ಅರಸೀಕೆರೆ: ಹಾರನಹಳ್ಳಿ ಕೋಡಿಮಠ ಸಂಸ್ಥಾನದಲ್ಲಿ ಮಾ.15, 16 ಮತ್ತು 17 ರಂದು ಮಹದೇಶ್ವರ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬರುವ ಸಹಸ್ರಾರು ಭಕ್ತರು ಈ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದು, ವಿಜೃಂಭಣೆಯಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹ ಕಾತುರವಾಗಿದೆ.
ಕ್ಷೇತ್ರದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಗಾವಿ ಜಿಲ್ಲೆ ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ನೇತೃತ್ವ ಮತ್ತು ರಾಜ್ಯ ಗೃಹಮಂಡಳಿ ಅಧ್ಯಕ್ಷ ಶಾಸಕ ಕೆ.ಎಂ ಶಿವಲಿಂಗೇಗೌಡರ ಉಪಸ್ಥಿತಿಯಲ್ಲಿ 3 ದಿನಗಳ ನಿರಂತರ ಕಾರ್ಯಕ್ರಮ ನಡೆಯಲಿದೆ.
ಮಾ.15ರಂದು ಬೆಳಿಗ್ಗೆ 8 ಗಂಟೆಗೆ ಕೋಡಿಮಠ ಮತ್ತು ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಷಟ್‌ಸ್ಥಳ ಧ್ವಜಾರೋಹಣ, ಕೋಡಿಮಠ ಕ್ಷೇತ್ರದಲ್ಲಿ ಕಡೂರು ತಾಲ್ಲೂಕು ದೊಡ್ಡಮಠ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಮಹಾಸಿಂಹಾಸನ ಪೂಜೆ ಮತ್ತು ಅಣ್ಣಾಯ್ಕನಹಳ್ಳಿ ಹಾಗೂ ಹಳ್ಳಾರಟ್ಟ ವಂಶಸ್ಥರಿಂದ ರಜತ ಪಲ್ಲಕ್ಕಿ ಮಹಾಪೂಜೆ ನೆರವೇರಲಿದೆ.
ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವು ಸಂಭ್ರಮದಿಂದ ನೆರವೇರಲಿದೆ. ಬೆಳಿಗ್ಗೆ 11 ಗಂಟೆಗೆ ಕಡೂರು ತಾಲ್ಲೂಕು ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಸುಂಡಿ ಆಧ್ಯಾತ್ಮ ವಿದ್ಯಾ ಕೇಂದ್ರದ ಶಿವಶರಣೆ ನೀಲಮ್ಮ ತಾಯಿಯವರಿಂದ ಧಾರ್ಮಿಕ ಪ್ರವಚನದಲ್ಲಿ ವಿಚಾರಧಾರೆಗಳು ಭಕ್ತರನ್ನು ಸೆಳೆಯಲಿದೆ.
ಮಾ.16ರಂದು ಬೆಳಿಗ್ಗೆ ಕ್ಷೇತ್ರದಲ್ಲಿ ಸೊರಬ ತಾಲ್ಲೂಕು ಜಡೆ ಸಂಸ್ಥಾನಮಠದ ಮಹಾಂತ ಸ್ವಾಮೀಜಿ ಮತ್ತು ಶಿವಮೊಗ್ಗ ತಾಲ್ಲೂಕು ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಮಹದೇಶ್ವರ ಬೆಟ್ಟದಲ್ಲಿ ಮಹಾಂತ ಸ್ವಾಮೀಜಿಗೆ ಪಾದಪೂಜಾ ಕಾರ್ಯಕ್ರಮ ನಡೆಯಲಿದೆ.
ಮಾ.17ರಂದು ಬೆಳಿಗ್ಗೆ ಕ್ಷೇತ್ರದಲ್ಲಿರುವ ಶಿವಲಿಂಗ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿವಿಧ ಪೂಜೆಗಳು ನೆರವೇರಲಿವೆ. ಬೆಳಿಗ್ಗೆ 9.30ಕ್ಕೆ ವಿವಿಧ ಕಲಾ ತಂಡಗಳೊಂದಿಗೆ ಹಾರನಹಳ್ಳಿ ಪುರಪ್ರವೇಶ ಮಾಡಲಿರುವ ಶಿವಾನಂದ ಶಿವಯೋಗಿ ಸ್ವಾಮೀಜಿ ಭಕ್ತಾದಿಗಳಿಗೆ ದರ್ಶನ ನೀಡಲಿದ್ದು, ಪಾದಪೂಜೆ ಮತ್ತು ಭಿಕ್ಷಾಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಮಹದೇಶ್ವರ ಬೆಟ್ಟಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಲಿದ್ದಾರೆ. ಬೆಟ್ಟದಲ್ಲಿ ಗುಗ್ಗಳ ಸೇವೆ, ಹೆಜ್ಜೆ ನಮಸ್ಕಾರ, ದಿಂಡುರುಳು ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ. ಮಧ್ಯಾಹ್ನ ಜಂಗಮ ಪೂಜೆಯೊಂದಿಗೆ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮಗಳು ಸಂಜೆ 6 ಗಂಟೆಗೆ ಮಹಾ ಸಿಂಹಾಸನಾ ರೋಹಣದೊಂದಿಗೆ ವಿವಿಧ ಮಠಾಧೀಶರು, ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನೆರವೇರಲಿದೆ.
ಸುಕ್ಷೇತ್ರ ಕೋಡಿಮಠದಲ್ಲಿ 3 ದಿನಗಳ ಕಾಲ ವಿವಿಧ ಕ್ಷೇತ್ರಗಳ ಗಣ್ಯರು ಸಾಹಿತಿಗಳು ಸಾಧಕರು ಸುತ್ತಲಿನ ಭಕ್ತರು ಬರಲಿದ್ದು ಅನೇಕ ಮಹನೀಯರಿಗೆ ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಗುತ್ತದೆ.–ಚೇತನ್ ಮರಿದೇವರು, ಮಠದ ಉತ್ತರಾಧಿಕಾರಿ
ಸುಕ್ಷೇತ್ರ ಕೋಡಿಮಠದಲ್ಲಿ ನಡೆಯುವ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಗಣ್ಯರು ಬರುವ ನಿರೀಕ್ಷೆ ಇದ್ದು ಸಕಲ ವ್ಯವಸ್ಥೆಗಳು ಶ್ರೀಗಳ ಸಲಹೆಯಂತೆ ಮಾಡಿಕೊಳ್ಳಲಾಗುತ್ತಿದೆ.–ಸಿದ್ದೇಶ್ ನಾಗೇಂದ್ರ, ನಿತ್ಯ ದಾಸೋಹ ಸಮಿತಿ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.