ಹೊಳೆನರಸೀಪುರ: ತಾಲೂಕು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ 70 ಜನರು ಅರ್ಜಿ ಸಲ್ಲಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಜನಸ್ಪಂದನ ಸಭೆಗೆ ನಿರೀಕ್ಷಿತ ಜನರು ಆಗಮಿಸಿರಲಿಲ್ಲ.
ತಾಲೂಕಿನ 32 ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಸಮಸ್ಯೆಗಳು ಇದ್ದಲ್ಲಿ ಅವುಗಳನ್ನು ಪರಿಹರಿಸಿಕೊಳ್ಳಲು ಒಂದೇ ಸೂರಿನಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿತ್ತು. ತಾಲ್ಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ, ಸರ್ಕಾರದ ಮಾರ್ಗಸೂಚಿ ಅನುಸಾರ ವಿಲೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಕಂದಾಯ ಇಲಾಖೆಯ 58, ಪುರಸಭೆಯ 4, ತಾಲ್ಲೂಕು ಪಂಚಾಯಿತಿಯ 2, ಅರಣ್ಯ ಇಲಾಖೆಯ 3, ಅಬಕಾರಿಯ 1, ವಿದ್ಯುತ್ ಇಲಾಖೆಯ 2, ಅಲ್ವಸಂಖ್ಯಾತರ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 70 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದ್ದು, ಇವರುಗಳಿಗೆ 7 ದಿನದಲ್ಲಿ ಸೂಕ್ತ ಉತ್ತರ ನೀಡಲಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಯಾರಿಗೇ ಅರ್ಜಿ ಸಲ್ಲಿಸಿದರೂ ಕೆಲಸಗಳು ಆಗಲ್ಲ ಎಂದು ಬೇಸರಗೊಂಡಿರುವ ತಾಲ್ಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಲು ಆಗಮಿಸಿಲ್ಲ ಎಂದು ಚಟ್ಟನಹಳ್ಳಿ ಚಂದ್ರ ಅಭಿಪ್ರಾಯಪಟ್ಟರು. ಜನರ ಓಡಾಟಕ್ಕೆಂದು ಮೀಸಲಿರುವ ಸರ್ಕಾರಿ ಜಾಗವನ್ನು ಬಿಡಿಸಿಕೊಟ್ಟು ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಮಾಡಿಕೊಡಿ ಎಂದು ಕಳೆದ 2 ವರ್ಷಗಳಿಂದ ತಾಲ್ಲೂಕು ಕಚೇರಿಗೆ ಅಲೆಯುತ್ತಿದ್ದರೂ ಜಾಗ ಬಿಡಿಸಿಕೊಟ್ಟಿಲ್ಲ. ಆದ್ದರಿಂದ ನಾನು ನೇರ ಕಂದಾಯ ಸಚಿವರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.
ತಾ.ಪಂ. ಇಒ ಮುನಿರಾಜು, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ಬಿಇಒ ಜಿ.ಎನ್.ಸೋಮಲಿಂಗೇಗೌಡ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸುರೇಶ್, ಉಪ ತಹಶೀಲ್ದಾರ್ ರೂಪೇಶ್, ಉಪ ನೊಂದಣಾಧಿಕಾರಿ ರಾಕೇಶ್, ಕೃಷಿ ಇಲಾಖೆ ಅಧಿಕಾರಿ ಸವಿತಾ, ಅಹಾರ ಶಿರೆಸ್ತೇದಾರ್ ವಾಸು, ಕಂದಾಯ ಇಲಾಖೆಯ ಪ್ರಸಾದ್, ರೋಷನ್, ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.