ADVERTISEMENT

ನಷ್ಟವೇ ಜಾಸ್ತಿ; ಮೇವು ಸಿಗುವುದು ಕಷ್ಟ

ಕಟಾವಿಗೂ ಮುನ್ನ ಹೊಲದಲ್ಲೇ ಮೊಳಕೆಯೊಡೆದ ತೆನೆ: ವರುಣನ ಬಿಡುವಿಗೆ ಕಾತರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 20:00 IST
Last Updated 13 ಡಿಸೆಂಬರ್ 2021, 20:00 IST
ಹೆತ್ತೂರು ಸಮೀಪದ ಮಂಚಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ರಮೇಶ್ ಅವರು ಬೆಳೆದಿದ್ದ ಭತ್ತ ಸಂಪೂರ್ಣವಾಗಿ ಬಿದ್ದಿರುವುದು
ಹೆತ್ತೂರು ಸಮೀಪದ ಮಂಚಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ರಮೇಶ್ ಅವರು ಬೆಳೆದಿದ್ದ ಭತ್ತ ಸಂಪೂರ್ಣವಾಗಿ ಬಿದ್ದಿರುವುದು   

ಹೆತ್ತೂರು: ಯಸಳೂರು, ಹೆತ್ತೂರು ಹೋಬಳಿಯ ಭತ್ತ ಬೆಳೆಗಾರರು ಅಕಾಲಿಕ ಸತತ ಮಳೆಯಿಂದಾಗಿ ನಷ್ಟದ ಭೀತಿ ಎದುರಿಸುವಂತಾಗಿದೆ.

ಕೆಲವೆಡೆ ಈಗ ಭತ್ತ ಕಾಳು ಕಟ್ಟುತ್ತಿದ್ದರೆ, ಕೆಲವು ಪ್ರದೇಶದಲ್ಲಿ ಕೊಯ್ಲಿಗೆ ಬಂದಿದೆ. ಮಳೆ ಬೀಳುತ್ತಿರುವುದರಿಂದ ಪೈರು ಮುರಿದು ಬಿದ್ದು ನೆಲಕಚ್ಚಿದ್ದು ಬಿದ್ದ ಪೈರಿನ ಭತ್ತ ಕಾಳು ನೀರು ಸೇರಿ ಮೊಳಕೆ ಬರುತ್ತಿದೆ.

ಭತ್ತ ಕೃಷಿಯಿಂದ ನಷ್ಟವೇ ಜಾಸ್ತಿ ಎಂದು ಮಲೆನಾಡಿನಲ್ಲಿ ಸಾಕಷ್ಟು ರೈತರು ಭತ್ತದ ಕೃಷಿಯಿಂದ ಹಿಂದಕ್ಕೆ ಸರಿದಿದ್ದಾರೆ.ಕೆಲವುಭಾಗದಲ್ಲಿ ಹೆಚ್ಚಿನ ಕೃಷಿಕರು ನಷ್ಟವಾದರೂ ಭತ್ತ ಬೆಳೆಯುತ್ತಿದ್ದಾರೆ. ಆದರೆ, ಅಕಾಲಿಕ ಮಳೆ ರೈತರ ನೆಮ್ಮದಿ ಕಸಿದುಕೊಂಡಿದೆ.

ADVERTISEMENT

ಅತೀ ಹೆಚ್ಚು ಮಳೆ ಬೀಳುವ ಹೆತ್ತೂರು ಹೋಬಳಿಯ ಹೊಸಹಳ್ಳಿ, ಕಾಗಿನಹರೆ, ಹೊಂಗಡಹಳ್ಳ, ಬಿಸ್ಲೆ, ಹಡ್ಲುಗದ್ದೆ, ಅತ್ತಿಹಳ್ಳಿ, ಮಾವಿನೂರು, ವನಗೂರು, ಮಾಗೇರಿ, ಮಾಲುಮನೆ, ಹಾಡ್ಲಹಳ್ಳಿ, ಸಿಂಕೇರಿ, ಜಾಗಟಾ, ಯಡಕುಮರಿ ಇತ್ಯಾದಿ ಗ್ರಾಮಗಳಲ್ಲಿ ಜೀವನಕ್ಕಾಗಿ (ಮನೆಗಾಗಿ) ಮಾತ್ರ ಭತ್ತ ಬೆಳೆದಿದ್ದಾರೆ.

ಮುಂಗಾರಿನಲ್ಲಿ ಸುರಿದಧಾರಾಕಾರಮಳೆಗೆ ಕಾಫಿ, ಕಾಳುಮೆಣಸು ಫಸಲನ್ನು ಕಳೆದುಕೊಂಡಿದ್ದರು. ಈಗ ಭತ್ತ ಕೊಯ್ಲಿಗೆ ಬಂದಿರುವ ಐಗೂರು, ಯಡಕೇರಿ, ಅತ್ತಿಗನಹಳ್ಳಿ ಸೇರಿದಂತೆ ಹಲವು ಕಡೆ ಕೃಷಿಕರ ಗೋಳು ಅರಣ್ಯರೋದನವಾಗಿದೆ.

ಮಲೆನಾಡು ಭಾಗದಲ್ಲಿ ಸಾವಿರಾರು ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ. 1,000 ಹೆಕ್ಟೇರ್‌ನಲ್ಲಿನ ಭತ್ತ ಈಗಾಗಲೇ ಕೊಯ್ಲಿಗೆ ಬಂದಿದೆ. ಎರಡು ವಾರದೊಳಗೆ ಶೇ 90ರಷ್ಟು ಭತ್ತದ ಬೆಳೆ ಕೊಯ್ಲಿಗೆ ಬರಲಿದೆ. ವರುಣ ಶಾಂತನಾದರೆ ಒಳ್ಳೆಯದು ಎಂದು ರೈತರು ಕಾಯುತ್ತಿದ್ದಾರೆ.

‘ಈ ಬಾರಿ ಆರು ತಿಂಗಳ ಬಿ.ಆರ್ ತಳಿಯ ಭತ್ತದ ಸಸಿ ನಾಟಿ ಮಾಡಿದ್ದೇವೆ. ಈ ತಳಿಯ ಭತ್ತದ ಪೈರು ಎತ್ತರವಾಗಿ ಬೆಳೆಯುತ್ತದೆ. ಪಶುಗಳಿಗೆ ಮೇವು ಚೆನ್ನಾಗಿ ಸಿಗುತ್ತದೆ. ಈವರೆಗೂ ಚೆನ್ನಾಗಿ ಪೈರು ಬಂದು ಕಾಳು ಕಟ್ಟಿತ್ತು. ಆದರೆ, ಅಕಾಲಿಕ ಮಳೆಯಿಂದಾಗಿ ಭತ್ತದ ಪೈರು ಗದ್ದೆಯಲ್ಲಿ ಬಿದ್ದು ಹೋಗಿದೆ. ಇದರಿಂದ ಶೇ 20ರಷ್ಟು ಫಸಲು ಕೈಗೆ ಸಿಕ್ಕುವುದು ಕಷ್ಟ. ಈಗಾಗಲೇ ನೀರಿನಲ್ಲಿ ಭತ್ತದ ತೆನೆ ಮುಳುಗಿರುವುದರಿಂದ ಉದುರಿ ಹೋಗುತ್ತದೆ. ಬೆಳೆಗಾರರು ನಿರಂತರವಾಗಿ ನಷ್ಟಕ್ಕೊಳಗಾಗುವುದು ಮುಂದುವರೆದಿದೆ. ಸರ್ಕಾರ ಭತ್ತ ಬೆಳೆಗಾರರ ಹಿತ ಕಾಯುವ ಕೆಲಸ ಮಾಡಬೇಕು’ ಎಂದು ಲಕ್ಷ್ಮಿಪುರ ಗ್ರಾಮದ ಪ್ರಮೋದ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.