ಹಳೇಬೀಡು ಸಮೀಪದ ಪುಷ್ಪಗಿರಿಯ 108 ಲಿಂಗ ಮಂದಿರದಲ್ಲಿ ಬುಧವಾರ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರಧಾನ ಲಿಂಗಕ್ಕೆ ಪೂಜೆ ನೆರವೇರಿಸಿದರು
ಹಳೇಬೀಡು: ಪುಷ್ಪಗಿರಿಯಲ್ಲಿ ಬುಧವಾರ ಮಹಾಶಿವರಾತ್ರಿ ವೈಭವ ಮನೆ ಮಾಡಿತ್ತು. ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ಶಿವನಾಮ ಸ್ಮರಣೆ ಮಾಡಿ ಧನ್ಯತಾಭಾವ ಮೆರೆದರು.
ಪುಷ್ಪಗಿರಿ ಮಠದ 108 ಲಿಂಗ ಮಂದಿರ, ಆದಿಯೋಗಿ ಶಿವನ ಪ್ರತಿಮೆ, ಶ್ರೀಗುರು ಕರಿಬಸವೇಶ್ವರ ಅಜ್ಜಯ್ಯ ಮಂದಿರ ಹಾಗೂ ಹೊಯ್ಸಳರ ಕಾಲದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಗಳಲ್ಲಿ ಭಕ್ತಸಾಗರವೇ ಕಂಡು ಬಂತು.
ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ವೇದ ಮಂತ್ರ ಘೋಷದೊಂದಿಗೆ 108 ಲಿಂಗ ಮಂದಿರದ ಪ್ರಧಾನ ಲಿಂಗಕ್ಕೆ ವಿವಿಧ ದ್ರವ್ಯಗಳೊಂದಿಗೆ ಶತರುದ್ರಾಭಿಷೇಕ ನೆರವೇರಿಸಿದರು. ವಿವಿಧ ಬಗೆಯ ಪುಷ್ಪ ಹಾಗೂ ಬಿಲ್ವಪತ್ರೆಗಳಿಂದ ಅರ್ಚನೆ ಮಾಡಿದರು.
ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ನಸುಕಿನಲ್ಲಿಯೇ ಪೂಜಾ ವಿಧಾನ ಆರಂಭವಾಯಿತು. ಗರ್ಭಗುಡಿಯ ಲಿಂಗಕ್ಕೆ ರುದ್ರಾಭಿಷೇಕ ನೆರವೇರಿಸಿದ ನಂತರ ಮುಖವಾಡ ಧರಿಸಿ, ವಿಶೇಷ ಪೂಜೆ ನೆರವೇರಿಸಿದರು. ಭಕ್ತಿ ಸಮೂಹ ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.