ADVERTISEMENT

ಕೃಷಿ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ

ರೈತರ ಅನುಕೂಲಕ್ಕಾಗಿ ಅನೇಕ ಯೋಜನೆ: ಎಚ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 13:21 IST
Last Updated 14 ನವೆಂಬರ್ 2019, 13:21 IST
ಹಾಸನದ ತಾಲ್ಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಉದ್ಘಾಟಿಸಿದರು.
ಹಾಸನದ ತಾಲ್ಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಉದ್ಘಾಟಿಸಿದರು.   

ಹಾಸನ: ದೇಶದ ರೈತರ ಅನುಕೂಲಕ್ಕಾಗಿ ಸಹಕಾರ ಸಂಘಗಳ ಮೂಲಕ ಅನೇಕ ಯೋಜನೆ ರೂಪಿಸಿ, ಆರ್ಥಿಕ ಬೆಳವಣಿಗೆಗೆ ಅಗತ್ಯವಿರುವ ಕೃಷಿ ಉತ್ಪನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಹಾಸನ ಸಹಕಾರ ಹಾಲು ಒಕ್ಕೂಟ, ಸಹಕಾರ ಇಲಾಖೆ ಆಶ್ರಯದಲ್ಲಿ ಮೊಸಳೆ ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕೃಷಿಗೆ ಬೇಕಾಗುವ ಸಾಮಗ್ರಿ ಒದಗಿಸುವುದರ ಜೊತೆಗೆ ಸಹಕಾರ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸಲು ದಕ್ಷ ಆಡಳಿತ ಮಂಡಳಿ ವರ್ಗ ಮತ್ತು ಸಿಬ್ಬಂದಿ ವರ್ಗದವರ ಸಹಕಾರ ಬಹುಮುಖ್ಯ ಎಂದು ಅಭಿಪ್ರಾಯಪಟ್ಟರು.

ADVERTISEMENT

ಹಿರಿಯರಾದ ವಿ.ಎನ್.ರಾಜಣ್ಣ ಮಾತನಾಡಿ, ಜನ ಸಾಮಾನ್ಯರಿಗೆ ಸಾಲಮನ್ನಾ ಮೂಲಕ ಸರ್ಕಾರ ರೈತರಿಗೆ ನೆರವಾಗಿದೆ. ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರ ಕ್ಷೇತ್ರ ಅನುಕೂಲ ಮಾಡಿ ಕೊಟ್ಟಿದೆ ಎಂದು ನುಡಿದರು.

ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಶೇಷಾದ್ರಿ ಮಾತನಾಡಿದರು. ಮೊಸಳೆಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಸಹದೇವ್‍ ಅಧ್ಯಕ್ಷತೆ ವಹಿಸಿದ್ದರು.

ಉತ್ತಮ ಸಹಕಾರ ಸಂಘಗಳನ್ನು ಗೌರವಿಸಲಾಯಿತು. ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ಜಯಪ್ರಕಾಶ್ ಸಹಕಾರ ಸಪ್ತಾಹ ದಿನದ ಮಹತ್ವ ಕುರಿತು ಮಾತನಾಡಿದರು.

ಹಿರಿಯ ಸಹಕಾರಿ ಆರ್. ಟಿ. ದ್ಯಾವೇಗೌಡ, ಒಕ್ಕೂಟದ ನಿರ್ದೇಶಕರಾದ ವಿ.ಎನ್. ನಂಜುಂಡಸ್ವಾಮಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಕ್ಷೇತ್ರ ಮೇಲ್ವಿಚಾರಕರಾದ ಹರೀಶ್ ಎಂ.ಎಚ್, ಕುಮಾರ್, ಗಿರೀಶ್, ಮೊಸಳೆ ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ಆಡಳಿತ ಮಂಡಳಿ ವರ್ಗ, ಒಕ್ಕೂಟದ ಸಿಇಒ ಭಾರತಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.