ADVERTISEMENT

ಅರಸೀಕೆರೆ | ಕೆರೆಗೆ ನೀರು; ₹150 ಕೋಟಿ ಮಂಜೂರು: ಶಿವಲಿಂಗೇಗೌಡ

ಸಿದ್ದರಾಮಯ್ಯ ನೇತೃತ್ವದಲ್ಲಿ ಭೂಮಿಪೂಜೆ ಶೀಘ್ರ‌– ಶಾಸಕ ಕೆ.ಎಂ.ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 3:15 IST
Last Updated 30 ಡಿಸೆಂಬರ್ 2025, 3:15 IST
ಕೆಂಕರೆ ಗ್ರಾಮ ಮತ್ತು ಚಿಂದೇನಹಳ್ಳಿ ಗಡಿ ಭಾಗದಲ್ಲಿ ವಿವಿಧ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೋಮವಾರ ಭೂಮಿಪೂಜೆ ನೆರವೇರಿಸಿದರು
ಕೆಂಕರೆ ಗ್ರಾಮ ಮತ್ತು ಚಿಂದೇನಹಳ್ಳಿ ಗಡಿ ಭಾಗದಲ್ಲಿ ವಿವಿಧ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೋಮವಾರ ಭೂಮಿಪೂಜೆ ನೆರವೇರಿಸಿದರು   

ಅರಸೀಕೆರೆ: ‘ಗಂಡಸಿ ಹೋಬಳಿಯ ಎಲ್ಲ ಕೆರೆಗಳಿಗೂ ನೀರು ಹರಿಸಲು ₹150 ಕೋಟಿ ಹಣ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ತಾಲ್ಲೂಕಿನ ಗಂಡಸಿ ಹೋಬಳಿಯ ಕೆಂಕರೆ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಎಲ್ಲ ಕೆರೆಗಳಿಗೂ ನೀರು ತುಂಬಿಸಲು, ಗಂಡಸಿ ಹೋಬಳಿಯ ಎಲ್ಲ ಗ್ರಾಮಗಳಿಗೂ ಮೂಲಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕೆಂಕರೆ ಪಂಚಾಯಿತಿಯ 6 ಕೆರೆಗಳಿಗೆ ದೊಡ್ಡ ಪೈಪ್‌ಲೈನ್‌ ಮೂಲಕ ನೀರು ಹರಿಸಲು ₹32 ಕೋಟಿ ದೊರೆತಿದೆ’ ಎಂದರು.

‘ಜೆಜೆಎಂ ನೀರಿನ ಯೋಜನೆಯ ವ್ಯವಸ್ಥೆಯು ಕೆಲವು ಲೋಪಗಳಿಂದ ಕೂಡಿದ್ದು ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸಮಾಡಬೇಕು. ಪಿಡಿಒಗಳು ನಿಗಾವಹಿಸದೇ ಇರುವುದರಿಂದ ಅತಂತ್ರವುಂಟಾಗಿದೆ. ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೂ ತಮ್ಮ ಗ್ರಾಮಗಳಲ್ಲಿನ ನೀರಿನ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಆಸಕ್ತಿ ಇಲ್ಲದಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕೆಂಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇ–ಸ್ವತ್ತು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರ ದೂರುಗಳನ್ನು ಆಲಿಸಿದ ಶಾಸಕ, ಅಧಿಕಾರಿಗಳು ನಿಯಮಗಳನ್ನು ಅನುಸರಿಸಿ ತ್ವರಿತವಾಗಿ ಕೆಲಸ ಮಾಡುವ ಬಗ್ಗೆ ವಿವರಿಸಿದರು. ಈ ಬಗ್ಗೆ ಲೋಕ ಅದಾಲತ್‌ ಆಯೋಜನೆ ಮಾಡುವ ಬಗ್ಗೆಯೂ ಸೂಚನೆ ನೀಡಿದರು.

ಕೆಂಕರೆ ಗ್ರಾಮ ಮತ್ತು ಚಿಂದೇನಹಳ್ಳಿ ಗಡಿ ಭಾಗದಲ್ಲಿ ದಿನದ 24 ಗಂಟೆಗಳ ಕಾಲ ನಿರಂತರ ಮತ್ತು ಸುರಕ್ಷಿತ ವಿದ್ಯುತ್‌ ಸರಬರಾಜು ಮಾಡಲು ₹2 ಕೋಟಿ ವೆಚ್ಚದಲ್ಲಿ ಹಳೆಯ ವಿದ್ಯುತ್‌ ಕಂಬಗಳು, ಹಳೆಯ ವಿದ್ಯುತ್‌ ತಂತಿಗಳ ಬದಲಾವಣೆ ಮತ್ತು ಹೆಚ್ಚುವರಿ ವಿದ್ಯುತ್‌ ಪರಿರ್ವತಕಗಳನ್ನು ಅಳವಡಿಸುವ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿದರು.

ತಹಶೀಲ್ದಾರ್‌ ಎಂ.ಜಿ.ಸಂತೋಷ್‌ಕುಮಾರ್‌, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಗಂಗಣ್ಣ, ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್‌ಕುಮಾರ್‌, ಕೆಂಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್‌, ಉಪಾಧ್ಯಕ್ಷೆ ರೇಣುಕಮ್ಮ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೆಟ್ರೋ ಬಾಬು ಇದ್ದರು.

Quote - ಗ್ರಾಮಗಳಲ್ಲಿಯೇ ಜನರ ಸಮಸ್ಯೆಗಳನ್ನು ಬಗೆಹರಿಸಲು 28 ವಿವಿಧ ಇಲಾಖಾ ಅಧಿಕಾರಿಗಳ ಸಮಕ್ಷಮದಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ ಕೆ.ಎಂ.ಶಿವಲಿಂಗೇಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.