ADVERTISEMENT

ಮಂಡ್ಯವನ್ನು ಯಾರೂ ಮಂಗಳೂರು ಮಾಡಲ್ಲ: ಚಲುವರಾಯಸ್ವಾಮಿಗೆ ಸಿ.ಟಿ.ರವಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 13:38 IST
Last Updated 3 ಫೆಬ್ರುವರಿ 2024, 13:38 IST
 ಸಿ.ಟಿ.ರವಿ
ಸಿ.ಟಿ.ರವಿ   

ಹಾಸನ: ‘ಮಂಡ್ಯವನ್ನು ಯಾರೂ ಮಂಗಳೂರು ಮಾಡಲ್ಲ. ಮಂಡ್ಯ ಇಂಡಿಯಾದೊಳಗೆ ಇದೆ ಎನ್ನುವುದನ್ನು ನೆನಪಿಟ್ಟುಕೊಳ್ಳಲಿ. ಮಂಡ್ಯ ಪಾಕಿಸ್ತಾನದೊಳಗೆ ಇಲ್ಲ. ಮಂಡ್ಯ ಮಂಡ್ಯಾನೆ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್ -ಬಿಜೆಪಿ ಮಂಡ್ಯವನ್ನು ಮಂಗಳೂರು ಮಾಡಲು ಆಗಲ್ಲ’ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

‘ಯಾವ ರಾಜಕಾರಣ ನಡೆಯುತ್ತದೆ ಎಂಬುದನ್ನು ಅಂತ ಜನ ತೀರ್ಮಾನ ಮಾಡುತ್ತಾರೆ. ರಾಷ್ಟ್ರಧ್ವಜ ಎಲ್ಲಕ್ಕಿಂತ ಎತ್ತರದಲ್ಲಿರಬೇಕು. ಹನುಮ ಧ್ವಜ ತೆಗೆದು ರಾಷ್ಟ್ರ ಧ್ವಜ ಹಾರಿಸಬೇಕಿತ್ತಾ? ಇನ್ನೊಂದು ಧ್ವಜಸ್ತಂಭ ನೆಟ್ಟು, ಹನುಮ ಧ್ವಜಕ್ಕಿಂತ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಬೇಕಿತ್ತು’ ಎಂದು ಹೇಳಿದರು.

ADVERTISEMENT

‘ಮಂಡ್ಯದಲ್ಲಿರುವ ಹನುಮ ಭಕ್ತರು ಯಾರಿಗೂ ತಲೆತಗ್ಗಿಸಲ್ಲ. ತಲೆ ಎತ್ತಿಕೊಂಡು ಓಡಾಡುವವರು. ಹನುಮನಿಗಾಗಿ ಜೀವ ಕೊಡಲು ತಯಾರಾಗಿ ಇರುವವರು ಅವರು. ಮಂಡ್ಯವನ್ನು ಇನ್ನೇನೋ ಮಾಡುತ್ತೇವೆ ಎಂದು ಹೊರಡಬೇಡಿ’ ಎಂದರು.

‘ರಾಷ್ಟ್ರ ಒಡೆಯುವ ಮಾತನ್ನು ಡಿ.ಕೆ.ಸುರೇಶ್ ಹೇಳಿದರೆ, ಜಾತಿ- ಜಾತಿ ಒಡೆಯುವ ರಾಜಕಾರಣವನ್ನು ಸಿದ್ದರಾಮಯ್ಯ ಆದಿಯಾಗಿ ಮಾಡಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಅವರು ಅಪರೂಪಕ್ಕೊಮ್ಮೆ ಮನುಷ್ಯತ್ವ ಇರಬೇಕು ಎನ್ನುತ್ತಾರೆ. ಆದರೆ ಮಾಡುವುದೆಲ್ಲ ಜಾತಿ ರಾಜಕಾರಣ’ ಎಂದು ವಾಗ್ದಾಳಿ ನಡೆಸಿದರು.

‘ಎಲ್ಲ ಜಾತಿಯಲ್ಲೂ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಹಾಗಾದರೆ ಜಾತಿ ದ್ವೇಷ ಏಕೆ? ಜಾತಿ ದ್ವೇಷ, ಜಾತಿ ಒಡೆದು ರಾಜಕಾರಣ ಮಾಡುವುದು, ಭಾಷೆ ಹೆಸರಿನಲ್ಲಿ ರಾಜಕಾರಣ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಆ ಕಾಂಗ್ರೆಸ್ ಸಂಸ್ಕೃತಿಯನ್ನೇ ಡಿ.ಕೆ.ಸುರೇಶ್ ಹೇಳಿದ್ದಾರೆ’ ಎಂದರು.

‘ಹೈದರಾಬಾದ್ ನಿಜಾಮನ ಮನಸ್ಥಿತಿಯವರಂತೆ ಡಿ.ಕೆ.ಸುರೇಶ್, ಡಿ.ಕೆ. ಶಿವಕುಮಾರ್ ವರ್ತಿಸಬಾರದು. ಈ ರೀತಿ ವರ್ತಿಸಿದರೆ ನಿಜಾಮನನ್ನೇ ಬಗ್ಗು ಬಡಿದ ಸರ್ದಾರ್ ವಲ್ಲಭಭಾಯಿ ಪಟೇಲ್ ರೀತಿಯ ನೇತೃತ್ವ ಬಿಜೆಪಿಯಲ್ಲಿದೆ. ನಿಮ್ಮ ನಿಜಾಮಗಿರಿ ಇಲ್ಲಿ ನಡೆಯಲ್ಲ’ ಎಂದರು.

‘ಫೆ.7 ರಂದು ದೆಹಲಿಯಲ್ಲಿ ಅವರು ಪ್ರತಿಭಟನೆ ಮಾಡಲಿ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಅಂಕಿ-ಅಂಶಗಳನ್ನು ಮುಂದಿಟ್ಟು ಜನರಿಗೆ ಮನವರಿಕೆ ಮಾಡುತ್ತೇವೆ. ಅವರು ಹೇಳುವುದರಲ್ಲಿ ಎಷ್ಟು ಸತ್ಯ ಇದೆ, ಎಷ್ಟು ಸುಳ್ಳು ಎನ್ನುವುದನ್ನು ಜನರ ಮುಂದೆ ಇಡುತ್ತೇವೆ. ಇಲ್ಲಿ ಪ್ರತಿಭಟನೆ ಮಾಡಲು ಹಕ್ಕಿದೆ. ಆದರೆ ದೇಶ ಒಡೆಯುವ ಹಕ್ಕಿಲ್ಲ’ ಎಂದರು.

ಶೇ 40ಕ್ಕಿಂತ ಹೆಚ್ಚು ಕಮಿಷನ್‌

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಬಿ. ಶಿವರಾಂ ಶೇ 40 ಕಮಿಷನ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ‘ಈ ರಾಜ್ಯದ ಮಾಜಿ ಸಚಿವರೇ ಹೇಳಿದ ಮೇಲೆ ಇನ್ನೇನು ಬೇಕು. ಇದರಲ್ಲಿ ಯಾವುದೇ ಸಂಶಯವಿಲ್ಲ. ಶೇ 40 ಕ್ಕಿಂತ ಹೆಚ್ಚೇ ಇದೆ ಎಂದರು.

ಈಗ ಯಾವ ಮೂಲಾಜಿಲ್ಲ. ಎಲ್ಲ ಅಂಗಡಿ ಬಾಗಿಲು ತೆಗೆದುಕೊಂಡು ಕುಳಿತಿದ್ದಾರೆ. ಅಂಗಡಿ ಬಾಗಿಲು ಒಂದೇ ಲಾವ್, ಲಾವ್,(ತನ್ನಿ). ವಾಸ್ತವವನ್ನೇ ಶಿವರಾಂ ಹೇಳಿದ್ದು, ಸತ್ಯ ಹೇಳಲು ಹಿಂಜರಿಕೆ ಬೇಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.