
ಶ್ರವಣಬೆಳಗೊಳ: ಶ್ರವಣಬೆಳಗೊಳ ದಿಗಂಬರ ಜೈನ ಜ್ಞಾನ ಪ್ರಸಾರಕ ಸಂಘದ ಆಶ್ರಯದಲ್ಲಿ ಇಲ್ಲಿನ ಅಂಬಿಕಾ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಬುಧವಾರ ಆಚರಿಸಲಾಯಿತು.
ಮಕರ ಸಂಕ್ರಮಣದ ಪ್ರಯುಕ್ತ ಹೂವು, ಕಬ್ಬು, ವಿವಿಧ ಧಾನ್ಯಗಳೊಂದಿಗೆ ಅಂಬಿಕಾ ಶಾಲೆಯ ಸಮಾರಂಭದ ವೇದಿಕೆ ಅಲಂಕರಿಸಲಾಗಿತ್ತು. ಹಳ್ಳಿಯ ಸಂಸ್ಕೃತಿ ಸೊಗಡು ಎಲ್ಲೆಡೆ ಎದ್ದು ಕಾಣುತ್ತಿತ್ತು. ಪುಟಾಣಿ ಮಕ್ಕಳು ಹೊಸದಾದ ವಿವಿಧ ಬಟ್ಟೆಗಳನ್ನು ಧರಿಸಿದ್ದರು. ಮಕರ ಸಂಕ್ರಮಣದ ಪೂಜೆ ನೆರವೇರಿಸಿದ ಮುಖ್ಯ ಶಿಕ್ಷಕಿ ಸರೋಜಾ ಎಂ. ಶೆಟ್ಟಿ ಮಾತನಾಡಿ, ಜಗತ್ತನ್ನು ಬೆಳಗುವ ಸೂರ್ಯ ದಕ್ಷಿಣಾಯನದಿಂದ ದಿಕ್ಕು ಬದಲಿಸಿ ಉತ್ತರಾಯಣದಿಂದ ಹುಟ್ಟುತ್ತಾನೆ. ಇದನ್ನು ಭಾರತೀಯ ಸಂಸ್ಕೃತಿಯಲ್ಲಿ ಶುಭದಿನವೆಂದು ಪರಿಗಣಿಸುತ್ತಿದ್ದು, ಈ ಪ್ರಯುಕ್ತ ಮಕರ ಸಂಕ್ರಮಣ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಮಕರ ಸಂಕ್ರಮಣವು ನಮ್ಮ ಸಂಸ್ಕೃತಿಯ ಹೆಮ್ಮೆಯ ಪ್ರತೀಕ. ರೈತರು ತಾವು ಬೆಳೆದು ಧಾನ್ಯಗಳನ್ನು ಒಂದೆಡೆ ಸೇರಿಸಿ ಪೂಜೆ ಮಾಡುವ ಸಂಪದ್ಭರಿತ ದಿನ. ಉತ್ತರಾಯಣದ ಬಳಿಕ ಮನೆಗಳಲ್ಲಿ ಶುಭಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ಹಿರಿಯರು ಆಚರಿಸಿಕೊಂಡು ಬರುವ ಸಂಪ್ರದಾಯ, ಹಬ್ಬಗಳನ್ನು ಆಚರಿಸುವುದರೊಂದಿಗೆ ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಶಿಕ್ಷಕರು ಮಕ್ಕಳೊಂದಿಗೆ ಎಳ್ಳು–ಬೆಲ್ಲು ಹಂಚುವುದರೊಂದಿಗೆ ಪರಸ್ಪರ ಶುಭಾಶಯ ಕೋರಿದರು. ನಂತರ ಮಕ್ಕಳು ವಿವಿಧ ಹಾಡುಗಳಿಗೆ ನೃತ್ಯ ಮಾಡಿ, ಗಮನ ಸೆಳೆದರು. ಅಂಬಿಕಾ ಶಾಲೆಯ ಶಿಕ್ಷಕರು, ಸಹ ಎಲ್ಲ ಮಕ್ಕಳೊಂದಿಗೆ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.