ADVERTISEMENT

ಹಾಸನ | ಮನವಿ ಸ್ವೀಕರಿಸದ ಡಿ.ಸಿ: ವಕೀಲರಿಂದ ರಸ್ತೆ ತಡೆ

ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವಹೇಳನ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 2:08 IST
Last Updated 30 ಅಕ್ಟೋಬರ್ 2025, 2:08 IST
ವಕೀಲರು ರಸ್ತೆ ತಡೆ ನಡೆಸಿದರು
ವಕೀಲರು ರಸ್ತೆ ತಡೆ ನಡೆಸಿದರು   

ಹಾಸನ: ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವಹೇಳನ ಮಾಡಿರುವುದನ್ನು ಖಂಡಿಸಿ ವಕೀಲರ ಸಂಘದ ಜಿಲ್ಲಾ ಘಟಕದ ಸದಸ್ಯರು, ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ವಕೀಲರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾದರು. ಈ ವೇಳೆ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಬರದೇ ಇದ್ದುದರಿಂದ ಆಕ್ರೋಶಗೊಂಡ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರಿನ ಹೆದ್ದಾರಿ ತಡೆದು ಕೆಲಕಾಲ ಧರಣಿ ನಡೆಸಿದರು.

ಸ್ಥಳಕ್ಕೆ ಬಂದು ಜಿಲ್ಲಾಧಿಕಾರಿ ಮನವಿ ಸ್ವೀಕರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾರ್ಲೆ ಮೂಗಣ್ಣಗೌಡ ಮಾತನಾಡಿ, ಜ್ಞಾನಪ್ರಕಾಶ ಸ್ವಾಮೀಜಿ ನ್ಯಾಯಾಂಗ ವ್ಯವಸ್ಥೆ ವಿರುದ್ಧ ಮಾತನಾಡಿದ್ದು, ಇದನ್ನು ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಲು ಬಂದಿದ್ದೆವು. ಆದರೆ ಜಿಲ್ಲಾಧಿಕಾರಿ ನಮ್ಮನ್ನು ಒಂದು ಗಂಟೆಗೂ ಹೆಚ್ಚು ಕಾಲ ಕಾಯುವಂತೆ ಮಾಡಿದರು, ಆದರೂ ಮನವಿ ಸ್ವೀಕರಿಸಲಿಲ್ಲ ಈ ಮೂಲಕ ವಕೀಲರಿಗೆ ಅವಮಾನ ಮಾಡಿದ್ದಾರೆ. ಆದ್ದರಿಂದ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದೇವೆ. ಜಿಲ್ಲಾಧಿಕಾರಿಗಳು ಪಕ್ಷಪಾತ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.

ADVERTISEMENT

ಸ್ವಾಮೀಜಿಯಿಂದ ನ್ಯಾಯಾಂಗ ನಿಂದನೆಯಾಗಿದ್ದು, ಸಮಾಜವನ್ನು ಪ್ರಚೋದಿಸುವ ಭಾಷಣವನ್ನು ಮಾಡಿದ್ದಾರೆ. ವಕೀಲರ ಸಂಘದಿಂದ ತುರ್ತು ಸಾಮಾನ್ಯ ಸಭೆ ಕರೆದು ಒಕ್ಕೊರಲಿನಿಂದ ಸ್ವಾಮೀಜಿ ಹೇಳಿಕೆಯನ್ನು ಎಲ್ಲ ಸದಸ್ಯರು ಬಲವಾಗಿ ಖಂಡಿಸಿದ್ದಾರೆ ಎಂದರು.

ಜಿಲ್ಲಾಧಿಕಾರಿ ವಿರುದ್ಧ ಹೋರಾಟ: ಜಿಲ್ಲಾಧಿಕಾರಿ ಇಂತಹ ವರ್ತನೆ ಖಂಡಿಸಿ ಗುರುವಾರ ಜಿಲ್ಲಾ ವಕೀಲರ ಸಂಘದಿಂದ ಸಭೆ ಕರೆಯಲಾಗುವುದು. ಜಿಲ್ಲಾಧಿಕಾರಿ ಸರ್ವಾಧಿಕಾರಿ ಧೋರಣೆ ವಿರುದ್ಧ ಜಿಲ್ಲಾ ಹಾಗೂ ತಾಲ್ಲೂಕು ಸಂಘದ ಸದಸ್ಯರೆಲ್ಲ ಸೇರಿ ನಗರದ ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಹೊಂಬೇಶ್ ಮಾತನಾಡಿ, ಜಿಲ್ಲಾಧಿಕಾರಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಅಧಿಕಾರದ ದರ್ಪ ಸರಿಯಲ್ಲ. ಜ್ಞಾನಪ್ರಕಾಶ ಸ್ವಾಮೀಜಿ ನ್ಯಾಯಮೂರ್ತಿಗಳಿಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ರಾಜ್ಯದ 31 ಜಿಲ್ಲೆಗಳಲ್ಲಿಯೂ ಇಂದು ಪ್ರತಿಭಟನೆ ನಡೆಯುತ್ತಿದ್ದು, ನ್ಯಾಯಾಂಗ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಆದರೆ ಜಿಲ್ಲಾಧಿಕಾರಿ ಇಂತಹ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದರು.

ಸಂಘದ ಖಜಾಂಚಿ ಜಿ.ಎನ್. ಸುಗುಣ, ಎಂ.ಟಿ. ತಿಮ್ಮೇಗೌಡ, ಜೆ.ಪಿ. ಶೇಖರ್, ಮೋಹನ್ ಕುಮಾರ್, ಚೆಲುವರಾಜು, ಚೆಲುವೇಗೌಡ, ಮಹೇಶ, ವಿಜಯಕುಮಾರ್, ಶ್ರೀಕಾಂತ್, ಚೆನ್ನಂಗಿಹಳ್ಳಿ, ಭಾಗ್ಯ, ಧನಲಕ್ಷ್ಮಿ, ಜಯಲಕ್ಷ್ಮಿ, ವಿಶ್ವನಾಥ್ ಇತರರು ಭಾಗವಹಿಸಿದ್ದರು.

ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ವಕೀಲರು ಪ್ರತಿಭಟನೆ ನಡೆಸಿದರು.
45 ನಿಮಿಷ ರಸ್ತೆ ತಡೆ: ಸಾರ್ವಜನಿಕರಿಂದ ಆಕ್ರೋಶ
ವಕೀಲರ ರಸ್ತೆ ತಡೆಯಿಂದಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಬಂದ ಕೆಲ ಸಾರ್ವಜನಿಕರು ಪ್ರತಿಭಟನೆ ಮಾಡುತ್ತಿದ್ದ ವಕೀಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿ ರಸ್ತೆ ತಡೆ ಮಾಡುವುದರಿಂದ ಸಾರ್ವಜನಿಕರಿಗೆ ಅನಾನುಕೂಲ ಆಗುತ್ತದೆ ಜಿಲ್ಲಾಧಿಕಾರಿ ಕಚೇರಿಯ ಕಾಂಪೌಂಡ್ ಒಳಗೆ ಪ್ರತಿಭಟನೆ ಮಾಡುವಂತೆ ತಿಳಿಸಿದರು . ಈ ವೇಳೆ ವಕೀಲರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಕಾರು ಬಿಟ್ಟು ನಡೆದ ಕಾರ್ಮಿಕ ಅಧಿಕಾರಿ

ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ಮುಗಿಸಿಕೊಂಡು ತಮ್ಮ ಕಚೇರಿಗೆ ಕಾರಿನಲ್ಲಿ ಹೊರಟಿದ್ದ ಕಾರ್ಮಿಕ ಅಧಿಕಾರಿ ಯಮುನಾ ಅವರಿಗೂ ಪ್ರತಿಭಟನೆಯ ಬಿಸಿ ತಟ್ಟಿತು. ಯಮುನಾ ಅವರ ಕಾರನ್ನು ಜಿಲ್ಲಾಧಿಕಾರಿ ಕಚೇರಿ ಗೇಟ್ ಬಳಿಯೇ ವಕೀಲರು ತಡೆದರು. ಸರ್ಕಾರಿ ಅಧಿಕಾರಿಯಾದ ನೀವು ನಮ್ಮೊಂದಿಗೆ ಸಹಕಾರಿಸಬೇಕು. ಪ್ರತಿಭಟನೆ ಹಾದಿಯಲ್ಲಿ ನಿಮ್ಮ ವಾಹನ ತಂದು ನಿಲ್ಲಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿ ಕಾರನ್ನು ಗೆಟ್ ದಾಟಲು ಬಿಡಲಿಲ್ಲ. ಬಳಿಕ ಕೆಲ‌ಕಾಲ ಕಾರಿನಲ್ಲೆ ಕುಳಿತಿದ್ದ ಯಮುನಾ ಅವರು ಕಾರಿನಿಂದ ಇಳಿದು ನಡೆದುಕೊಂಡೇ ಗೇಟ್ ದಾಟಿದರು. ನಂತರ ಬೇರೆ ವಾಹನದಲ್ಲಿ ತಮ್ಮ ಕಚೇರಿ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.