ADVERTISEMENT

ಕೋವಿಡ್‌ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ: ರೇವಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 6:01 IST
Last Updated 28 ಏಪ್ರಿಲ್ 2021, 6:01 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ‘ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ನ್ಯಾಯಾಂಗ ಮಧ್ಯ ಪ್ರವೇಶ ಮಾಡಿ ಮಾಡಿಟರ್‌ ಮಾಡಬೇಕು. ಇಲ್ಲದಿದ್ದರೆ ಜನ ಸಾಮಾನ್ಯರು ಬದುಕಿ ಉಳಿಯುವುದಿಲ್ಲ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಬೇಸರ ವ್ಯಕ್ತಪಡಿಸಿದರು.

‘ಯಾವುದೇ ಸಿದ್ಧತೆ ಕೈಗೊಳ್ಳದೆ ಏಕಾಏಕಿ ಲಾಕ್‌ಡೌನ್‌ ಮಾಡಲಾಗುತ್ತಿದೆ. ಕೂಲಿಕಾರ್ಮಿಕರು, ಬಡವರು, ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಕನಿಷ್ಠ 10 ಕೆ.ಜಿ. ಅಕ್ಕಿ, 10 ಕೆ.ಜಿ ರಾಗಿ ಅಥವಾ ಗೋಧಿ ಹಾಗೂ ₹ 5 ಸಾವಿರ ಸಹಾಯ ಧನ ನೀಡಬೇಕು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಜಿಲ್ಲೆಯಲ್ಲಿರುವ 15 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ರೋಗಿಗಳಿಗೆ ಹಾಸಿಗೆ ಕಾಯ್ದಿರಿಸಿದರೂ ಈವರೆಗೂ ಒಬ್ಬ ರೋಗಿಯನ್ನು ದಾಖಲು ಮಾಡಿ ಚಿಕಿತ್ಸೆ ನೀಡಿಲ್ಲ. ಜೊತೆಗೆ ಜಿಲ್ಲೆಯ 11 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್‌ ಆಸ್ಪತ್ರೆಗಳೆಂದು ಗುರುತಿಸಿ ಒಟ್ಟು 504 ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗಾಗಿಮೀಸಲಿರಿಸಲಾಗಿದ್ದು, ಪ್ರಸ್ತುತ 192 ಜನ ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಗೆ ತಜ್ಞ ವೈದ್ಯರು ಮತ್ತು ಎಂ.ಬಿ.ಬಿ.ಎಸ್‌ ವೈದ್ಯರು ಸೇರಿದಂತೆ ಒಟ್ಟು 286 ಹುದ್ದೆಗಳು ಮಂಜೂರಾಗಿದ್ದು, 216 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಇನ್ನೂ 70 ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ ನಿತ್ಯ 700 ರಿಂದ 800 ಜನರಿಗೆ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ನಿತ್ಯ ಅಂದಾಜು 320 ಜನರಿಗೆ ರೆಮ್‌ಡಿಸಿವಿರ್‌ ಚುಚ್ಚುಮದ್ದು ನೀಡಿ ಚಿಕಿತ್ಸೆ ನೀಡಬೇಕಾಗಿದೆ. ಆದರೆ, ಪ್ರಸ್ತುತ 126 ಡೋಸ್‌ ಮಾತ್ರ ರೆಮ್‌ಡಿಸಿವಿರ್‌ ಚುಚ್ಚುಮದ್ದು ಲಭ್ಯವಿದೆ. ಆದ್ದರಿಂದ ಮುಂದಿನ 15 ದಿನಗಳಿಗೆ ಅಂದಾಜು 4,800 ಡೋಸ್‌ ರೆಮ್‌ಡಿಸಿವಿರ್‌ ಚುಚ್ಚುಮದ್ದು ಅಗತ್ಯವಿದೆ’ ಎಂದರು.

‘ಇಂತಹತುರ್ತು ಸಂದರ್ಭದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡದೇ ಕೂಡಲೇ ಜಿಲ್ಲೆಗೆ ₹ 10 ಕೋಟಿ ಬಿಡುಗಡೆ ಮಾಡಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯನ್ನು ದ್ವೇಷದಿಂದನೋಡಲಾಗುತ್ತಿದೆ. ಯಾವುದೇ ನೀರಾವರಿ ಯೋಜನೆಗಳಿಗೂ ಅನುದಾನ ಮಂಜೂರು ಮಾಡಿಲ್ಲ. ಹಾಸನ ಅನಾಥ ಜಿಲ್ಲೆಯಾಗಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ’ ಎಂದು ಅಸಮಾಧಾನವ್ಯಕ್ತಪಡಿಸಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ರಾಜ್ಯಕ್ಕೆ ಎಷ್ಟು ಅನುದಾನ ಬೇಕು ನೀಡಲಿ. ರಾಜ್ಯದಲ್ಲಿ 26 ಜನ ಬಿಜೆಪಿ ಸಂಸದರಿದ್ದೂ ಮೂಕರಾಗಿದ್ದಾರೆ. ಸಂಸದರ ಅನುದಾನವನ್ನುಕಡಿತ ಮಾಡಿ ಅವರಿಗೆ ಶಕ್ತಿ ಇಲ್ಲದಂತೆ ಮಾಡಲಾಗಿದೆ. ಶಾಸಕರ ಸಂಬಳವನ್ನು ಕಡಿತ ಮಾಡಬಾರದು’ ಎಂದರು.

‘ಜಿಲ್ಲೆ ಲೂಟಿಕೋರರ ಕೈಯಲ್ಲಿ ಸಿಲುಕಿದೆ. ನಗರಸಭೆ ವತಿಯಿಂದ ಶವ ಸಂಸ್ಕಾರಕ್ಕೂ ₹ 5 ಸಾವಿರ ಪಡೆಯುತ್ತಿದ್ದಾರೆ ಎಂದರೆ ಯಾವ ಪರಿಸ್ಥಿತಿ ಇದೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಹೇಳುವವರು ಕೇಳುವವರು’ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.