ADVERTISEMENT

ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಿ: ಶಾಸಕ ಎಚ್.ಡಿ. ರೇವಣ್ಣ

ಬೆಲೆ ಸಿಗದೆ ಸಂಕಷ್ಟದಲ್ಲಿರು ರೈತರ ನೆರವಿಗೆ ಕೇಂದ್ರ, ರಾಜ್ಯ ಸರ್ಕಾರ ಧಾವಿಸಲಿ

​ಪ್ರಜಾವಾಣಿ ವಾರ್ತೆ
Published 14 ಮೇ 2020, 16:17 IST
Last Updated 14 ಮೇ 2020, 16:17 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ದೇಶದ ಅರ್ಥ ವ್ಯವಸ್ಥೆ ಮೇಲೆತ್ತುವುದಕ್ಕಾಗಿ ಕೇಂದ್ರ ಸರ್ಕಾರ ₹ 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿದೆ. ಅದೇ ರೀತಿ ಸಹಕಾರ ಕೇಂದ್ರ ಬ್ಯಾಂಕ್‌ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿ ರೈತರು ಮಾಡಿರುವ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.

‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ಎಚ್‌.ಡಿ.ಕುಮಾರ ಸ್ವಾಮಿ ಸಾಲ ಮನ್ನಾ ಮಾಡಿದ ಬಳಿಕ ರಾಜ್ಯದಲ್ಲಿ ಈವರೆಗೆ 30 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಗಳಿಂದ ಒಟ್ಟು 23 ಲಕ್ಷ ರೈತರಿಗೆ ₹ 13,300 ಕೋಟಿ ಸಾಲ ನೀಡಲಾಗಿದೆ. ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಎಚ್‌ಡಿಸಿಸಿ)ನಲ್ಲಿ 131657 ರೈತರಿಗೆ (₹3 ಲಕ್ಷ ವರೆಗೆ) ₹ 660.72 ಕೋಟಿ ನೀಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಜಿಲ್ಲೆಯ 2,58,192 ರೈತರು 2,488 ಕೋಟಿ ಸಾಲ ಪಡೆದಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಲ್ಲದೇ 16,256 ಸ್ವ ಸಹಾಯ ಗುಂಪುಗಳ ಪೈಕಿ 2,831 ಗುಂಪುಗಳು ಎಚ್‌ಡಿಸಿಸಿ ಮತ್ತು ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ಗಳಲ್ಲಿ ₹ 68 ಕೋಟಿ ಸಾಲ ಪಡೆದಿವೆ. ಅದೇ ರೀತಿ 92 ಜಂಟಿ ಬಾದ್ಯತಾ ಗುಂಪುಗಳು ₹ 1.78 ಕೋಟಿ ಹಾಗೂ ಕೃಷಿಗೆ ಪೂರಕವಾಗಿ 155 ಸದಸ್ಯರು ₹ 9.14 ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.

ADVERTISEMENT

ದೇಶದಲ್ಲಿ ಶೇಕಡಾ 70 ರಷ್ಟು ರೈತರು ಇದ್ದಾರೆ. ಸೂಕ್ತ ಬೆಲೆ ಸಿಗದೆ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ್ದಾರೆ. ಬೆಳೆಯನ್ನು ಉಳುಮೆ ಮಾಡುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ರೈತರು ವಿಷ ಸೇವಿಸುವ ಪರಿಸ್ಥಿತಿ ಬರಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದರು.

ರಾಜ್ಯದಲ್ಲಿ 2020-21ನೇ ಸಾಲಿಗೆ 25,30,300 ರೈತರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲವಾಗಿ ₹15,900 ಕೋಟಿ ನೀಡುವ ಗುರಿ ಹೊಂದಿದ್ದು, ಪ್ರಸ್ತುತ ಕೇವಲ 71,391 ರೈತರಿಗೆ ₹ 472.64 ಕೋಟಿ ಸಾಲ ಮಾತ್ರ ನೀಡಲಾಗಿದೆ. ಉಳಿದ ಮೊತ್ತವನ್ನು ಕೇಂದ್ರ ಬ್ಯಾಂಕ್‌ಗಳ ಮುಖಾಂತರ ರೈತರಿಗೆ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್‌ ಕಮಲ ಮೂಲಕ ಹಿಂದಿನ ಬಾಗಿಲಿನಿಂದ ಅಧಿಕಾರಕ್ಕೆ ಬಂದ ‘ಆಪರೇಷನ್‌ ಸರ್ಕಾರ’ ಎಂದು ವ್ಯಂಗ್ಯವಾಡಿದ ಅವರು, ‘ಲಾಕ್‌ಡೌನ್‌ ನಿಂದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿದಿದ್ದರೆ ಜನರು ಎಂದಿಗೂ ಕ್ಷಮಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.