ಕೊಣನೂರು: ಹೋಬಳಿಯ ಹೊಸನಗರ ಬಳಿ ಬೀಡುಬಿಟ್ಟಿದ್ದ ಐದು ಕಾಡಾನೆಗಳ ಗುಂಪನ್ನು ಮಂಗಳವಾರ ಸಂಜೆ ಅರಣ್ಯ ಇಲಾಖೆಯ ಸಿಬ್ಬಂದಿ ಕೆ.ಅಬ್ಬೂರಿನ ಗಡಿ ದಾಟಿಸಿದರು.
ಕತ್ತಲೆಯಾದ್ದರಿಂದ ಕಾರ್ಯಾಚರಣೆ ನಿಲ್ಲಿಸಿದರು. ಬುಧವಾರ ಬೆಳಿಗ್ಗೆ ಮಾಳೇನಹಳ್ಳಿಯ ಬಳಿ ಪ್ರತ್ಯಕ್ಷವಾದ ಕಾಡಾನೆಗಳು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದವು.
ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಚಲನವಲನ ಗಮನಿಸಿದರು. ಮಧ್ಯಾಹ್ನದ ವೇಳೆಗೆ ಅಕ್ಕಲವಾಡಿ ಗ್ರಾಮದ ಬಳಿ ತೆರಳಿದವು. ಆನೆಗಳನ್ನು ನೋಡಲು ಸ್ಥಳೀಯರು ಮುಗಿಬಿದ್ದರು. ಜನ ಆನೆಗಳ ಸಮೀಪ ಹೋಗದಂತೆ ನಿಯಂತ್ರಿಸಲು ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಟ್ಟರು.
ಸಂಜೆ ಆನೆಗಳನ್ನು ಪತ್ತೆಹಚ್ಚಲು ಇಲಾಖೆ ಸಿಬ್ಬಂದಿ ಡ್ರೊನ್ ನೆರವು ಪಡೆದರು. ಅಕ್ಕಲವಾಡಿ ಬೆಟ್ಟದ ಬಳಿಗೆ ಆನೆಗಳ ಹಿಂಡು ತಲುಪಿತು. ಹೊಡೆನೂರು, ಮಾಳೇನಹಳ್ಳಿ, ಅಕ್ಕಲವಾಡಿ ಗ್ರಾಮ ವ್ಯಾಪ್ತಿಯ ಜಮೀನಿನಲ್ಲಿ ಕಾಡಾನೆಗಳು ಸಾಗಿದ್ದರಿಂದ ಬೆಳೆ ನಷ್ಟವಾಗಿದೆ.
ಜನರ ಸುರಕ್ಷೆಗಾಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಸಕಲೇಶಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಧುಸೂದನ್, ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ, ಕೊಣನೂರು ಉಪ ವಲಯ ಅರಣ್ಯಾಧಿಕಾರಿ ಮಹೇಶ್, ಅರಣ್ಯರಕ್ಷಕ ವಿಶ್ವನಾಥ್, ದೇವೇಂದ್ರ, ಲೋಹಿತ್. ನಾಗೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.