ADVERTISEMENT

ಲಾಕ್‌ಡೌನ್ ವದಂತಿ: ಸಂಚಾರ ದಟ್ಟಣೆ

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 13:10 IST
Last Updated 14 ಜುಲೈ 2020, 13:10 IST
ಹಾಸನದ ಬಿ.ಎಂ ರಸ್ತೆಯಲ್ಲಿ ವಾಹನ ದಟ್ಟಣೆ ಕಂಡು ಬಂತು.
ಹಾಸನದ ಬಿ.ಎಂ ರಸ್ತೆಯಲ್ಲಿ ವಾಹನ ದಟ್ಟಣೆ ಕಂಡು ಬಂತು.   

ಹಾಸನ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮಾಡುವ ಅಧಿಕಾರವನ್ನು ಸರ್ಕಾರ ಆಯಾ
ಜಿಲ್ಲಾಡಳಿತಕ್ಕೆ ನೀಡಿದ ಬೆನ್ನಲ್ಲೇ ಹಾಸನದಲ್ಲೂ ಲಾಕ್‌ಡೌನ್‌ ಆಗುತ್ತದೆ ಎಂಬ ಆತಂಕದಲ್ಲಿ ಜನರು ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.

ಪ್ರಾವಿಷನ್‌ ಸ್ಟೋರ್, ಬಟ್ಟೆ, ಆಭರಣ, ಮದ್ಯ ಅಂಗಡಿಗಳ ಮುಂದೆ ಗುಂಪು ಗುಂಪಾಗಿ ನಿಂತಿದ್ದು ಕಂಡು ಬಂತು. ವಾಹನ ದಟ್ಟಣೆಯೂ ಕಂಡು ಬಂತು. ಸಾರ್ವಜನಿಕರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಹಾಗೆಯೇ ಪಾರ್ಕಿಂಗ್‌ ಸಮಸ್ಯೆಯೂ ಹೆಚ್ಚಾಗಿತ್ತು.

ಈಗಾಗಲೇ ಜಿಲ್ಲಾ ಕೇಂದ್ರ ಸೇರಿದಂತೆ ಹಲವು ಕಡೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂ ಪ್ರೇರಿತ ಲಾಕ್‌ಡೌನ್‌ ಮಾಡಲಾಗುತ್ತಿದೆ. ಜಿಲ್ಲೆಯಲ್ಲೂ ಲಾಕ್‌ಡೌನ್‌ ಆಗಬಹುದು ಅಂದುಕೊಂಡು ಜನರು ಅಗತ್ಯ ಸಾಮಗ್ರಿ ಖರೀದಿಯಲ್ಲಿ ತೊಡಗಿದರು. ಮಾರುಕಟ್ಟೆಯಲ್ಲಿ ಜನಜಂಗುಳಿ ಇತ್ತು. ಗ್ರಾಮೀಣ ಪ್ರದೇಶದಿಂದಲೂ ಹೆಚ್ಚಿನ ಜನರು ಕೃಷಿ ಉಪಕರಣ, ಔಷಧಿ, ಬಿತ್ತನೆ ಬೀಜ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಲು ನಗರಕ್ಕೆ ಬಂದಿದ್ದರು.

ADVERTISEMENT

ಮದುವೆ, ಗೃಹಪ್ರವೇಶ, ಇತರೆ ಶುಭ ಸಮಾರಂಭಗಳಿಗೆ ಬಹಳಷ್ಟು ಜನರು ಚಿನ್ನಾಭರಣ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಬಟ್ಟೆ , ಆಭರಣ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿದ್ದವು. ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಆದರೆ, ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಗ್ರಾಹಕರ ಸಂಖ್ಯೆ ಗಣನೀಯಾಗಿ ಕಡಿಮೆ ಇತ್ತು.

ದ್ವಿಚಕ್ರ , ಆಟೊ, ಕಾರು ಮಾಲೀಕರು ಇಂಧನ ತುಂಬಿಸಿಕೊಳ್ಳಲು ಸರದಿ ಸಾಲಿನಲ್ಲಿ ನಿಂತಿದ್ದರು. ಹಲವು ಮದ್ಯದಂಗಡಿಗಳ ಎದುರು ಸಾಲು ಕಂಡು ಬಂತು. ಕೆಲವು ಕಡೆ ನಿಗದಿತ ಬೆಲೆಯ ಮದ್ಯವನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂತು.

ಸಾಲಗಾಮೆ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಆಗಿತ್ತು. ಒಂದು ಗಂಟೆಗೂ ಹೆಚ್ಚಿನ ಅವಧಿ ಮಹಾವೀರ ವೃತ್ತದಿಂದ ಸಾಯಿ ಬಾಬಾ ಮಂದಿರದ ವರೆಗೆ ಟ್ರಾಫಿಕ್ ಜಾಮ್‌ ಉಂಟಾಗಿ ತೊಂದರೆ ಉಂಟಾಯಿತು. ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಕುಡಿಯುವ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆ ಬಂದ್‌ ಮಾಡಲಾಗಿದೆ. ಹಾಗಾಗಿ ಒಂದು ಕಡೆ ವಾಹನ ದಟ್ಟಣೆ ಅಧಿಕವಾಗಿತ್ತು.

ಉಳಿದಂತೆ ಸಂತೆಪೇಟೆ, ಎನ್‌.ಆರ್‌.ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್‌ ಜಾಮ್‌ನಿಂದ ವಾಹನ ಸವಾರರು ತೊಂದರೆ ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದು, ವಾಹನಗಳ ಓಡಾಟ ಸಾಮಾನ್ಯವಾಗಿದೆ. ಕಳೆದ ವಾರದಿಂದ ಜಿಲ್ಲಾ ಕೇಂದ್ರದಲ್ಲಿ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ ಮಾಡಿಕೊಂಡಿದ್ದಾರೆ.

"ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವುದರಿಂದ ಲಾಕ್‌ಡೌನ್‌ ಮಾಡಬಹುದು ಎಂಬ ಭೀತಿಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಬಂದಿದ್ದಾರೆ. ಹಾಗಾಗಿ ಸಂಚಾರ ದಟ್ಟಣೆ ಉಂಟಾಗಿದೆ’ ಎಂದು ಸಂಚಾರಿ ಪೊಲೀಸ್ ಮಹೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.