ಹಾಸನ: ‘ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಆಡಳಿತ ಮಂಡಳಿ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಕರ್ನಾಟಕ ಸೊಸೈಟಿ ನೋಂದಣಿ ಕಾಯ್ದೆಯಡಿ ಅವಕಾಶವಿಲ್ಲ. ಹೀಗಾಗಿ ವಿರೋಧಿ ಬಣದ 10 ಮಂದಿ ನಿರ್ದೇಶಕರ ಗೊತ್ತುವಳಿ ತಿರಸ್ಕರಿಸಲಾಗಿದೆ’ ಎಂದು ಸಮಿತಿಯ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ತಿಳಿಸಿದರು.
ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇತ್ತೀಚೆಗೆ ಸಮಿತಿಯ 12 ನಿರ್ದೇಶಕರು ನನಗೆ ಪತ್ರ ಬರೆದು, ನೀವು ವಿಶ್ವಾಸ ಕಳೆದುಕೊಂಡಿದ್ದೀರಿ. 15 ದಿನಗಳೊಳಗೆ ಕಾರ್ಯಕಾರಿ ಸಮಿತಿ ಸಭೆ ಕರೆದು ವಿಶ್ವಾಸ ಮತ ಸಾಬೀತುಪಡಿಸುವಂತೆ ಕೋರಿದ್ದರು. ಹಾಗಾಗಿ ಸೋಮವಾರ ಸಾಮಾನ್ಯ ಸಭೆ ಕರೆದು ಚರ್ಚಿಸಲಾಗಿದ್ದು, ಕಾನೂನಾತ್ಮಕವಾಗಿ ನಮ್ಮ ಆಯ್ಕೆ ಊರ್ಜಿತವಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ 10 ಮಂದಿ ಸಹಿ ಹಾಕದೇ ಹೋಗಿದ್ದಾರೆ. ಅದನ್ನು ಸಭಾ ನಡುವಳಿ ಪುಸ್ತಕದಲ್ಲಿ ದಾಖಲಿಸಲಾಗಿದೆ’ ಎಂದರು.
‘ಸ್ವಹಿತಾಸಕ್ತಿಗಾಗಿ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಸಮಿತಿಯ ಮೂವರು ನಿರ್ದೇಶಕರನ್ನು ಅಮಾನತು ಮಾಡಲಾಗಿದೆ. ಅವರನ್ನೂ ಸೇರಿಸಿ ಸಭೆ ಮಾಡಲಾಗಿದೆ. ಇವರನ್ನು ಅಮಾನತು ಮಾಡಲು ನಮಗೆ ಅಧಿಕಾರ ಇದೆಯೋ ಇಲ್ಲವೋ ಎನ್ನುವುದು ನ್ಯಾಯಾಲಯದಲ್ಲಿ ತೀರ್ಮಾನವಾಗಲಿದೆ’ ಎಂದರು.
‘ಸೋಮವಾರದ ಸಭೆಯಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ಮಾತ್ರ ಚರ್ಚೆ ಆಗಬೇಕಿತ್ತು. ನಮ್ಮ ಸಂಸ್ಥೆಯು ಕರ್ನಾಟಕ ಸೊಸೈಟಿ ನೋಂದಣಿ ಕಾಯ್ದೆಯಡಿ ನೋಂದಣಿಯಾಗಿದೆ. ಸಹಕಾರ ಸಂಘದ ಕಾಯ್ದೆಯಡಿ ನೋಂದಣಿ ಆಗಿಲ್ಲ. ನಮ್ಮ ಸಂಸ್ಥೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಅವಕಾಶವಿಲ್ಲ ಎಂದು ಅವರೇ ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದರು.
‘ಮೂವರು ನಿರ್ದೇಶಕರ ಬಗ್ಗೆ 20ಕ್ಕೂ ಹೆಚ್ಚು ಮಂದಿ ದೂರು ನೀಡಿದ್ದರು. ನಿರ್ದೇಶಕರು ಬಾಡಿಗೆದಾರ ಆಗುವಂತಿಲ್ಲ ಎಂಬ ನಿಯಮವಿದೆ. ಆದರೆ ಸಮಿತಿಯ ನಿರ್ದೇಶಕ ಶ್ರೀಧರ್, ಬಾಡಿಗೆದಾರರಾಗಿದ್ದು, ಡಾ. ಅರವಿಂದ್ ತಮ್ಮ ಮಳಿಗೆಯನ್ನು ಒಳ ಬಾಡಿಗೆಗೆ ನೀಡಿದ್ದಾರೆ. ಸಮಿತಿಗೆ ಮಾಸಿಕ ₹ 750 ಬಾಡಿಗೆ ಪಾವತಿಸಿ, ಇನ್ನೊಬ್ಬರಿಗೆ ₹ 22 ಸಾವಿರಕ್ಕೆ ಬಾಡಿಗೆ ನೀಡಿದ್ದಾರೆ. ನಿರ್ದೇಶಕ ಶ್ರೀನಿವಾಸ್, ಜಿಆರ್‌ಆರ್ ಹೋಟೆಲ್ ಪ್ರಾರಂಭ ಆದಾಗಿನಿಂದ ಬಾಡಿಗೆಯನ್ನೂ ನೀಡಿಲ್ಲ’ ಎಂದು ಆರೋಪಿಸಿದರು.
‘ಮಳಿಗೆ ಬಾಡಿಗೆದಾರರಿಗೆ ಗುತ್ತಿಗೆ ಅವಧಿ ಮುಗಿದಿದ್ದು, ಮಳಿಗೆ ಖಾಲಿ ಮಾಡುವಂತೆ ನೋಟಿಸ್ ಕೊಡಲಾಗಿತ್ತು. ಅದರ ವಿರುದ್ಧ ಅವರು ನ್ಯಾಯಾಲಯದ ಮೆಟ್ಟಲೇರಿ 15 ವರ್ಷ ಆಗಿದೆ. ಪ್ರಸ್ತುತ ₹ 1.40 ಕೋಟಿ ಬಾಡಿಗೆ ಕೊಡಬೇಕಿದೆ’ ಎಂದರು.
‘ಅಮಾನತುಗೊಂಡಿರುವ ಮೂವರು ಸದಸ್ಯರನ್ನು ಹೊರತುಪಡಿಸಿ, 21 ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು. ನಾವು 11 ಮಂದಿ ಇದ್ದು, ಇನ್ನೊಂದು ಬಣದ 10 ಮಂದಿ ಬಂದಿದ್ದರು. ನಂತರ ಸಭಾ ನಡಾವಳಿ ಪುಸ್ತಕದಲ್ಲಿ ನಾವು 11 ಮಂದಿ ಸಹಿ ಹಾಕಿದ್ದು, ಅವರ‍್ಯಾರು ಸಹಿ ಮಾಡಿಲ್ಲ. ಆದ್ದರಿಂದ ನಡಾವಳಿ ಪುಸ್ತಕದಲ್ಲಿ ಬರೆದು ಅವಿಶ್ವಾಸ ತಿರಸ್ಕರಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
‘ನಾನು ಸಂಸ್ಥೆಯಲ್ಲಿ ಮೂರು ದಶಕದಿಂದ ಸೇವೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ಅಧ್ಯಕ್ಷ ಸ್ಥಾನದ ಚುನಾವಣೆಯನ್ನೇ ಅವರು ಪ್ರಶ್ನಿಸಿದ್ದಾರೆ. ಅವರ ವಾದದಂತೆ ನಾವು ಆಯ್ಕೆ ಆಗಿಲ್ಲ ಎಂದ ಮೇಲೆ, ನಮ್ಮ ಮೇಲೆ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
‘ನನಗೆ ಸದಸ್ಯರು ನಿರ್ದೇಶನ ನೀಡಿದ್ದರಿಂದ ಇಂದು ನಾನೇ ಸಭೆ ಕರೆದಿದ್ದೇನೆ. ಬೇರೆಯವರು ಕರೆದ ಸಭೆಯನ್ನು ನಾನು ನಡೆಸಲು ಬರುವುದಿಲ್ಲ. ವೀಕ್ಷಕರು ವರದಿ ಸಲ್ಲಿಸಲಿದ್ದಾರೆ. ಅವರು ಏನು ತೀರ್ಮಾನ ಮಾಡುತ್ತಾರೋ ನೋಡಬೇಕಿದೆ’ ಎಂದರು.
‘ಸಭೆ ಪ್ರಾರಂಭವಾದಾಗ ನೀವು ಅಧ್ಯಕ್ಷತೆ ವಹಿಸಲು ಸಾಧ್ಯವಿಲ್ಲ ಎಂದರು. ಆದರೆ ಅವಿಶ್ವಾಸ ಮಂಡಿಸಿ ಎಂದು ನಮಗೆ ನೋಟಿಸ್ ನೀಡಿದ್ದು ಅವರೇ. ಆದ್ದರಿಂದ ನಾನೇ ಸಭೆ ಕರೆಯಬೇಕು ಅಲ್ಲವೇ’ ಎಂದು ಪ್ರಶ್ನಿಸಿದರು.
ಪ್ರಧಾನ ಕಾರ್ಯದರ್ಶಿ ಜಗದೀಶ್ ಚೌಡವಳ್ಳಿ ಮಾತನಾಡಿ, ‘ಪಾರದರ್ಶಕವಾಗಿ ಚುನಾವಣೆ ನಡೆದು 15 ಮಂದಿ ಸಹಿ ಹಾಕಿ ನಾವು ಚುನಾಯಿತರಾಗಿದ್ದೇವೆ. ಇದನ್ನು ಪ್ರಶ್ನಿಸಿ ಸಮಿತಿಯ ನಿರ್ದೇಶಕ ಪ್ರಭಾಕರ್ ಅವರು ಐದನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಸೆಪ್ಟೆಂಬರ್ 22ರಂದು ವಿಚಾರಣೆ ಇದೆ. ಇಂತಹ ಸಂದರ್ಭದಲ್ಲಿ ಅವಿಶ್ವಾಸ ಮಂಡನೆಗೆ ಕೋರಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ’ ಎಂದರು.
ನಿರ್ದೇಶಕ ಜಿ.ಟಿ ಕುಮಾರ್, ‘ತಾವು ಮಾಡಿರುವ ಸಾಲ ತೀರಿಸುವುದಕ್ಕಾಗಿ ಅವರೊಂದಿಗೆ ಶಾಮೀಲಾಗಿದ್ದಾರೆ. ಆಡಳಿತ ಮಂಡಳಿ ಉಪಾಧ್ಯಕ್ಷ ಗುರುದೇವ್ ಸಹ ಎವಿಕೆ ಕಾಲೇಜಿನ ಕೆಲ ಕಾಮಗಾರಿ ಮಾಡುವ ಸಂಬಂಧ ₹ 4.50 ಕೋಟಿ ಅವ್ಯವಹಾರ ನಡೆಸಿದ್ದಾರೆ. ಈ ಸಂಬಂಧ ಲೋಕಾಯುಕ್ತ, ರಾಜ್ಯ ಸಹಕಾರ ಇಲಾಖೆ ನಿಬಂಧಕರಿಗೆ ಪತ್ರ ಬರೆಯಲಾಗಿದೆ. ಸಾರ್ವಜನಿಕರ ಹಿತಾಸಕ್ತಿಯಿಂದ ನೀವು ಅರ್ಜಿ ಸಲ್ಲಿಸಿದ್ದರೆ, ಇದಕ್ಕೆ ಸಂಬಂಧಪಟ್ಟಂತೆ ಅಗತ್ಯ ದಾಖಲಾತಿ ಒದಗಿಸುವಂತೆ ತಿಳಿಸಿದ್ದಾರೆ’ ಎಂದರು.
‘68 ವರ್ಷಗಳಿಂದ ಹಿಂದಿನ ಆಡಳಿತ ಮಂಡಳಿ ಪಾರದರ್ಶಕವಾಗಿ ನಡೆದಿಲ್ಲ.₹ 30 ಕೋಟಿಯಿಂದ ₹ 40 ಕೋಟಿ ಅವ್ಯವಹಾರ ನಡೆದಿದ್ದು, ಇದನ್ನು ಮರೆಮಾಚಲು ಈ ರೀತಿಯ ಬೆಳವಣಿಗೆ ನಡೆದಿದೆ’ ಎಂದು ಆರೋಪಿಸಿದರು.
ಸಮಿತಿ ನಿರ್ದೇಶಕರಾದ ಜಿ.ಎಲ್. ಮುದ್ದೇಗೌಡ, ಚೌಡವಳ್ಳಿ ಪುಟ್ಟರಾಜು, ಹೇಮಂತ್, ನಾಗರಾಜ್, ಶಂಕರ್, ರಾಜಶೇಖರ್, ಬಿ.ವಿ. ಶ್ರೀನಿವಾಸ್, ಇತರರು ಉಪಸ್ಥಿತರಿದ್ದರು.
ಅಧ್ಯಕ್ಷರೇ ಸಭೆ ಮಾಡುವಂತಿಲ್ಲ
‘ಸಮಿತಿಯ ಅಧ್ಯಕ್ಷರಾಗಿದ್ದವರೇ ಅವಿಶ್ವಾಸ ನಿರ್ಣಯ ಸಭೆ ನಡೆಸುವಂತಿಲ್ಲ. ಸಭೆಗೂ ಮುಂಚೆ ಮೂರು ನಿರ್ದೇಶಕರನ್ನು ಅಧ್ಯಕ್ಷರಾಗಲಿ ಪ್ರಧಾನ ಕಾರ್ಯದರ್ಶಿಗಳಾಗಲಿ ಅಮಾನತು ಮಾಡಲು ಬರುವುದಿಲ್ಲ.. ಅವರಿಗೆ ಶೋಕಾಸ್ ನೋಟಿಸ್ ಸಹ ನೀಡದೇ 15-20 ವರ್ಷದ ಹಿಂದಿನ ಇಲ್ಲಸಲ್ಲದ ಹಳೆಯ ಆರೋಪಗಳೊಂದಿಗೆ ಅಮಾನತು ಮಾಡಿರುವುದು ಸರಿಯಾದ ಕ್ರಮವಲ್ಲ’ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಹಿರಿಯ ನಿರ್ದೇಶಕ ಅಶೋಕ್ ಹಾರನಳ್ಳಿ ತಿಳಿಸಿದರು. ‘ಈ ನಡುವೆ ಸಭೆಯಲ್ಲಿ ನಾವು 13 ಮಂದಿ ಹಾಜರಿದ್ದು ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ಪ್ರಧಾನ ಕಾರ್ಯದರ್ಶಿ ಚೌಡಹಳ್ಳಿ ಜಗದೀಶ್ ಖಜಾಂಚಿ ಪಾರ್ಶ್ವನಾಥ ಅವರನ್ನು ಪದಚ್ಯುತಗೊಳಿಸಿ ಬಹುಮತದ ನಿರ್ಣಯ ಕೈಗೊಳ್ಳಲಾಗಿದೆ’ ಎಂದರು. ‘ನಂತರ ನಾವೆಲ್ಲ ಸಭೆ ಮಾಡಿ ಒಮ್ಮತದ ತೀರ್ಮಾನದಂತೆ ಸಮಿತಿಯ ಅಧ್ಯಕ್ಷರಾಗಿ ಬಿ.ಆರ್. ಗುರುದೇವ್ ಕಾರ್ಯದರ್ಶಿಯಾಗಿ ಜಿ.ಟಿ. ಕುಮಾರ್ ಖಜಾಂಚಿಯಾಗಿ ಶ್ರೀಧರ್ ಅವರನ್ನು ಆಯ್ಕೆ ಮಾಡಿ ಸಭಾ ನಡಾವಳಿ ಮಾಡಲಾಗಿದೆ. ವಿರೋಧ ಪಕ್ಷದಲ್ಲಿ 11 ಮಂದಿ ಇರುವ ಕುರಿತು ಪ್ರತ್ಯೇಕ ನಡಾವಳಿಗೆ ಬರೆದು ಈ ಸಂಬಂಧ ವೀಕ್ಷಕರಿಗೆ ನೀಡಲಾಗಿದೆ’ ಎಂದರು.
ಪದಚ್ಯುತಗೊಳಿಸಿದ್ದೇವೆ: ಗುರುದೇವ್
‘ಜಿ.ಆರ್. ಶ್ರೀನಿವಾಸ್ ಸೇರಿದಂತೆ 13 ಮಂದಿ ಅವಿಶ್ವಾಸ ನಿರ್ಣಯ ಕೈಗೊಂಡಿದ್ದು ಹಿಂದಿನ ಮಂಡಳಿ ಪದಚ್ಯುತಿಗೊಳಿಸಿದ್ದೇವೆ’ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ನೂತನ ಅಧ್ಯಕ್ಷ ಬಿ.ಆರ್. ಗುರುದೇವ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಆಗಸ್ಟ್ 23ರಂದು ನಾವೆಲ್ಲ ಸಭೆ ಸೇರಿ ಅವಿಶ್ವಾಸ ನಿರ್ಣಯದ ಕುರಿತು ಮಂಡನೆ ಮಾಡುವಂತೆ ತಿಳಿಸಲಾಗಿತ್ತು. ಅದರಂತೆ ಆ.29ರಂದು ಅವರೆಲ್ಲ ನಿರ್ಣಯ ಕೈಗೊಂಡು ಇಂದು ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ನಾವು ಕೋರಿದಂತೆ ಅವಿಶ್ವಾಸ ಮಂಡನೆ ಹೊರತಾಗಿ ಯಾವುದೇ ವಿಷಯಗಳು ಇರಲಿಲ್ಲ. ಅವಿಶ್ವಾಸ ಮಂಡನೆಗೆ ಅವರು ಅವಕಾಶವಿಲ್ಲ’ ಎಂದರು. ‘ಕೊನೆಗೆ ಸಭೆಯಲ್ಲಿ ಇದ್ದ ನಾವು 13 ಮಂದಿ ಕೈ ಎತ್ತುವ ಮೂಲಕ ಅವಿಶ್ವಾಸ ಮಂಡಿಸಿದ್ದು ಹೊಸದಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.