ಚನ್ನರಾಯಪಟ್ಟಣ: ತಾಲ್ಲೂಕಿನ ಬೇಡಿಗನಹಳ್ಳಿ ಸಮೀಪ ಕಬ್ಬಿನಗದ್ದೆಯಲ್ಲಿ ಜನ್ಮ ಪಡೆದ ಮೂರು ಚಿರತೆ ಮರಿಗಳನ್ನು ಸುರಕ್ಷಿತವಾಗಿ ತಾಯಿಯ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಬ್ಬು ಕಟಾವು ಮಾಡುತ್ತಿದ್ದ ರೈತ ಚೆಲುವೇಗೌಡ ಅವರ ಗದ್ದೆಯಲ್ಲಿ ಮೂರು ದಿನಗಳ ಹಿಂದೆ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ದೂರವಾಣಿ ಮೂಲಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಡಿಸಿಎಫ್ ಸೌರಭ್ ಕುಮಾರ್, ಡಿಆರ್‌ಎಫ್‌ಒ ಶಂಕರ್ ಮತ್ತು ಎಸಿಎಫ್ ಖಲಂದರ್ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಚಿರತೆ ಮರಿಗಳನ್ನು ಸುರಕ್ಷಿತವಾಗಿ ಪೆಟ್ಟಿಗೆಯಲ್ಲಿ ಇರಿಸಲಾಯಿತು.
ರಾತ್ರಿ ವೇಳೆ ಸ್ಥಳಕ್ಕೆ ಬಂದ ತಾಯಿ ಚಿರತೆ, ಒಂದು ಮರಿಯನ್ನು ಕಚ್ಚಿಕೊಂಡು ಹೋಯಿತು. ಉಳಿದ ಎರಡು ಮರಿಗಳು ಪೆಟ್ಟಿಗೆಯಲ್ಲಿ ಉಳಿದವು. ಇಲಾಖೆ ಸಿಬ್ಬಂದಿ ಮರಿಗಳಿಗೆ ಹಾಲು ಉಣಿಸಿ ಆರೈಕೆ ಮಾಡಿ ಪೆಟ್ಟಿಗೆಯಲ್ಲಿ ಇರಿಸಿದರು. ಮಾರನೇ ದಿನ ರಾತ್ರಿ ತಾಯಿ ಚಿರತೆ ಬರಲಿಲ್ಲ. ಮೂರನೇ ದಿನ ರಾತ್ರಿ ಬಂದ ಚಿರತೆ ಮತ್ತೊಂದು ಮರಿಯನ್ನು ಕರೆದುಕೊಂಡು ಹೋಯಿತು. ಆದರೆ ಇನ್ನೊಂದು ಚಿರತೆ ಮರಿ ಪೆಟ್ಟಿಗೆಯಲ್ಲಿಯೇ ಉಳಿದಿತ್ತು.
ಅದನ್ನೂ ತಾಯಿ ಚಿರತೆಯ ಮಡಿಲು ಸೇರಿಸಲು ನಿರ್ಧರಿಸಿದ ಅರಣ್ಯಾಧಿಕಾರಿಗಳು, ಭದ್ರಾ ಅಭಯಾರಣ್ಯದಿಂದ ಶ್ವಾನದಳವನ್ನು ಕರೆಸಿ, ಚಿರತೆಯ ಜಾಡು ಹಿಡಿದು, ಹುಡುಕಿದರು.
ಥರ್ಮಲ್ ದ್ರೋಣ್ ಸಹಾಯದಿಂದ ಚಿರತೆ ಮತ್ತು ಎರಡು ಮರಿಗಳಿರುವ ಸ್ಥಳ ಪತ್ತೆ ಹಚ್ಚಲಾಯಿತು. ನಂತರ ಉಳಿದಿದ್ದ ಒಂದು ಚಿರತೆ ಮರಿ ಇರುವ ಪೆಟ್ಟಿಗೆಯನ್ನು ಅದೇ ಭಾಗದಲ್ಲಿ ಇಡಲಾಗಿತ್ತು. ರಾತ್ರಿ ವೇಳೆ ತನ್ನ ಮರಿ ಕೂಗುತ್ತಿರುವ ಶಬ್ದ ಕೇಳಿ ತಾಯಿ ಚಿರತೆ ಸ್ಥಳಕ್ಕೆ ಬಂದು ಪೆಟ್ಟಿಗೆಯಲ್ಲಿದ್ದ ಆ ಮೂರನೇ ಚಿರತೆ ಮರಿಯನ್ನು ಕಚ್ಚಿಕೊಂಡು ಹೋಗಿ ತನ್ನ ಮಡಿಲಿಗೆ ಸೇರಿಸಿಕೊಂಡಿತು.
ಮೂರು ಚಿರತೆ ಮರಿಗಳನ್ನು ತಾಯಿಯ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆಯ ಶ್ರಮ ಯಶಸ್ವಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.