ಹಾಸನ: ವಿಶ್ವ ಪಾರಂಪರಿಕ ತಾಣಗಳು ಹಾಸನ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಪ್ರವಾಸೋದ್ಯಮದಲ್ಲಿ ಶ್ರೀಮಂತವಾಗಿರುವ ಜಿಲ್ಲೆ ನಮ್ಮದು. ಪ್ರವಾಸಿಗರ ಸ್ನೇಹಿಯಾಗಿ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಡೆಸ್ಟಿನಿ ರೈಡರ್ಸ್ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ತಾಲ್ಲೂಕಿನ ದೊಡ್ಡ ಗದ್ದುವಳ್ಳಿ ಲಕ್ಷ್ಮೀದೇವಿ ದೇವಾಲಯದಿಂದ ಹಗರೆ ಮಾರ್ಗವಾಗಿ ಹಳೇಬೀಡು ದೇವಸ್ಥಾನದವರೆಗೂ ಆಯೋಜಿಸಿದ್ದ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಂತರ ಹಳೇಬೀಡಿನಲ್ಲಿ ಮಾತನಾಡಿದ ಅವರು, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸೋದ್ಯಮ, ಸುಸ್ಥಿರತೆ ಜೊತೆಯಾಗಿ ಬೆಳೆಯಬೇಕು ಎಂದರು.
ರಸ್ತೆಯ ಎರಡೂ ಬದಿಗಳಲ್ಲಿ ಅಂಗಡಿಗಳು, ರಸ್ತೆಯನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಫುಡ್ ಕೋರ್ಟ್ ರೀತಿಯಲ್ಲಿ ಇರಲಿ. ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗದಂತೆ ತೆರವುಗೊಳಿಸಲು ಸೂಚಿಸಿದರು.
ಹಳೇಬೀಡು ದೇವಾಲಯದ ಮುಂಭಾಗದಲ್ಲಿ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ತುರ್ತಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ. ರಸ್ತೆ ಬದಿ ವ್ಯಾಪಾರಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಿದರೆ, ಅವರಿಗೆ ವ್ಯಾಪಾರಕ್ಕೆ ಸ್ಥಳಾವಕಾಶವಿಲ್ಲ ಎಂಬ ಭಯ ನಿವಾರಣೆ ಆಗುತ್ತದೆ ಎಂದರು. ರಸ್ತೆ ಮಧ್ಯದಲ್ಲಿ ಕಬ್ಬಿನ ಜ್ಯೂಸ್ ಮಾರಾಟ ಮಾಡುವ ಅಂಗಡಿ ಕಂಡ ಜಿಲ್ಲಾಧಿಕಾರಿ, ಪೊಲೀಸ್ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ದೊಡ್ಡ ಗದ್ದುವಳ್ಳಿಯ ದೇವಾಲಯ ವೀಕ್ಷಣೆ ಮಾಡಿದ ನಂತರ ಸ್ಥಳೀಯರು, ಶೌಚಾಲಯ, ಕುಡಿಯುವ ನೀರು ಇನ್ನಿತರ ಮೂಲಸೌಕರ್ಯಗಳ ಸಮಸ್ಯೆಗಳ ಕುರಿತಾಗಿ ಮಾಹಿತಿ ನೀಡಿದರು. ಸ್ಥಳದಲ್ಲಿಯೇ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ದೇವಾಲಯದ ಭಾವಚಿತ್ರ ತೆಗೆದು, ಪ್ರವಾಸಿಗರಿಗೆ ಅನುಕೂಲವಾಗುವಂತೆ ಹಾಸನ– ಚಿಕ್ಕಮಗಳೂರು ಮಾರ್ಗ ಮಧ್ಯದಲ್ಲಿ ದೊಡ್ಡಗದ್ದುವಳ್ಳಿಯ ಪ್ರವೇಶ ದ್ವಾರದಲ್ಲಿ ಫಲಕ ಅಳವಡಿಸುವಂತೆ ಸೂಚನೆ ನೀಡಿದರು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಅರುಣ್ ಕುಮಾರ್, ಬೇಲೂರು ತಹಶೀಲ್ದಾರ್ ಶ್ರೀಧರ್ ಮತ್ತಿತರರು ಹಾಜರಿದ್ದರು.
ಪ್ರವಾಸಿ ಸ್ಥಳ...
ಪ್ರವಾಸಿ ಸ್ಥಳಗಳ ಮಾಹಿತಿ ನೀಡಿ ಪ್ರವಾಸೋದ್ಯಮ ಇಲಾಖೆ ಬಹಳಷ್ಟು ಅಭಿವೃದ್ಧಿ ಆಗಬೇಕಾಗಿದೆ. ಪ್ರವಾಸಿ ತಾಣಗಳ ಬಗ್ಗೆ ಕೇವಲ ಪ್ರಚಾರ ಪಡಿಸುವುದಲ್ಲದೇ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಪುರಾತನ ಮತು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕು. ಆ ಸ್ಥಳದ ಇತಿಹಾಸದ ಕುರಿತಾಗಿ ತಿಳಿ ಹೇಳಬೇಕು ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಹೇಳಿದರು. ಶಿಲ್ಪಕಲೆಗೆ ಪ್ರಸಿದ್ಧವಾದ ತಾಣ ಹಳೇಬೀಡು. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದ ಸ್ಥಳವಾಗಿದೆ. ಇಲ್ಲಿಯೂ ವಾಹನದ ನಿಲುಗಡೆಗೆ ಸ್ಥಳಾವಕಾಶದ ಸಮಸ್ಯೆ ಸ್ವಚ್ಛತೆ ರಸ್ತೆ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಕಂಡುಬಂದಿವೆ ಎಂದರು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಾಳಾಗಿರುವ ಸ್ಲಾಬ್ ಸರಿಪಡಿಸಿ. ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡುವುದರ ಜೊತೆಗೆ ಅಲ್ಲಲ್ಲಿಯೇ ಕಸದ ಬುಟ್ಟಿಗಳನ್ನು ಇಡಬೇಕು ಎಂದು ಸೂಚಿಸಿದ ಅವರು ದೇವಸ್ಥಾನದ ಸೌಂದರ್ಯೀಕರಣಕ್ಕೆ ದೇವಾಲಯದ ಆವರಣದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ. ವಾಹನಗಳನ್ನು ಶಿಸ್ತಿನಿಂದ ನಿಲ್ಲಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.