ADVERTISEMENT

ಲೋಕ್ ಅದಾಲತ್: ಶೀಘ್ರ ನ್ಯಾಯದಾನ

ಡಿ.13 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜನೆ: ನ್ಯಾ. ಹೇಮಾವತಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 3:17 IST
Last Updated 26 ನವೆಂಬರ್ 2025, 3:17 IST
ಹಾಸನದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಹೇಮಾವತಿ ಮಾಹಿತಿ ನೀಡಿದರು. ಹಿರಿಯ ಸಿವಿಲ್‌ ನ್ಯಾಯಾಧೀಶೆ ದಾಕ್ಷಾಯಣಿ ಜಿ.ಕೆ. ಇದ್ದರು
ಹಾಸನದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಹೇಮಾವತಿ ಮಾಹಿತಿ ನೀಡಿದರು. ಹಿರಿಯ ಸಿವಿಲ್‌ ನ್ಯಾಯಾಧೀಶೆ ದಾಕ್ಷಾಯಣಿ ಜಿ.ಕೆ. ಇದ್ದರು   

ಹಾಸನ: ಲೋಕ್ ಅದಾಲತ್‍ನಿಂದ ಶೀಘ್ರ ನ್ಯಾಯದಾನ ಲಭ್ಯವಾಗಲಿದ್ದು, ಉಭಯ ಪಕ್ಷಗಾರರ ನಡುವೆ ಬಾಂಧವ್ಯ ವೃದ್ಧಿಯ ಜೊತೆಗೆ ಸಮಯ ಹಾಗೂ ಹಣದ ಉಳಿತಾಯವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಹೇಮಾವತಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ‘ಡಿಸೆಂಬರ್ 13ರಂದು ದೇಶದಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌ ನಡೆಸಲಾಗುತ್ತಿದ್ದು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆ ಹಾಗೂ ತಾಲ್ಲೂಕುಗಳ ಎಲ್ಲ ನ್ಯಾಯಾಲಯಗಳಲ್ಲೂ ಏಕಕಾಲಕ್ಕೆ ಜನತಾ ನ್ಯಾಯಾಲಯ ಹಮ್ಮಿಕೊಳ್ಳಲಾಗಿದೆ’ ಎಂದರು.

ರಾಜಿ ಸಂಧಾನ ಪ್ರಕ್ರಿಯೆ ನಡೆಸಲಾಗುವುದು. ಸಂಧಾನದ ಮೂಲಕ ರಾಜಿ ಮಾಡಿಕೊಳ್ಳುವ ಉಭಯ ಪಕ್ಷಗಾರರು ಖುದ್ದಾಗಿ ಅಥವಾ ವಕೀಲರ ಮೂಲಕ ಸಂಧಾನ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.

ADVERTISEMENT

ಲೋಕ ಅದಾಲತ್‍ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಸಿವಿಲ್ ಪ್ರಕರಣಗಳು, ಬಗೆಹರಿಸಬಹುದಾದ ಕ್ರಿಮಿನಲ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ, ಭೂ ಸ್ವಾಧೀನ, ಚೆಕ್ ಅಮಾನ್ಯ, ಜನನ ನೋಂದಣಿ, ಕೌಟುಂಬಿಕ, ಜೀವನಾಂಶ, ಲಘು ಕ್ರಿಮಿನಲ್ ಪ್ರಕರಣಗಳು, ಬ್ಯಾಂಕ್ ಹಣ ವಸೂಲಾತಿ, ವ್ಯಾಜ್ಯ ಪೂರ್ವ ಪ್ರಕರಣಗಳಾದ ಬ್ಯಾಂಕ್ ಸಾಲ ಮರುಪಾವತಿ, ನೀರಿನ ಕರ ವಸೂಲಿ, ಕಂದಾಯ ಇನ್ನಿತರ ಲಘು ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.

ನ್ಯಾಯಾಲಯಗಳಲ್ಲಿ ಪ್ರತಿದಿನ ಪೂರ್ವ ಸಂಧಾನ ಪ್ರಕ್ರಿಯೆಯು ನಡೆಯಲಿದ್ದು, ಪಕ್ಷಗಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ ಮಾತನಾಡಿ, ‘ರಾಜ್ಯ ಸರ್ಕಾರದ ಆದೇಶದಂತೆ ಸಂಚಾರ ಇ–ಚಲನ್ ದಂಡ ಪ್ರಕರಣಗಳು ಮತ್ತು ಸಾರಿಗೆ ಇಲಾಖೆಯಲ್ಲಿ 1990-91ರಿಂದ 2020 ರವರೆಗೆ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ದಂಡದ ಮೊತ್ತದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗಿದೆ. ದಂಡ ಪಾವತಿಸಲು ನವೆಂಬರ್ 21ರಿಂದ ಡಿಸೆಂಬರ್ 12 ರವರೆಗೂ ಕಾಲಾವಕಾಶ ನೀಡಲಾಗಿದ್ದು, ಸಂಬಂಧಪಟ್ಟ ಸಾರ್ವಜನಿಕರು ಸದುಪಯೋಗ ಪಡೆಯಬಹುದು’ ಎಂದರು.

ಹೆಚ್ಚಿನ ಮಾಹಿತಿಗೆ ನ್ಯಾಯಾಲಯ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಬಹುದು. ಉಚಿತ ಕಾನೂನು ಸಹಾಯವಾಣಿ 15100 ಮೂಲಕವೂ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.