ADVERTISEMENT

ಮೈಸೂರು ವಿವಿ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಮುಗಿದರೂ ಸಿಗದ ಅಂಕಪಟ್ಟಿ

ಡಿಜಿಲಾಕರ್‌, ಯಯುಸಿಎಂಎಸ್‌ನಿಂದ ಪಡೆಯಲು ಆದೇಶ: ವಿದ್ಯಾರ್ಥಿಗಳಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 5:16 IST
Last Updated 24 ಜನವರಿ 2025, 5:16 IST
   

ಹೊಳೆನರಸೀಪುರ: ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮುಗಿಸಿ ವರ್ಷಗಳೇ ಕಳೆದರೂ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರ ಸಿಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

‘ಕಾಲೇಜುಗಳಲ್ಲಿ ಈ ಬಗ್ಗೆ ವಿಚಾರಿಸಿದರೆ, ನಿಮ್ಮ ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಿ ಎನ್ನುತ್ತಾರೆ. ಆದರೆ ಗ್ರಾಮೀಣ ಪ್ರದೇಶ, ಹಲವು ತಾಲ್ಲೂಕು ಹಾಗೂ ಜಿಲ್ಲಾ ಕೆಂದ್ರದಲ್ಲೂ ಡಿಜಿಲಾಕರ್ ಮೂಲಕ ಅಂಕಪಟ್ಟಿ ತೆಗೆದುಕೊಳ್ಳಲು ಸಾಧ್ಯ ಆಗುತ್ತಿಲ್ಲ’ ಎಂದು ಅನೇಕ ವಿದ್ಯಾರ್ಥಿಗಳು ದೂರಿದ್ದಾರೆ.

‘ಅಂಕಪಟ್ಟಿ ಡಿಜಿಲಾಕರ್‌ನಲ್ಲಿ ಸಿಗದಿದ್ದರೆ, ಯುಯುಸಿಎಂಎಸ್ (ಯೂನಿಫೈಡ್‌ ಯುನಿವರ್ಸಿಟಿ ಅಂಡ್‌ ಕಾಲೇಜ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ) ಮೂಲಕ ಡೌನ್‌ಲೋಡ್ ಮಾಡಿಕೊಂಡು ಬಂದು, ಕಾಲೇಜಿನಲ್ಲಿ ಸೀಲ್ ಹಾಕಿಸಿಕೊಂಡು ಪ್ರಾಂಶುಪಾಲರ ಸಹಿ ಮಾಡಿಸಿಕೊಂಡರೆ ಸಾಕು ಎಂದು ಕಾಲೇಜಿನವರು ಹೇಳುತ್ತಾರೆ. ಆದರೆ ಬಿಇಡಿ ಸೇರಿದಂತೆ ಇನ್ನಿತರ ಕೆಲವು ಪದವಿಗಳಿಗೆ ಸೇರಲು ಹೋದರೆ, ಮೈಸೂರು ವಿಶ್ವವಿದ್ಯಾಲಯದ ಸೀಲು, ಸಹಿ ಹಾಕಿಸಿಕೊಂಡು ಬನ್ನಿ ಎನ್ನುತ್ತಿದ್ದಾರೆ. ನಾಲೈದು ಬಾರಿ ಅಲೆದಾಡಿದ ನಂತರ ಸಹಿ ಹಾಕಿಸಿಕೊಳ್ಳಲು ಸಾಧ್ಯವಾಯಿತು. ಓಡಾಟಕ್ಕೆ ಸಾವಿರಾರು ರೂಪಾಯಿ ಖರ್ಚಾಯಿತು’ ಎನ್ನುತ್ತಾರೆ ವಿದ್ಯಾರ್ಥಿಗಳು.

ADVERTISEMENT

‘ಕಷ್ಟಪಟ್ಟು ಮೂರು ವರ್ಷ ಓದಿ ಪದವಿ ಪೂರೈಸಿದ್ದೇವೆ. ಈಗ ಅಂಕಪಟ್ಟಿ ಪಡೆಯಲು ಇನ್ನಿಲ್ಲದ ಕಸರತ್ತು ಮಾಡಬೇಕಾಗಿದೆ. ಇಂತಹ ವ್ಯವಸ್ಥೆ ರೂಪಿಸುವ ಮುನ್ನ ಸರ್ಕಾರ, ವಿದ್ಯಾರ್ಥಿಗಳು, ತಜ್ಞರ ಅಭಿಪ್ರಾಯ ಪಡೆಯಬೇಕಿತ್ತು. ಮನಸ್ಸಿಗೆ ತೋಚಿದಂತೆ ನಿಯಮ ರೂಪಿಸಿದರೆ, ತೊಂದರೆ ಅನುಭವಿಸುವವರು ನಾವು’ ಎಂದು ವಿದ್ಯಾರ್ಥಿ ಸೋಮಶೇಖರ್‌ ಆಕ್ರೋಶ ವ್ಯಕ್ತಪಡಿಸಿದರು.

‘ಇಂತಹ ಅವ್ಯವಸ್ಥೆಯನ್ನು ಸರಿಪಡಿಸಬೇಕಾದ ಶಿಕ್ಷಣ ಇಲಾಖೆ 2021–2022 ರಿಂದ ಕಣ್ಣುಮುಚ್ಚಿ ಕುಳಿತಿದೆ. ಕುಲಾಧಿಪತಿಗಳಾದ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಬೇಕು. ವಿದ್ಯಾರ್ಥಿಗಳಿಗೆ ಅಂಕಪಟ್ಟಿ ದೊರಕುವಂತೆ ವ್ಯವಸ್ಥೆ ಮಾಡಲು ಆದೇಶಿಸಬೇಕು’ ಎಂದು ಪಾಲಕರು ಆಗ್ರಹಿಸಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮುಗಿಸಿ ವರ್ಷಗಳೇ ಕಳೆದರೂ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರ ಸಿಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಹೇಮಾ ನಾಗೇಂದ್ರ ವಾಸವಿ ಕ್ಲಬ್ ಅಧ್ಯಕ್ಷೆ
2021 ರಿಂದ ಅಂಕಪಟ್ಟಿಯನ್ನು ಡಿಜಿ ಲಾಕರ್ ಮೂಲಕ ತೆಗೆದುಕೊಳ್ಳಬೇಕು ಎನ್ನುವ ನಿಯಮ ಇದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎನ್ನುವುದನ್ನು ಒಪ್ಪುತ್ತೇನೆ.
ಗುರುಮೂರ್ತಿ, ಹೊಳೆನರಸೀಪುರ ಮಹಿಳಾ ಕಾಲೇಜಿನ ಪ್ರಾಂಶುಪಾಲ
ವಿಶ್ವವಿದ್ಯಾಲಯ ಒಳ್ಳೆಯ ಉದ್ದೇಶದಿಂದ ಈ ಯೋಜನೆ ಮಾಡಿದೆ. ಆದರೆ ತಕ್ಷಣಕ್ಕೆ ಇದು ಸಾಧ್ಯವಾಗುವಂತಹ ತಂತ್ರಜ್ಞಾನ ಅಳವಡಿಸಬೇಕು ಎಂಬುದು ನನ್ನ ಮನವಿ.
ಪ್ರೊ.ಜಿ.ಡಿ. ನಾರಾಯಣ್ ಹಳೇಬೀಡು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ
ಪದವಿ ಪೂರ್ಣಗೊಳಿಸಿದ ನಂತರ ತನ್ನ ರೋಲ್ ನಂಬರ್ ನಮೂದಿಸಿ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಿದ ನಂತರ ನಿಯಮ ಜಾರಿ ಮಾಡಬೇಕಿತ್ತು
ಪ್ರೊ. ಭುವನೇಂದ್ರ ಪಡುವಲಹಿಪ್ಪೆ ದೇವೇಗೌಡ ಸರ್ಕಾರಿ ಕಾಲೇಜು ಪ್ರಾಧ್ಯಾಪಕ
ಹಲವು ವರ್ಷಗಳಿಂದ ಪದವಿ ಅಂಕಪಟ್ಟಿಗಳನ್ನು ವಿಶ್ವವಿದ್ಯಾಲಯದಿಂದಲೇ ನೀಡಲಾಗುತ್ತಿತ್ತು. ಡಿಜಿಟಲ್ ವ್ಯವಸ್ಥೆ ರೂಪಿಸಿದ ನಂತರ ನಿಯಮ ಮಾಡಬೇಕಿತ್ತು
ಪೂರ್ಣಿಮಾ ಹೊಳೆನರಸೀಪುರ, ಸರ್ಕಾರಿ ಕಾಲೇಜು ಸಹ ಪ್ರಾಧ್ಯಾಪಕಿ

‘ಅಂಕಪಟ್ಟಿ ನೀಡುವ ಅಧಿಕಾರ ಇಲ್ಲ’

‘ವಿಶ್ವವಿದ್ಯಾಲಯ ಅಂಕಪಟ್ಟಿ ನೀಡಬಾರದು. ಅಂಕಪಟ್ಟಿಯನ್ನು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳೇ ತೆಗೆದುಕೊಳ್ಳಬೇಕು ಎನ್ನುವ ನಿಯಮವನ್ನು ರಾಜ್ಯ ಸರ್ಕಾರ ವಿಧಿಸಿದ್ದು ನಮಗೆ ಅಂಕಪಟ್ಟಿ ನೀಡುವ ಅಧಿಕಾರವೇ ಇಲ್ಲ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್ ಹೇಳುತ್ತಾರೆ. ‘ಡಿಜಿ ಲಾಕರ್ ಮೂಲಕ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಯುಯುಸಿಎಂಎಸ್ ಮೂಲಕ ಅಂಕಪಟ್ಟಿ ತಂದರೆ ಅದನ್ನು ನಮ್ಮ ವಿಶ್ವವಿದ್ಯಾಲಯದಲ್ಲಿ ತಕ್ಷಣ ದೃಢೀಕರಿಸಿಕೊಡಲು ವ್ಯವಸ್ಥೆ ಮಾಡುತ್ತೇನೆ. ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರ ನೀಡದಿದ್ದರೆ ತೊಂದರೆ ಆಗುತ್ತದೆ ಎನ್ನುವುದು ನನಗೂ ಗೊತ್ತಿದೆ. ಆದರೆ ಸರ್ಕಾರದ ಆದೇಶವನ್ನು ನಾವು ಮೀರುವಂತಿಲ್ಲ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.