ADVERTISEMENT

ಹಾಸನ: ತ್ಯಾಜ್ಯ ವಿಲೇವಾರಿಗೆ ಪೌರಕಾರ್ಮಿಕರ ಕೊರತೆ

ಏಳು ಸಾವಿರ ಜನರಿಗೆ ಒಬ್ಬ ಪೌರಕಾರ್ಮಿಕ, ವಿಶೇಷ ಸವಲತ್ತು ನೀಡಲು ಆಗ್ರಹ

ಕೆ.ಎಸ್.ಸುನಿಲ್
Published 22 ನವೆಂಬರ್ 2020, 19:30 IST
Last Updated 22 ನವೆಂಬರ್ 2020, 19:30 IST
ಹಾಸನ ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರಕಾರ್ಮಿಕರು.
ಹಾಸನ ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರಕಾರ್ಮಿಕರು.   

ಹಾಸನ: ಮಳೆ, ಚಳಿ, ಬಿಸಿಲೆನ್ನೆದೆ ನಗರದ ಸೌಂದರ್ಯಕ್ಕೆ ಶ್ರಮಿಸುತ್ತಿರುವ ನಗರಸಭೆ ಪೌರಕಾರ್ಮಿಕರು ಹಲವು
ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ವಾರದ ರಜೆ, ವಿಶೇಷ ಭತ್ಯೆ, ಇತರ ಸೌಲಭ್ಯಗಳಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಅಂದಾಜು 80 ಪೌರಕಾರ್ಮಿಕರ ಕೊರತೆ ಇದೆ. ಇದರಿಂದಾಗಿ ನಗರದಲ್ಲಿ ಕಸ ವಿಲೇವಾರಿ ಸರ್ಮಪಕವಾಗಿ ನಡೆಯುತ್ತಿಲ್ಲ. ಖಾಲಿ ನಿವೇಶನ, ರಸ್ತೆ ಬದಿ, ಎಲ್ಲೆಂದರಲ್ಲಿ ಜನರು ತ್ಯಾಜ್ಯ ಸುರಿಯುತ್ತಿದ್ದಾರೆ.

ಪ್ರತಿ 700 ಜನರಿಗೆ ಒಬ್ಬ ಪೌರ ಕಾರ್ಮಿಕರಿರಬೇಕು. ಆದರೆ, ನಗರದಲ್ಲಿ ಏಳು ಸಾವಿರಕ್ಕೆ ಒಬ್ಬ ಕಾರ್ಮಿಕರಿದ್ದಾರೆ.
ನಗರಸಭೆಯಲ್ಲಿ 80 ಕಾಯಂ, 105 ನೇರ ಗುತ್ತಿಗೆ ಹಾಗೂ 20 ಜನ ಹೊರ ಗುತ್ತಿಗೆ ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.35 ಜನ ಕಸದ ಆಟೊ ಚಾಲಕರು ಮತ್ತು 60 ಮಂದಿ ನೀರು ಗಂಟಿಗಳು ಇದ್ದಾರೆ.

ADVERTISEMENT

ನೇರ ನೇಮಕಾತಿ ಮಾಡಿಕೊಳ್ಳುವ ಅಧಿಕಾರ ನಗರಸಭೆಗೆ ಇಲ್ಲ. ಇರುವ ಸಂಪನ್ಮೂಲ ಬಳಸಿಕೊಂಡು ಕೆಲಸ ಮಾಡಿಸಲಾಗುತ್ತಿದೆ. ಎರಡು ವರ್ಷ ಪರಿಣತಿ ಹೊಂದಿರುವ ಕಾರ್ಮಿಕರನ್ನೇ ನೇಮಕ ಮಾಡಿಕೊಳ್ಳಬೇಕೆಂಬ ಸರ್ಕಾರದ ನಿಯಮ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ‌.

‘ನಗರಸಭೆಯ 20 ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಎಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅವರ
ಅನುಪಸ್ಥಿತಿ ಇತರಕಾರ್ಮಿಕರಿಗೆ ಕೆಲಸದ ಹೊರೆ ಹೆಚ್ಚಿಸಿತು. ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವವರಿಗೆ ವಿಶೇಷ ಸವಲತ್ತು ನೀಡಬೇಕು’ ಎಂದು ಪೌರಕಾರ್ಮಿಕರು ಆಗ್ರಹಿಸಿದರು.

‘ಹಾಲಿ ಇರುವ ಪೌರಕಾರ್ಮಿಕರನ್ನೇ ಬಳಸಿಕೊಂಡು ನಗರದ ಸ್ವಚ್ಛತೆಗೆ ಶ್ರಮಿಸಲಾಗುತ್ತಿದೆ. ಮನೆ ಬಾಗಿಲಿಗೆ ಕಸದ ಆಟೊ ಬಂದರೂ ಬಹುತೇಕರು ಹಾಕುವುದಿಲ್ಲ. ರಸ್ತೆ ಬದಿ, ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರಿಂದ ಪೌರ ಕಾರ್ಮಿಕರಿಗೆ ಹೆಚ್ಚುವರಿ ಶ್ರಮ ಉಂಟಾಗುತ್ತಿದೆ. ರಸ್ತೆ ಬದಿ ಕಸ ಸುರಿಯುವವರ ಅಂಗಡಿಯ ಮುಂದೆ ಅದೇ ಕಸ ಹಾಕಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವವರಿಗೆ ದಂಡ ವಿಧಿಸಬೇಕು’ಎಂದು ಗುತ್ತಿಗೆ ಪೌರಕಾರ್ಮಿಕರ ಮೇಲ್ವಿಚಾರಕ ಪರಶುರಾಮ್‌ ಆಗ್ರಹಿಸಿದರು.

ನಗರಸಭೆಯಲ್ಲಿ 25 ವರ್ಷಗಳಿಂದ ಅನೇಕ ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದರೂ ಕಾಯಂ ಮಾಡಿಲ್ಲ. ಎರಡು ವರ್ಷದ ಹಿಂದೆ 20 ಜನರನ್ನು ಕಾಯಂ ಮಾಡಿಕೊಂಡಿರುವುದು ಬಿಟ್ಟರೆ ನಂತರ ಆಗಿಲ್ಲ. ಸಮವಸ್ತ್ರ ಹೊಲಿಸಿಕೊಂಡ 70 ಜನ ಪುರುಷರಿಗೆ ತಲಾ ₹ 3 ಸಾವಿರ ಸಹ ಎರಡು ವರ್ಷದಿಂದ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರದ ನಿಯಮದಂತೆ ಶೇಕಡಾ 50 ರಷ್ಟು ಕಾರ್ಮಿಕರು ಕಾಯಂ ಹಾಗೂ ಶೇಕಡಾ 50 ರಷ್ಟು ನೇರಗುತ್ತಿಗೆ
ಹಾಗೂ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು. ಮೀಸಲಾತಿ ಆಧಾರದಲ್ಲಿ ಕಾಯಂ ಮಾಡಿಕೊಳ್ಳಬೇಕು. ಬಹುತೇಕ ಪೌರಕಾರ್ಮಿಕರು ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದವರಾಗಿದ್ದು ಅವರನ್ನು ಕಾಯಂ ಮಾಡಲಾಗಿದೆ. ಅಲ್ಪ ಸಂಖ್ಯಾತರು, ಅಂಗವಿಕಲರು, 2-ಎ, ಹೀಗೆ ಉಳಿದ ಸಮುದಾಯಗಳ ಪೌರಕಾರ್ಮಿಕರು ಇಲ್ಲದ ಕಾರಣ ಕಾಯಂ ಮಾಡಿಕೊಳ್ಳಲು ತೊಡಕಾಗಿದೆ’ ಎಂದು ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ತಿಳಿಸಿದರು.

‘ಸೋಂಕಿತ ಪೌರಕರ್ಮಿಕರಿಗೆ ಸೂಕ್ತ ಸಮಯದಲ್ಲಿ ಹಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಪೌರಕಾರ್ಮಿಕರಿಗೆ ಪ್ರತಿ ತಿಂಗಳೂ ನಗರಸಭೆ ಆವರಣದಲ್ಲಿಯೇ ಕೋವಿಡ್‌ ಪರೀಕ್ಷೆ ಮಾಡಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.