ADVERTISEMENT

ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿ: ಶಾಸಕ ಎಚ್‌.ಡಿ. ರೇವಣ್ಣ

ಭೂಸ್ವಾಧೀನ ಪ್ರಕರಣದಲ್ಲಿ ಹೆಚ್ಚುವರಿ ಪರಿಹಾರಕ್ಕೆ ಹುನ್ನಾರ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 1:39 IST
Last Updated 3 ಸೆಪ್ಟೆಂಬರ್ 2025, 1:39 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ‘ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯ ಯೋಜನೆ ಕಾಮಗಾರಿಗಳಿಗೆ ಸ್ವಾಧೀನವಾದ ಭೂಮಿಗೆ ಹೆಚ್ಚುವರಿ ಪರಿಹಾರ ಪಡೆಯುವ ಹುನ್ನಾರ ನಡೆಯುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ಇಲ್ಲದಿದ್ದರೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಲಿದೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೂಸ್ವಾಧೀನ ಪ್ರಕರಣಗಳಲ್ಲಿ ಹೆಚ್ಚಿನ ಪರಿಹಾರ ವಿತರಿಸುವಂತೆ ಜಿಲ್ಲೆಯ ನ್ಯಾಯಾಲಯಗಳಲ್ಲಿ ಮನವಿ ಮಾಡುವ ಮೂಲಕ ಕಾವೇರಿ ನೀರಾವರಿ ನಿಗಮಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ’ ಎಂದರು.

‘ಈ ಸಂಬಂಧ ನಿಗಮದ ವಕೀಲರು, ಹಿಂದಿನ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ಮನವರಿಕೆ ಮಾಡಿದ್ದರು. ಪ್ರಕರಣ ಸಂಬಂಧ ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೂ ಪತ್ರದ ತಿಳಿಲಾಗಿದೆ. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ದಿನ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಕಾವೇರಿ ನೀರಾವರಿ ನಿಗಮದ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಲಿದೆ’ ಎಂದು ಎಚ್ಚರಿಸಿದರು.

ADVERTISEMENT

ಹೇಮಾವತಿ ಜಲಾಶಯ ಕಾಮಗಾರಿಗಾಗಿ 1986ರಲ್ಲಿಯೇ 4(1 ) ಅಧಿಸೂಚನೆಯಂತೆ ಅಂದಿನ ಮಾರುಕಟ್ಟೆ ಬೆಲೆಯಂತೆ ಎಕರೆಗೆ ₹3,000ದಿಂದ ₹5,000 ನಿಗದಿ ಪಡಿಸಲಾಗಿತ್ತು. ಇದನ್ನು ಒಪ್ಪಿಕೊಳ್ಳದ ಅರ್ಜಿದಾರರು, 2005ರಲ್ಲಿ ಭೂಸ್ವಾಧೀನ ಕಾಯ್ದೆ 18(1)ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬೇರೆ ಬೇರೆ ಗ್ರಾಮಗಳಿಗೆ ಸಂಬಂಧಿಸಿದಂತೆ ಎಕರೆಗೆ ₹29,500ರಿಂದ ₹ 30ಸಾವಿರವರೆಗೂ ಪರಿಹಾರ ನಿಗದಿಪಡಿಸಿತ್ತು ಎಂದರು.

‘40 ವರ್ಷಗಳ ಹಳೆಯ 4(1) ಅಧಿಸೂಚನೆ ಅಡಿ 20 ವರ್ಷಗಳ ಹಿಂದೆ ನ್ಯಾಯಾಲಯದಲ್ಲಿ ತೀರ್ಮಾನವಾಗಿರುವ ಪ್ರಕರಣಗಳ ಅಪೀಲುಗಳನ್ನು 20 ವರ್ಷಗಳ ವಿಳಂಬದೊಂದಿಗೆ ಇದೀಗ ನ್ಯಾಯಾಲಯದಲ್ಲಿ ದಾಖಲಿಸಿದ್ದು, ಎಕರೆಗೆ ₹ 12 ಲಕ್ಷ ಪರಿಹಾರ ನಿಗದಿ ಪಡಿಸಲಾಗಿದೆ. ಇದರಿಂದ ಒಂದು ಎಕರೆ ಜಮೀನಿಗೆ ಶಾಸನಬದ್ಧ ಸವಲತ್ತುಗಳ ಲೆಕ್ಕಚಾರದಲ್ಲಿ ಒಂದು ಎಕರೆಗೆ ₹ 80 ಲಕ್ಷದಿಂದ ₹ 1 ಕೋಟಿಗೂ ಹೆಚ್ಚು ಹಣ ಭರಿಸಬೇಕಾಗಿರುತ್ತದೆ’ ಎಂದರು.

‘ಸುಮಾರು 600 ರಿಂದ 800 ಅಪೀಲು ದಾಖಲಾಗಿದ್ದು, ಇದೇ ರೀತಿ ವಿಳಂಬ ಮನ್ನಾ ಮಾಡಿ ಆದೇಶ ಮಾಡುವ ಸಾಧ್ಯತೆ ಇರುವುದರಿಂದ ಹಿನ್ನೆಲೆಯಲ್ಲಿ ನಿಗಮಕ್ಕೆ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ನಷ್ಟ ಭರಿಸಬೇಕಾಗಿರುತ್ತದೆ’ ಎಂದರು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ನೀರಾವರಿ ಇಲಾಖೆ, ಕಂದಾಯ ಇಲಾಖೆ ಕಾರ್ಯದರ್ಶಿ, ರಾಜ್ಯ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಆಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೇವಣ್ಣ ಆಗ್ರಹಿಸಿದರು.

ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಇತರರು ಇದ್ದರು.

ಹೆಚ್ಚಿನ ಪರಿಹಾರ ಪಡೆಯುವ ನಿಟ್ಟಿನಲ್ಲಿ ಭೂ ಮಾಲೀಕರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದರ ಹಿಂದೆ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದ್ದು ಶೀಘ್ರ ತನಿಖೆ
ಅಗತ್ಯ. ಎಚ್‌.ಡಿ. ರೇವಣ್ಣ ಶಾಸಕ

‘ಕರೆ ಸ್ವೀಕರಿಸದ ಅಧಿಕಾರಿಗಳು’

ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ಎಚ್‌.ಡಿ. ರೇವಣ್ಣ ಆರೋಪಿಸಿದರು. ‘ಇತ್ತೀಚೆಗೆ ಜಿಲ್ಲಾಧಿಕಾರಿಗೆ ಮೊಬೈಲ್ ಮೂಲಕ ಕರೆ ಮಾಡಲಾಗಿತ್ತು. ಆದರೆ ಕರೆ ಸ್ವೀಕರಿಸಲಿಲ್ಲ. ಇದೇ ರೀತಿ ಇತರೆ ಇಲಾಖೆ ಅಧಿಕಾರಿಗಳೂ ಜಿಲ್ಲೆಯ ಶಾಸಕರ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿದ್ದು ಇಂತಹ ಬೆಳವಣಿಗೆ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.