ADVERTISEMENT

ಕೊಣನೂರು: ಅರಸೀಕಟ್ಟೆ ಅಮ್ಮ ದೇವಿಯ ರಥೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 8:02 IST
Last Updated 17 ಜನವರಿ 2026, 8:02 IST
ಜಾತ್ರೆಯ ನಿಮಿತ್ತ ಆಯೋಜಿಸಿದ್ದ ಕ್ರೀಡೆಗಳಲ್ಲಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು
ಜಾತ್ರೆಯ ನಿಮಿತ್ತ ಆಯೋಜಿಸಿದ್ದ ಕ್ರೀಡೆಗಳಲ್ಲಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು   

ಕೊಣನೂರು: ಹೋಬಳಿಯ ಮುದ್ದನಹಳ್ಳಿಯ ಅರಸೀಕಟ್ಟೆ ಅಮ್ಮ ದೇವಿಯ ರಥೋತ್ಸವ ಮ.12ರ ವೇಳೆಗೆ ವಿಜೃಂಭಣೆಯಿಂದ ನೆರವೇರಿತು.

ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ರಥ ಎಳೆದು, ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ಬೆಳಿಗ್ಗೆಯಿಂದಲೂ ದೇವಾಲಯದ ಆವರಣದಲ್ಲಿ ಹೋಮ, ಹವನ ಮತ್ತು ವಿಶೇಷ ಪೂಜೆಗಳು ಜರುಗಿದ ನಂತರ ದೇವಿಯ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿರಿಸಿ, ದೇವಾಲಯದಿಂದ ಆವರಣದ ಮುಖ್ಯದ್ವಾರ ಮತ್ತು ಮುದ್ದನಹಳ್ಳಿಯವೆರೆಗೆ ಭಕ್ತರು ರಥ ಎಳೆದರು.

ರಥೋತ್ಸವ ನಿಮಿತ್ತ ದೇವಿಯ ಮೂಲ ಮೂರ್ತಿಗೆ ಮಾಡಿದ್ದ ವಿಶೇಷ ಅಲಂಕಾರ ಗಮನ ಸೆಳೆಯಿತು. ಕ್ರೀಡೆ, ಸಾಂಸ್ಕ್ರತಿಕ ಸ್ಪರ್ಧೆಗಳು ಮತ್ತು ಭಕ್ತರಿಗೆ ಅರಸೀಕಟ್ಟೆ ದೇವಸ್ಥಾನದ ಸಮಿತಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮೀಣ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳು ಗಮನ ಸೆಳೆದವು. ಮಹಿಳೆಯರು, ಪುರುಷರ ಮತ್ತು ಮಕ್ಕಳು ಹಗ್ಗಜಗ್ಗಾಟ, ರಂಗೋಲಿ ಸ್ಫರ್ಧೆ, ಸಂಗೀತ ಕುರ್ಚಿ, ಬಿಂದಿಗೆ ಹೊತ್ತು ಓಡುವುದು, ಮೂರು ಕಾಲು ಓಟ, ನಿಧಾನ ಸೈಕಲ್ ಚಲಿಸುವ, ಕಣ್ಣುಕಟ್ಟಿಕೊಂಡು ಮಡಕೆ ಒಡೆಯುವುದು, ಚಮಚದ ಮೇಲೆ ನಿಂಬೆಹಣ್ಣು ಇಟ್ಟುಕೊಂಡು ಓಡುವುದು, ಕುಂಟೇಬಿಲ್ಲೆ, ಕೋಲಾಟ, ವ್ಯವಸಾಯಕ್ಕೆ ಸಂಬಂಧಿಸಿದ ಹಾಡುಗಳು, ರಾಗಿಕಲ್ಲುಪದ, ಗೀಗಿಪದ, ಸೋಬಾನೆ ಪದ ಮುಂತಾದ ಸ್ಪರ್ಧೆಗಳಲ್ಲಿ ಬಿರುಬಿಸಿಲಿನಲ್ಲೂ ಉತ್ಸಾಹದಿಂದ ಭಾಗವಹಿಸಿ ಬಹುಮಾನ ಪಡೆದರು.

ಬೆಳಿಗ್ಗೆ 7.30ಕ್ಕೆ ರಾಮನಾಥಪುರದಿಂದ ಪ್ರಾರಂಭವಾದ ಮ್ಯಾರಥಾನ್‌ಗೆ ದೇವಾಲಯ ಸಮಿತಿಯ ಅಧ್ಯಕ್ಷ ಎ.ಟಿ.ರಾಮಸ್ವಾಮಿ ಚಾಲನೆ ನೀಡಿದರು. ಪ್ರದೀಪ್ ರಾಮಸ್ವಾಮಿ, ಮುಖಂಡ ಬಿ.ಸಿ. ವೀರೇಶ್, ರಾಮನಾಥಪುರ ವಿರೂಪಾಕ್ಷ, ದೇವಾಲಯ ಸಮಿತಿಯ ಕಾರ್ಯದರ್ಶಿ, ಕೃಷ್ಣೇಗೌಡ, ಉಪಾಧ್ಯಕ್ಷ ಬಸವರಾಜು, ಖಜಾಂಚಿ ಸಿದ್ದರಾಮು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.