ADVERTISEMENT

ಹಾಸನ | ಡಿಸೆಂಬರ್ ವೇಳೆಗೆ 2 ಲಕ್ಷ ರೈತರಿಗೆ ಪೋಡಿ: ಸಚಿವ ಕೃಷ್ಣ ಬೈರೇಗೌಡ

100 ಕೋಟಿ ಪುಟಗಳ ಜಮೀನು ದಾಖಲೆ ಗಣಕೀಕರಣ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 5:38 IST
Last Updated 16 ಆಗಸ್ಟ್ 2025, 5:38 IST

ಹಾಸನ: ‘ಡಿಸೆಂಬರ್ ವೇಳೆಗೆ 2 ಲಕ್ಷ ರೈತರಿಗೆ ಪೋಡಿ ದಾಖಲಾತಿ ಮಾಡಿಕೊಡುವ ಗುರಿ ಇದೆ’ ಎಂದು ಕಂದಾಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಸುಮಾರು 3 ಲಕ್ಷ ಕುಟುಂಬಕ್ಕೆ ಜಮೀನು ಮಂಜೂರಾಗಿರುವ ಮಾಹಿತಿ ಇದೆ. ಬಹುತೇಕರಲ್ಲಿ ಆರ್‌ಟಿಸಿ ಹಾಗೂ ಇತರೆ ದಾಖಲೆಗಳಿದ್ದರೂ ಪೋಡಿಯಾಗಿಲ್ಲ. ಐದು ಕಡ್ಡಾಯ ದಾಖಲೆಗಳಿದ್ದರೆ ಸಾಕು, ಭೂಮಿ ದರ್ಖಾಸ್ತು ಅಭಿಯಾನದ ಮೂಲಕ ಪೋಡಿ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ರಾಜ್ಯದಲ್ಲಿ ಸುಮಾರು 52 ಲಕ್ಷ ಜಮೀನು ಮೃತರ ಹೆಸರಿನಲ್ಲಿದೆ. ಸರ್ಕಾರವೇ ಸ್ವಯಂ ಪ್ರೇರಣೆಯಿಂದ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಜನರ ಮನೆ ಬಾಗಿಲಿಗೆ ತೆರಳಿ ಪೌತಿ ಖಾತೆ ಆಂದೋಲನ ಆರಂಭಿಸಿದೆ. 3 ತಿಂಗಳಿನಿಂದ ರಾಜ್ಯದಾದ್ಯಂತ ಮಾಡಲಾಗುತ್ತಿದ್ದು, 2.81 ಲಕ್ಷ ಜಮೀನಿಗೆ ಪೌತಿ ಖಾತೆ ಮಾಡಿಕೊಡಲಾಗಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಸುಮಾರು 100 ಕೋಟಿ ಪುಟಗಳ ಜಮೀನು ದಾಖಲೆಗಳನ್ನು ಗಣಕೀಕರಣದ ಮೂಲಕ ಸಂರಕ್ಷಿಸಲಾಗುವುದು. ಸುಮಾರು 36 ಕೋಟಿ ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಇದರಿಂದ ದಾಖಲೆ ನಕಲು ಮಾಡುವುದು, ವಂಚಿಸುವುದನ್ನು ತಪ್ಪಿಸಬಹುದು’ ಎಂದರು.

ಅಕ್ರಮವಿದ್ದರೆ ಮಾತ್ರ‌ ಒತ್ತುವರಿ ತೆರವು

ಪಶ್ಚಿಮ ಘಟ್ಟದ ತಪ್ಪಲಿನ ಕೆಲ ಗ್ರಾಮಗಳಲ್ಲಿ ಸೆಕ್ಷನ್ 4 ರಡಿ ಅರಣ್ಯ ಇಲಾಖೆ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿ, ‘ವಸತಿ ಪ್ರದೇಶಗಳನ್ನು ತೆರವು ಮಾಡದಂತೆ ಅರಣ್ಯ ಸಚಿವರಿಗೆ ತಿಳಿಸಿದ್ದೇನೆ. ಮುಂದಿನ ಕೆಲದಿನಗಳಲ್ಲಿ ಸಭೆ ಮಾಡುವ ಭರವಸೆ ನೀಡಿದ್ದಾರೆ. ಅತಿಕ್ರಮವಿದ್ದರಷ್ಟೇ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.