಎರಡು ದೇವರನ್ನು ಗುಡಿ ತುಂಬಿಸಿದರು. ದಾನಿಗಳ ಸಹಕಾರದಿಂದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ರಾತ್ರಿ ಯಲ್ಲಮ್ಮ ದೇವಿ ಹರಿಕಥೆ ಏರ್ಪಡಿಸಲಾಗಿತ್ತು.
ಬುಧವಾರ ಚಿಕ್ಕಮ್ಮ ದೇವರ ಹಬ್ಬ ಆಚರಿಸಲಾಗುವುದು. ಜಾತ್ರೆ ಅಂಗವಾಗಿ ಬೆಳಿಗ್ಗೆ 10ಕ್ಕೆ ‘ಭಗೀರಥ ಕಪ್’ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಪ್ರಥಮ ₹20 ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹7 ಸಾವಿರ ಮತ್ತು ಚತುರ್ಧ ₹5ಸಾವಿರ ಬಹುಮಾನ ನಿಗದಿಪಡಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು. ಇಲ್ಲಿನ ಹನುಮಂತ ದೇವ ಸೇವಾ ಸಮಿತಿ ಹಾಗೂ ಭಗೀರಥ ಉಪ್ಪಾರ ಯುವಕ ಸಂಘ ಯುವಕರು ಈ ಎಲ್ಲಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.