ಹಾಸನ: ‘ಹೋದ ಮೇಲೆ ಏನ್ ಹೇಳೋದು. ಇದ್ದೊಬ್ಬ ತಮ್ಮ ಏನು ಮಾತಾಡಾಕೆ ಆಗಲ್ಲ’
ತಾಲ್ಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕಬ್ಬಿನಹಳ್ಳಿಯ ಪ್ರವೀಣ್ ಅವರ ಅಕ್ಕ ಕಣ್ಣೀರಾದರು. ಇದು ಒಬ್ಬರ ಕತೆಯಲ್ಲ. ಘಟನೆಯಲ್ಲಿ ಮೃತಪಟ್ಟ ಜಿಲ್ಲೆಯ 6 ಜನರ ಕುಟುಂಬದ್ದು ಒಂದೊಂದು ಕತೆ. ಬಹುತೇಕ ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದರು.
ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಯುವಕರ ಕುಟುಂಬದವರು ಸ್ವಲ್ಪ ನಿರುಮ್ಮಳರಾಗಿದ್ದರೂ, ಅವರ ಆಕ್ರೋಶ ಮಾತ್ರ ಕಡಿಮೆ ಆಗಿರಲಿಲ್ಲ. ‘ಈ ಡಿಜೆ, ಗಣಪತಿ ಯಾಕೆ ಬೇಕು. ಈಗಿನ ಕಾಲದಲ್ಲಿ ನಾವು ಒಂದೊಂದೇ ಮಕ್ಕಳನ್ನು ಮಾಡಿಕೊಂಡಿರುತ್ತೇವೆ. ನನ್ನ ಮಗ ಸ್ವಲ್ಪದರಲ್ಲಿಯೇ ಪಾರಾಗಿ ಬಂದಿದ್ದಾನೆ. ಈ ರೀತಿ ಗಣೇಶ ಹಬ್ಬ ಮಾಡಿದರೆ ಮಕ್ಕಳನ್ನು ಕಳೆದುಕೊಳ್ಳುವುದೇ’ ಎಂದು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಮೃತಪಟ್ಟ ಬೈಕ್ ಸವಾರ ಬಂಟರಹಳ್ಳಿಯ ಪ್ರಭಾಕರ್ ಹಾಗೂ ಕಬ್ಬಿನಹಳ್ಳಿಯ ಈಶ್ವರ್ ಅವರ ಮನೆಗಳಿಗೆ ಭೇಟಿ ನೀಡಿದ ವೇಳೆ, ಅವರ ಕುಟುಂಬದವರು ಜಿಲ್ಲಾಡಳಿತ ಮತ್ತು ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಘಟನೆಗೆ ಜಿಲ್ಲಾಡಳಿತವೇ ಹೊಣೆ. ಸಾವಾದ ಮೇಲೂ ಪೊಲೀಸರು ಸರಿಯಾಗಿ ನಡೆಸಿಕೊಂಡಿಲ್ಲ, ಗ್ರಾಮದಲ್ಲಿ ವಿದ್ಯುತ್ ಇಲ್ಲ. ಬೆಳಿಗ್ಗೆವರೆಗೂ ಮೃತದೇಹ ಶವಾಗಾರದಲ್ಲೇ ಇರಲಿ ಎಂದು ಬೇಡಿಕೊಂಡರೂ ಕೇಳಲಿಲ್ಲ ಎಂದು ಹೇಳಿದರು.
ಪೊಲೀಸರು ನಮ್ಮ ಮಾತು ಕೇಳದೇ ರಾತ್ರಿಯೇ ಮರಣೋತ್ತರ ಪರೀಕ್ಷೆ ಮಾಡಿ ಕಳುಹಿಸಿಕೊಟ್ಟರು. ಅವರ ವೈಫಲ್ಯ ಮುಚ್ಚಿಕೊಳ್ಳಲು ನಮ್ಮ ಮಕ್ಕಳ ಮೃತದೇಹವನ್ನು ತರಾತುರಿಯಲ್ಲಿ ಕಳಿಸಿಕೊಟ್ಟರು. ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಇಂತಹ ದುರಂತ ಸಂಭವಿಸುತ್ತಿರಲಿಲ್ಲ ಎಂದು ಅಲವತ್ತಿಕೊಂಡರು.
ರಾತ್ರಿಯೇ ಮೃತದೇಹಗಳ ಹಸ್ತಾಂತರ: ಘಟನೆಯ ಮಾಹಿತಿ ಪಡೆದು ಕೂಡಲೇ ಕಾರ್ಯಪ್ರವೃತ್ತರಾದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾಧಿಕಾರಿ, ಎಸ್ಪಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು. ರಾತ್ರಿಯೇ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಶವಗಳನ್ನು ಕುಟುಂಬದವವರಿಗೆ ಹಸ್ತಾಂತರಿಸಲಾಯಿತು.
ಸಾಂತ್ವನ ಹೇಳಿದ ಸಚಿವ ಕೃಷ್ಣ ಬೈರೇಗೌಡ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಶನಿವಾರ ಜಿಲ್ಲೆಗೆ ಭೇಟಿ ನೀಡಿದ್ದು, ತಾಲ್ಲೂಕಿನ ಶಾಂತಿಗ್ರಾಮದ ಸರ್ಕಾರಿ ಶಾಲೆಯಲ್ಲೇ ಸಂಸದ ಶ್ರೇಯಸ್ ಪಟೇಲ್, ಡಿಸಿ, ಎಸ್‌ಪಿ, ಜಿಲ್ಲಾ ಪಂಚಾಯಿತಿ ಸಿಇಒ ಅವರ ಜೊತೆ ತುರ್ತು ಸಭೆ ನಡೆಸಿದರು.
ನಂತರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಘಟನೆ ವಿವರ ಪಡೆದರು. ಮೃತಪಟ್ಟವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಘಟನೆ ಮೃತಪಟ್ಟ ಬಂಟರಹಳ್ಳಿ ಪ್ರಭಾಕರ್ ಅವರ ಮನೆಗೆ ಭೇಟಿ ನೀಡಿದ ಕೃಷ್ಣ ಬೈರೇಗೌಡ, ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಗಣ್ಯರ ಕಂಬನಿ: 9 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಸೋಮಣ್ಣ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶಾಸಕ ಎಚ್.ಡಿ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ್ದರು. ಸಂಸದ ಶ್ರೇಯಸ್ ಪಟೇಲ್ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಗಳ ಉಸ್ತುವಾರಿ ನೋಡಿಕೊಂಡರು. ಜಿಲ್ಲಾಧಿಕಾರಿ ಲತಾಕುಮಾರಿ, ಎಸ್ಪಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ ರಾತ್ರಿಯಿಡೀ ಸ್ಥಳದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.